ಸಂಸತ್ತು ಭದ್ರತೆ ಲೋಪ: ಆರೋಪಿ ಮನೋರಂಜನ್ ಮೈಸೂರು ನಿವಾಸಕ್ಕೆ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ಭೇಟಿ, ತಪಾಸಣೆ

ಲೋಕಸಭೆಯಲ್ಲಿ  ಭದ್ರತಾ ಲೋಪ ಪ್ರಕರಣದ ಆರೋಪಿ ಯುವಕ ಮನೋರಂಜನ್ ನ ಮೈಸೂರಿನ ವಿಜಯನಗರದಲ್ಲಿರುವ ಮನೆಗೆ ಕೇಂದ್ರ ಗುಪ್ತಚರ ಮತ್ತು ಆಂತರಿಕ ಭದ್ರತೆ ಅಧಿಕಾರಿಗಳ ತಂಡ ನಿನ್ನೆ ಗುರುವಾರ ಭೇಟಿ ನೀಡಿದೆ ತಪಾಸಣೆ ನಡೆಸಿದೆ. 
ಆರೋಪಿ ಮನೋರಂಜನ್
ಆರೋಪಿ ಮನೋರಂಜನ್
Updated on

ಮೈಸೂರು: ಲೋಕಸಭೆಯಲ್ಲಿ  ಭದ್ರತಾ ಲೋಪ ಪ್ರಕರಣದ ಆರೋಪಿ ಯುವಕ ಮನೋರಂಜನ್ ನ ಮೈಸೂರಿನ ವಿಜಯನಗರದಲ್ಲಿರುವ ಮನೆಗೆ ಕೇಂದ್ರ ಗುಪ್ತಚರ ಮತ್ತು ಆಂತರಿಕ ಭದ್ರತೆ ಅಧಿಕಾರಿಗಳ ತಂಡ ನಿನ್ನೆ ಗುರುವಾರ ಭೇಟಿ ನೀಡಿದೆ ತಪಾಸಣೆ ನಡೆಸಿದೆ. 

ಕೇಂದ್ರ ಗುಪ್ತಚರ ಇಲಾಖೆಯ ಉಪನಿರ್ದೇಶಕ ಪ್ರವೀಣ್ ನೇತೃತ್ವದ ತಂಡ ಮನೋರಂಜನ್ ಪೋಷಕರೊಂದಿಗೆ ಮಾತನಾಡಿ ಆತನ ಕೊಠಡಿಯನ್ನು ಶೋಧಿಸಿದೆ. ನಂತರ ಮನೋರಂಜನ್ ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದರು. ಮನೋರಂಜನ್ ಸಂಪರ್ಕ ಹೊಂದಿರುವ ಸ್ನೇಹಿತರು ಮತ್ತು ಇತರರ ಬಗ್ಗೆ ವಿಚಾರಿಸಿದರು.

ಮನೆಯ ಸುತ್ತ ಬಿಗಿ ಭದ್ರತೆ ಮಾಡಲಾಗಿದ್ದು, ಯಾರಿಗೂ ಒಳಗೆ ಪ್ರವೇಶವಿಲ್ಲ. ಮನೋರಂಜನ್ ಮೈಸೂರಿನಲ್ಲಿರುವ ತನ್ನ ಎಲ್ಲ ಸ್ನೇಹಿತರ ಸಂಪರ್ಕ ಕಡಿತಗೊಳಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಮೂಲಗಳ ಪ್ರಕಾರ, ಪ್ರಕರಣದ ಮತ್ತೊಬ್ಬ ಆರೋಪಿ ಲಕ್ನೋದ ಸಾಗರ್ ಶರ್ಮಾ ಕಳೆದ ಮೇ ತಿಂಗಳಲ್ಲಿ ಮನೋರಂಜನ್ ಮನೆಗೆ ಎರಡು ಬಾರಿ ಊಟಕ್ಕೆ ಬಂದಿದ್ದನು ಎಂದು ತಿಳಿದುಬಂದಿದೆ. 

