ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಅವರಿಗೆ ಶಿಕ್ಷೆ ಕೊಡಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ. ಇದೊಂದು ಅಮಾನವೀಯ ಘಟನೆಯಾಗಿದ್ದು, ನಾಗರಿಕ ಸಮಾಜದಲ್ಲಿ ಇಂತಹ ಘಟನೆ ನಡೆಯಬಾರದು. ಇಂತಹ ಘಟನೆಗಳು ಇಂದಿನ ಕಾಲದಲ್ಲಿಯೂ ನಡೆದರು ಸಹಿಸಲು ಸಾಧ್ಯವಿಲ್ಲ, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ನಿವಾಸಕ್ಕೆ ಅವರ 68ನೇ ಹುಟ್ಟುಹಬ್ಬ ಪ್ರಯುಕ್ತ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ಬಿಜೆಪಿಯವರು ಈ ಪ್ರಕರಣವನ್ನು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಪ್ರಕರಣ ಗೊತ್ತಾದ ತಕ್ಷಣವೇ ಗೃಹ ಸಚಿವರು ಮಹಿಳೆಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಎಲ್ಲಿ ಸರ್ಕಾರ ಫೇಲ್ ಆಗಿದೆ ಎಂದು ಪ್ರಶ್ನಿಸಿದರು.
ಉತ್ತರ ಪ್ರದೇಶದಲ್ಲಿ ಶಾಸಕ 9 ವರ್ಷದ ಹುಡುಗಿ ಮೇಲೆ ರೇಪ್ ಮಾಡಿ ಜೈಲು ಸೇರಿದ್ದಾನೆ. ಇದಕ್ಕೆ ಜೆಪಿ ನಡ್ಡಾ ಮತ್ತು ಬಿಜೆಪಿ ನಾಯಕರು ಏನು ಹೇಳತ್ತಾರೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಇಂತಹ ಎಂಎಲ್ಎ ಇಟ್ಟುಕೊಂಡು ಹೆಣ್ಣುಮಕ್ಕಳು ಮೇಲೆ ದೌರ್ಜನ್ಯ ಮಾಡುವ ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡಲು ಏನು ನೈತಿಕತೆಯಿದೆ ಎಂದು ಪ್ರಶ್ನಿಸಿದರು.
ಯಾರ ಕಾಲದಲ್ಲಿ ಎಷ್ಟು ಪ್ರಕರಣ ಆಗಿವೆ ಅಂತ ನ್ಯಾಷನಲ್ ಕ್ರೈಂ ಬ್ಯೂರೋ ಅವರ ವರದಿ ನೋಡಲಿ. ಯಾರ ಮೇಲೆ ದೌರ್ಜನ್ಯ ಆದರೂ ಅವರ ಮೇಲೆ ನಾವು ಕಠಿಣ ಕ್ರಮ ತೆಗೆದುಕೊಳ್ಳತ್ತವೆ. ಬೆಳಗಾವಿಯಲ್ಲಿ ನಡೆದಿದ್ದು ಅನಾಗರಿಕ ಘಟನೆ. ಇದು ನಾಗರಿಕ ಸಮಾಜದಲ್ಲಿ ನಡೆಯಬಾರದು ಎಂದರು.
ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ನಿನ್ನೆ ಆರೋಗ್ಯ ಇಲಾಖೆ ಸಚಿವರ ಜೊತೆ ನಾನು ಮಾತಾಡಿದ್ದೇನೆ. ತಜ್ಞರ ಜೊತೆ ಸಭೆ ಮಾಡಲು ಸೂಚಿಸಿದ್ದೇನೆ ಎಂದರು.
ಕೋಲಾರದ ಮಾಲೂರಿನಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಶೌಚಾಲಯದ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣ ಸಂಬಂಧ ಮಾತನಾಡಿದ ಸಿದ್ದರಾಮಯ್ಯ, ಆ ವಿಚಾರ ನನ್ನ ಗಮನಕ್ಕೆ ಬಂದಿದೆ. ವರದಿ ತರಿಸಿಕೊಳ್ಳುತ್ತೇನೆ. ಯಾರೆ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದರು.
ಜಗದೀಶ್ ಶೆಟ್ಟರ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ: ಕಾಂಗ್ರೆಸ್ ಎಂಎಲ್ಸಿ ಜಗದೀಶ್ ಶೆಟ್ಟರ್ ಅವರು ಇಂದು 68ನೇ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಹೀಗಾಗಿ ಹುಬ್ಬಳ್ಳಿಯ ಮಧುರಾ ಎಸ್ಟೇಟ್‌ನಲ್ಲಿರುವ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಶುಭಕೋರಿದರು. ಬಳಿಕ ಉಪಾಹಾರ ಸೇವಿಸಿದರು. ನಿವಾಸದ ಮುಂದೆ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಆದರೆ, ಶೋಕಾಚರಣೆ ಇದೆ ಶೆಟ್ಟರೆ ಎಂದು ಹೇಳಿ ಸಿದ್ದರಾಮಯ್ಯ ಅವರು ಶಾಲು, ಹಾರ ಸ್ವೀಕರಿಸಲು ನಿರಾಕರಿಸಿದರು. ಸಮಾರಂಭ, ಘೋಷಣೆ ಕೂಗುವುದು ಬೇಡ ಎಂದರು.
Advertisement