ನನ್ನ ಮಗ ಪುಸ್ತಕದ ಹುಳು, ಸಮಾಜದ ಒಳಿತಿನ ಬಗ್ಗೆ ಸದಾ ಚಿಂತಿಸುತ್ತಿದ್ದ; ನನಗೆ ಆಘಾತವಾಗಿದೆ, ಆತ ತಪ್ಪು ಮಾಡಿದ್ದರೇ ಗಲ್ಲಿಗೇರಿಸಿ!

ಪಾರ್ಲಿಮೆಂಟ್‌ನಲ್ಲಿ  ಸ್ಮೋಕ್ ಬಾಂಬ್ ಹಾಕಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಮನೋರಂಜನ್ ಅವರ ತಂದೆ ದೇವರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗ ಯಾವಾಗಲೂ ಸಮಾಜದ ಒಳಿತಿನ ಬಗ್ಗೆ ಚಿಂತನೆ ಮಾಡುತ್ತಿದ್ದ ಎಂದು ಹೇಳಿಕೆ ನೀಡಿದ್ದಾರೆ.
ಮನೋರಂಜನ್ ತಂದೆ ದೇವರಾಜ್
ಮನೋರಂಜನ್ ತಂದೆ ದೇವರಾಜ್

ಮೈಸೂರು: ಪಾರ್ಲಿಮೆಂಟ್‌ನಲ್ಲಿ  ಸ್ಮೋಕ್ ಬಾಂಬ್ ಹಾಕಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಮನೋರಂಜನ್ ಅವರ ತಂದೆ ದೇವರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗ ಯಾವಾಗಲೂ ಸಮಾಜದ ಒಳಿತಿನ ಬಗ್ಗೆ ಚಿಂತನೆ ಮಾಡುತ್ತಿದ್ದ ಎಂದು ಹೇಳಿಕೆ ನೀಡಿದ್ದಾರೆ.

34 ವರ್ಷದ ಮನೋರಂಜನ್ ಡಿ, ಎಂಜಿನಿಯರಿಂಗ್ ಪದವೀಧರರಾಗಿದ್ದು, ಮೈಸೂರಿನ ವಿಜಯನಗರ ಮೂಲದವರು. ಮನೋರಂಜನ್ ಮತ್ತು ಮತ್ತೋರ್ವ ಆರೋಪಿ ಸಾಗರ್ ಶರ್ಮಾ ಅವರು ಸಂಸತ್  ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ತೆಗೆದುಕೊಂಡಿದ್ದಾರೆ.

ಈ ಘಟನೆ ನನಗೆ ಆಘಾತ ತಂದಿದೆ. ನನ್ನ ಮಗ ಬೆಂಗಳೂರಿಗೆ ಹೋಗುತ್ತಿರುವುದಾಗಿ ಹೇಳಿದ್ದ. ಆತ ದೆಹಲಿಗೆ ಹೋಗಿರುವುದು ನನಗೆ ತಿಳಿದಿರಲಿಲ್ಲ ಎಂದು ಮನೋರಂಜನ್ ತಂದೆ ದೇವರಾಜೇಗೌಡ ಅಲಿಯಾಸ್ ದೇವರಾಜ್ ಹೇಳಿದ್ದಾರೆ.

ಮನೋರಂಜನ್ ಮಾಡಿರುವ ಕೃತ್ಯವನ್ನು  ಖಂಡಿಸಿದ ಅವರು, ನನ್ನ ಮಗ ನಿರಪರಾಧಿ ಮತ್ತು ಯಾವುದೇ ಸಂಘಟನೆ ಅಥವಾ ಸಮಾಜ ವಿರೋಧಿಗಳೊಂದಿಗೆ ಸಂಬಂಧ ಹೊಂದಿಲ್ಲ. ಆತ ಪುಸ್ತಕದ ಹುಳು  ಯಾವಾಗಲೂ ಪುಸ್ತಕಗಳನ್ನು ಓದುವುದರಲ್ಲಿ ತಲ್ಲೀನನಾಗುತ್ತಿದ್ದ, ವಿಶೇಷವಾಗಿ ಭಾರತೀಯ ಆಧ್ಯಾತ್ಮಿಕ ನಾಯಕರ ಪುಸ್ತಕ ಓದುತ್ತಿದ್ದ, ಸ್ವಂತವಾಗಿ ಏನಾದರೂ ಮಾಡಬೇಕೆಂದು ಬಯಸಿದ್ದ ಎಂದು ದೇವರಾಜ್ ತಿಳಿಸಿದ್ದಾರೆ.

ಮನೋರಂಜನ್ ಯಾವಾಗಲೂ ಬಡ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡಲು ಸ್ವಯಂಪ್ರೇರಿತರಾಗಿ ಕೆಲಸ ಮಾಡುತ್ತಿದ್ದ. ಮನೋರಂಜನ್ ಕೂಡ ಕೃಷಿಯಲ್ಲಿ ಆಸಕ್ತಿ ಹೊಂದಿದ್ದು, ಕೃಷಿಗೆ ನೆರವಾಗಿದ್ದ. "ನಾನು ಅವನನ್ನು ಮದುವೆಯಾಗಲು ಕೇಳಿದೆ, ಆದರೆ ಮದುವೆಗೆ ಯಾವುದೇ ಆಸಕ್ತಿ ತೋರಲಿಲ್ಲ ಎಂದು ಅವರು ಹೇಳಿದರು.

ತಮ್ಮ ಮಗ  ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ನಿಕಟ ಒಡನಾಟ ಹೊಂದಿದ್ದ ಎಂದು ದೇವರಾಜ್ ಹೇಳಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಸಂಸದರು ಪಾಸ್‌ ನೀಡಿರಬಹುದು. ದೆಹಲಿ ಘಟನೆಯನ್ನು ಖಂಡಿಸಿದ ದೇವರಾಜ್, ತನ್ನ ಮಗ ತಪ್ಪಿತಸ್ಥನೆಂದು ಸಾಬೀತಾದರೆ ಗಲ್ಲಿಗೇರಿಸಬೇಕು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com