ಬಾಕ್ಸರ್ ಆಗಿದ್ದ ಮನೋರಂಜನ್ ತನ್ನ ನೆರೆಹೊರೆಯ ಮಕ್ಕಳಿಗೆ ತರಬೇತಿ ನೀಡುತ್ತಿದ್ದ. ಮನೋರಂಜನ್ ತನ್ನ ಮಗನಿಗೆ ಬಾಕ್ಸಿಂಗ್ ಕಲಿಸಿದ ಎಂದು ಆತನ ನೆರೆಮನೆಯ ಆಕಾಶ್ ಹೇಳುತ್ತಾರೆ. ಮನೋರಂಜನ್ ಯಾವತ್ತೂ ಮೊಬೈಲ್ ತೆಗೆದುಕೊಂಡು ಹೋಗುತ್ತಿರಲಿಲ್ಲ. ಮನೋರಂಜನ್ ಮೈಸೂರಿನಲ್ಲಿ ನಡೆದ ಯಾವುದೇ ಆಂದೋಲನಗಳಲ್ಲಿ ಭಾಗವಹಿಸಿಲ್ಲ ಮತ್ತು ಆತನ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಎಂದು ಆಕಾಶ್ ಹೇಳಿದರು.

ಮನೋರಂಜನ್ ತಂದೆ ದೇವರಾಜೇಗೌಡ ಅವರು ಸಂಸದ ಪ್ರತಾಪ್ ಸಿಂಹ ಅವರಿಗೆ ನಿಕಟವರ್ತಿಯಾಗಿದ್ದು ದೆಹಲಿಯಲ್ಲಿ ಸಂಸತ್ ಕಲಾಪಕ್ಕೆ ಹಾಜರಾಗಲು ಪಾಸ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮನೋರಂಜನ್ ಅವರು ಸಂಸದರ ಕಚೇರಿಯಿಂದ ಸಂದರ್ಶಕರ ಪಾಸ್ ಪಡೆದು ಈ ಹಿಂದೆ ಹಳೆಯ ಸಂಸತ್ ಕಟ್ಟಡಕ್ಕೆ ಏಕಾಂಗಿಯಾಗಿ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ದೇವರಾಜೇಗೌಡರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ತಾನು ಮತ್ತು ತಮ್ಮ ಪತ್ನಿಗೆ ಏನೂ ಹೇಳಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದೇವೆ. ಇನ್ನು ಮುಂದೆ ತೊಂದರೆ ಕೊಡಬೇಡಿ. ತಮ್ಮ ಪತ್ನಿ ಹೃದ್ರೋಗಿಯಾಗಿದ್ದು, ಈಗ ಆಕೆ ತೀವ್ರ ಒತ್ತಡದಲ್ಲಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಸಂಸದರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ ಆಗ್ರಹ: ಲೋಕಸಭೆಯ ಭದ್ರತೆಯನ್ನು ಉಲ್ಲಂಘಿಸಿದ ವ್ಯಕ್ತಿಗಳಿಗೆ ಪಾಸ್ ನೀಡಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ. ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಎಂಎಲ್ಸಿ ರಮೇಶ್ ಬಾಬು, ಪೂರ್ವಾಪರ ಪರಿಶೀಲಿಸದೆ ಜನರಿಗೆ ಪಾಸ್ ನೀಡಿರುವ ಬಿಜೆಪಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಾನು ಸಹ ಅನೇಕ ಮಂದಿಗೆ ಪಾಸ್ ನೀಡಿದ್ದೇನೆ. ಪರಿಚಿತ ವ್ಯಕ್ತಿಗಳಿಗೆ ಮತ್ತು ನಮ್ಮ ಕ್ಷೇತ್ರಗಳಿಂದ ಬರುವವರಿಗೆ ಪಾಸ್‌ಗಳನ್ನು ನೀಡಲಾಗುತ್ತದೆ. ಪ್ರತಾಪ್ ಸಿಂಹ ಕೇವಲ ಮೈಸೂರಿನ ವ್ಯಕ್ತಿಗೆ ಮಾತ್ರವಲ್ಲದೆ ಲಕ್ನೋ ಮತ್ತು ಇತರ ಸ್ಥಳಗಳಿಗೂ ಪಾಸ್‌ಗಳನ್ನು ನೀಡಿದ್ದಾರೆ ಎಂದು ಉಗ್ರಪ್ಪ ಆರೋಪಿಸಿದರು. ಲೋಕಸಭೆ ಸ್ಪೀಕರ್ ಬಿಜೆಪಿ ಸಂಸದರನ್ನು ಸಹ ಅಮಾನತು ಮಾಡಬೇಕು ಎಂದು ರಮೇಶ್ ಬಾಬು ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com