ಚೂಪಾದ ಮರದ ತುಂಡು ತುಳಿದು 'ಅರ್ಜುನ'ನಿಗೆ ಗಾಯವಾಗಿತ್ತೇ ಹೊರತು ಗುಂಡೇಟಿನಿಂದಲ್ಲ: ಅರಣ್ಯ ಇಲಾಖೆ ಸ್ಪಷ್ಟನೆ

ವಿಶೇಷ ಕಾರ್ಯಾಚರಣೆ ವೇಳೆ ಭೀಕರ ಕಾಳಗದಲ್ಲಿ ದಸರಾ ಹಬ್ಬ ಖ್ಯಾತಿಯ ಅರ್ಜುನ ಆನೆ ಮೃತಪಟ್ಟಿದ್ದು ಅದರ ಮಾವುತ ವಿನು ರೋದಿಸಿದ್ದು ಎಂಥವರ ಮನಕಲಕುವಂತಿತ್ತು.
ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಅರ್ಜುನನ ಅಂತ್ಯಕ್ರಿಯೆ
ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಅರ್ಜುನನ ಅಂತ್ಯಕ್ರಿಯೆ

ಹಾಸನ: ವಿಶೇಷ ಕಾರ್ಯಾಚರಣೆ ವೇಳೆ ಭೀಕರ ಕಾಳಗದಲ್ಲಿ ದಸರಾ ಹಬ್ಬ ಖ್ಯಾತಿಯ ಅರ್ಜುನ ಆನೆ ಮೃತಪಟ್ಟಿದ್ದು ಅದರ ಮಾವುತ ವಿನು ರೋದಿಸಿದ್ದು ಎಂಥವರ ಮನಕಲಕುವಂತಿತ್ತು.

ಅರ್ಜುನ ಆನೆ ಕಾಳಗದ ವೇಳೆ ಅರಣ್ಯಾಧಿಕಾರಿಗಳ ತಪ್ಪಾದ ಗುಂಡೇಟಿಗೆ ಬಲಿಯಾಗಿದೆ ಎಂಬ ಆರೋಪ ಎಲ್ಲೆಡೆ ಕೇಳಿಬಂದಿತ್ತು. ಆದರೆ, ಅರಣ್ಯ ಇಲಾಖೆಯು ಈ ಆರೋಪವನ್ನು ಅಲ್ಲಗಳೆದಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಒಂಟಿ ಕಾಡಾನೆ ಸೆರೆ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದ ನಾನು ಅದಕ್ಕೆ ರೇಡಿಯೊ ಕಾಲರ್‌ಗಳನ್ನು ಸರಿಪಡಿಸುತ್ತಿದ್ದ ವೇಳೆ ಅರ್ಜುನನ ಬಲಭಾಗ ದೊಡ್ಡ ಗಾಯವಾಗಿದ್ದು ತೀವ್ರ ನೋವಿನಿಂದ ಬಳಲುತ್ತಿದ್ದುದನ್ನು ಗಮನಿಸಿದ್ದೆ ಎಂದು ಹೇಳಿದ್ದಾರೆ. 

ಕಾಡಾನೆಯೊಂದಿಗೆ ಕಾದಾಡುವಾಗ ಚೂಪಾದ ಮರದ ತುಂಡನ್ನು ತುಳಿದು ಆನೆ ಗಾಯಗೊಂಡಿದೆ. ನಿರಂತರವಾಗಿ ರಕ್ತಸ್ರಾವವಾಗುತ್ತಿದ್ದರೂ ಅದು ತೀವ್ರವಾಗಿ ಹೋರಾಡುತ್ತಿತ್ತು. ಕಾರ್ಯಾಚರಣೆಯ ಸಮಯದಲ್ಲಿ ತಪ್ಪಾಗಿ ಗುಂಡೇಟು ಬಿದ್ದು ಅರ್ಜುನ ಆನೆ ಗಾಯಗೊಂಡು ಮೃತಪಟ್ಟಿದ್ದಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಾಚರಣೆ ವೇಳೆ ಅರಣ್ಯ ಅಧಿಕಾರಿಯೊಬ್ಬರು ದೂರದಲ್ಲಿ ನಿಂತು, ಕಾಡಾನೆಯನ್ನು ಭಯಪಡಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು, ಆಗ ಅರ್ಜುನ ಆನೆ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿತು ಎನ್ನುತ್ತಾರೆ. 

ಇಂತಹ ಕಾರ್ಯಾಚರಣೆಯ ವೇಳೆ ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಡಬಲ್ ಬ್ಯಾರಲ್ ಗನ್ ನ್ನು ಮಾತ್ರ ಕೊಂಡೊಯ್ಯುತ್ತಾರೆ. ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಅರ್ಜುನನ ದೇಹದ ಯಾವುದೇ ಭಾಗದಲ್ಲಿ ಮದ್ದುಗುಂಡಿನ ಗಾಯಗಳು ವೈದ್ಯರಿಗೆ ಕಂಡುಬಂದಿಲ್ಲ ಎಂದು ಹೇಳಿದರು.

ಕ್ರಮಕ್ಕೆ ಆಗ್ರಹ: ಅರ್ಜುನನ ಮಾವುತ ವಿನು ನೀಡಿದ್ದ ಹೇಳಿಕೆಯ ನಂತರ ಕಾಡಾನೆಯೊಂದಿಗೆ ಕಾಳಗದ ವೇಳೆ ಅರಣ್ಯಾಧಿಕಾರಿಗಳ ಗುಂಡೇಟಿಗೆ ತೀವ್ರ ಗೊಯಗೊಂಡು ಮೃತಪಟ್ಟಿದೆ ಎಂದು ಪ್ರಾಣಿ ಪ್ರೇಮಿಗಳು ಆರೋಪಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com