ಕೃಷ್ಣ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಒಂದು ಪೈಸೆ ಬಿಡುಗಡೆಯಾಗಿಲ್ಲ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಕೃಷ್ಣ ಮೇಲ್ದಂಡೆಗೆ 5,300 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಘೋಷಿಸಲಾಗಿದೆ. ಆದರೆ ಇವತ್ತಿನವರೆಗೆ ಒಂದು ಪೈಸೆ ಬಿಡುಗಡೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಳಗಾವಿ: ಕೃಷ್ಣ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಘೋಷಿಸಲಾಗಿದೆ. ಆದರೆ ಇವತ್ತಿನವರೆಗೆ ಒಂದು ಪೈಸೆ ಬಿಡುಗಡೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿಂದು ಉತ್ತರ ಕರ್ನಾಟಕದ ಅಭಿವೃದ್ಧಿ ಕಾರ್ಯಗಳ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಕೃಷ್ಣ ಮೇಲ್ದಂಡೆಗೆ 21 ಸಾವಿರ ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಪಟ್ಟಿಯಾಗಿದ್ದು, 5,300 ಕೋಟಿ ರೂ. ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಘೋಷಣೆಯಾಗಿದೆ. ಆದರೆ, ಇವತ್ತಿನವರೆಗೆ ಒಂದು ಪೈಸೆ ಬಿಡುಗಡೆಯಾಗಿಲ್ಲ. ನಾವು ಅಧಿಸೂಚನೆ ಆಗುವವರೆಗೆ ಪುನರ್ವಸತಿ ಮತ್ತು ಪುನಶ್ಚೇತನ ಕಾರ್ಯವನ್ನು ಕೈಗೊಳ್ಳುತ್ತೇವೆ. ನಾವು ಅತಿ, ಅತ್ಯಂತ, ಹಿಂದುಳಿದ ತಾಲ್ಲೂಕುಗಳನ್ನು ಅಭಿವೃದ್ಧಿ ಮಾಡಲು ಬದ್ಧರಿದ್ದೇವೆ ಎಂದರು. 

ನೀರಾವರಿ ಕೃಷ್ಣಾ ಭಾಗ್ಯ ಜಲ ನಿಗಮ 3ನೇ ಹಂತದಲ್ಲಿ 130 ಟಿಎಂಸಿ ನೀರು ಬಳಸಬೇಕು ಎಂಬ ಆದೇಶವಿದ್ದರೂ, ಅಫಿಡವಿಟ್ ಹಾಕಿಲ್ಲ. 2ನೇ ಟ್ರಿಬ್ಯುನಲ್ ಬ್ರಿಜೇಶ್ ಕುಮಾರ್ ವರದಿ ಕೊಟ್ಟು 13 ವರ್ಷಗಳಾಯಿತು. 13 ವರ್ಷಗಳಿಂದ ಗೆಜೆಟ್ ಅಧಿಸೂಚನೆ ಆಗಿಲ್ಲ. ಇದು ಆಗದೇ ಆಲಮಟ್ಟಿ ಜಲಾಶಯದ ಎತ್ತರವನ್ನು 524  ಮೀಟರ್ ಗೆ ಏರಿಸಲಾಗುವುದಿಲ್ಲ. ಈ ಬಗ್ಗೆ ಒತ್ತಾಯಿಸಲು ಸರ್ವ ಪಕ್ಷ ನಿಯೋಗ ಕರೆದೊಯ್ಯಲು ನಾವು ಸಿದ್ದರಿದ್ದೇವೆ. ಆದರೆ ಪ್ರಧಾನಿಗಳು ಭೇಟಿಗೆ ಅವಕಾಶವನ್ನೇ ನೀಡುವುದಿಲ್ಲ. ಮತ್ತೊಂದೆಡೆ ಕೇಂದ್ರ ಹಣಕಾಸು ಮಂತ್ರಿಗಳು ಕರ್ನಾಟಕಕ್ಕೆ ಯಾವುದೇ ಅನುದಾನ ಬಾಕಿ ಇಲ್ಲ ಅಂತಾ ಹೇಳುವುದಾಗಿ ಸದನಕ್ಕೆ ಮುಖ್ಯಮಂತ್ರಿ ತಿಳಿಸಿದರು.

ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಮತ್ತು ತೀರುವಳಿಗಳನ್ನು ಪಡೆಯಲು ಸರ್ವ ಪಕ್ಷ ನಿಯೋಗ ಕೊಂಡೊಯ್ಯಲು ಸರ್ಕಾರ ಸಿದ್ಧವಿದೆ. ಕೇಂದ್ರದ ಮೇಲೆ ಒತ್ತಡ ಹಾಕಿ ತೀರುವಳಿಗಳನ್ನು ಕೊಡಿಸಿದರೆ ತಕ್ಷಣವೇ ಕಾಮಗಾರಿಗಳ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.  ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಅರಣ್ಯ ಮತ್ತು ಪರಿಸರದ ತೀರುವಳಿಯಾಗಬೇಕು. ಅವರು ಕೊಟ್ಟ ತಕ್ಷಣ ನಾವು ಕೆಲಸ ಪ್ರಾರಂಭ ಮಾಡುತ್ತೇವೆ. ಮಹದಾಯಿ, ಕೃಷ್ಣಾ ಮೇಲ್ದಂಡೆಗೂ ಸರ್ವ ಪಕ್ಷ ನಿಯೋಗ ಕರೆದೊಯ್ಯಲು ನಾವು ಸಿದ್ದರಿದ್ದೇವೆ ಎಂದರು. 

ಮೇಕೆದಾಟು ಯೋಜನೆಯು ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಮಾಡುವ ಸಲುವಾಗಿ ರೂಪಿಸಿರುವ ಯೋಜನೆ. ಅಣೆಕಟ್ಟು, ಬ್ಯಾಲೆಲ್ಸಿಂಗ್ ರಿಸರ್ವಾಯರ್. ಕರ್ನಾಟಕದ ವ್ಯಾಪ್ತಿಯಲ್ಲಿಯೇ ನಿರ್ಮಿಸುವುದು. ಇದರಿಂದ ತಮಿಳುನಾಡಿಗೆ ಏನೂ ಹಾನಿಯಿಲ್ಲ. ಬದಲಿಗೆ ಅನುಕೂಲವಾಗುತ್ತದೆ. ತಮಿಳುನಾಡು, ಕೇರಳ, ಆಂಧ್ರದ ಜೊತೆ ಮಾತುಕತೆ ವಿಫಲವಾಗಿ ನ್ಯಾಯಮಂಡಳಿಯು 193 ಟಿಎಂಸಿ ನೀರು ಕೊಡಬೇಕು ಎಂದು ತೀರ್ಪು ನೀಡಿತ್ತು. ನಂತರ 177.25 ಟಿಎಂಸಿ ಯನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com