ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಸರ್ಕಾರ ನಿರ್ಲಕ್ಷ್ಯ: ಸಿಎಂ ಸಿದ್ದರಾಮಯ್ಯಗೆ ಬಸವರಾಜ ಬೊಮ್ಮಾಯಿ ಪತ್ರ

ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆಗೆ ಬೆಳಗಾವಿ ಅಧಿವೇಶನದಲ್ಲಿ ಸಮರ್ಪಕ ಉತ್ತರ ನೀಡದ ಸರಕಾರ ಆ ಭಾಗದ ಜನರ ನಿರೀಕ್ಷೆ ಹುಸಿಗೊಳಿಸಿದೆ
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆಗೆ ಬೆಳಗಾವಿ ಅಧಿವೇಶನದಲ್ಲಿ ಸಮರ್ಪಕ ಉತ್ತರ ನೀಡದ ಸರಕಾರ ಆ ಭಾಗದ ಜನರ ನಿರೀಕ್ಷೆ ಹುಸಿಗೊಳಿಸಿದೆ. ಜತೆಗೆ ಅಭಿವೃದ್ಧಿ ಪರವಾದ ಯಾವುದೇ ಹೊಸ ನಿರ್ಣಯ ಪ್ರಕಟಿಸದೆ ಈಗಾಗಲೇ ಇರುವ ಕಾರ್ಯಕ್ರಮಗಳನ್ನು ಮತ್ತೆ ಘೋಷಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಪತ್ರ ಬರೆದಿರುವ ಅವರು, ''ಉತ್ತರ ಕರ್ನಾಟಕವಷ್ಟೇ ಅಲ್ಲ, ಸಮಗ್ರ ಕರ್ನಾಟಕದಲ್ಲಿ ಯಾವುದೇ ಮೂಲಸೌಕರ್ಯ ಕಾಮಗಾರಿ ಆರಂಭವಾಗದಿರುವುದು ಜನರ ಅನುಭವಕ್ಕೆ ಬಂದಿದೆ. ನೀರಾವರಿ ಯೋಜನೆಗಳು ಸೇರಿದಂತೆ ಪ್ರಮುಖ ಯೋಜನೆ ಕೈಗೆತ್ತಿಕೊಳ್ಳಲು ಸರಕಾರ ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ.

ನಮ್ಮ ಅವಧಿಯಲ್ಲಿ ಹೊಸದಾಗಿ 7 ವಿಶ್ವವಿದ್ಯಾಲಯ ಪ್ರಾರಂಭಿಸಿದ್ದೇವೆ. ಅನುದಾನ ಕೊರತೆಯ ನೆಪ ಹೇಳಿ ಈ ವಿವಿಗಳನ್ನು ಮುಚ್ಚಲು ಮುಂದಾಗಿದ್ದರಿಂದ ಹಿಂದುಳಿದ ಜಿಲ್ಲೆಗಳ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಹಾಗಾಗಿ, ಈ ವಿವಿಗಳನ್ನು ಬಂದ್‌ ಮಾಡುವ ಪ್ರಸ್ತಾವ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಬೊಮ್ಮಾಯಿ ಪತ್ರದ ಪ್ರಮುಖಾಂಶ
ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅಡಿ 130 ಟಿಎಂಸಿ ಅಡಿ ನೀರು ಬಳಕೆಗೆ ನಮ್ಮ ಸರಕಾರ ಪ್ರಾರಂಭಿಸಿದ್ದ ಪುನರ್ವಸತಿ ಮತ್ತು ಪುನರ್‌ ನಿರ್ಮಾಣಕ್ಕೆ ಈ ವರ್ಷ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಇದು ಉತ್ತರ ಕರ್ನಾಟಕದ ಬಗ್ಗೆ ಸರಕಾರದ ಅಸಡ್ಡೆಯನ್ನು ತೋರಿಸುತ್ತದೆ.

ಮಹದಾಯಿ ಡಿಪಿಆರ್‌ಗೆ ಕೇಂದ್ರ ಅನುಮೋದಿಸಿದೆ. ಅರಣ್ಯ ಇಲಾಖೆ ಅನುಮತಿ ಸಂಬಂಧ ತೆಗೆದುಕೊಂಡ ಕ್ರಮದ ಬಗ್ಗೆ ವಿವರಣೆ ನೀಡಿಲ್ಲ. ಈ ಯೋಜನೆ ಬಗ್ಗೆ ಆಸಕ್ತಿ ಇಲ್ಲವೆನ್ನುವುದು ಇದರಿಂದ ಗೊತ್ತಾಗುತ್ತದೆ.

ತುಂಗಭದ್ರಾ ಸಮತೋಲನ ಜಲಾಶಯ ನಿರ್ಮಾಣಕ್ಕೆ ನಮ್ಮ ಸರಕಾರ ಡಿಪಿಆರ್‌ ಸಿದ್ಧಪಡಿಸಿದೆ. ತಕ್ಷಣವೇ ನೆರೆ ರಾಜ್ಯಗಳೊಂದಿಗೆ ಮಾತನಾಡಿ ಯೋಜನೆ ಜಾರಿಗೆ ಕ್ರಮ ವಹಿಸಬೇಕು. ಉತ್ತರ ಕರ್ನಾಟಕದ ಸಾಸಲಟ್ಟಿ ಶಿವಲಿಂಗೇಶ್ವರ, ಮಂಟೂರು ಮಹಾಲಕ್ಷ್ಮೇ, ಶ್ರೀ ವೆಂಕಟೇಶ್ವರ ಏತ ನೀರಾವರಿ ಸೇರಿ ಹಲವು ಏತ ನೀರಾವರಿ ಯೋಜನೆಗಳಿಗೆ ನಮ್ಮ ಸರಕಾರ ಚಾಲನೆ ನೀಡಿದ್ದು, ಇವುಗಳಿಗೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿಲ್ಲ. ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪಿಸಿಲ್ಲ.

ಹುಬ್ಬಳ್ಳಿಯಲ್ಲಿಎಫ್‌ಎಂಸಿಜಿಗೆ ನಮ್ಮ ಸರಕಾರ ಜಮೀನು ಮಂಜೂರು ಮಾಡಿ ವಿಶೇಷ ರಿಯಾಯಿತಿ ಒದಗಿಸಿದೆ. ಸುಮಾರು 1 ಲಕ್ಷ ಜನರಿಗೆ ಉದ್ಯೋಗ ನೀಡುವ ಈ ಯೋಜನೆ ಸಂಬಂಧ ಮುಂದಿನ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ.

ಕಲಬುರಗಿಯಲ್ಲಿಪಿಎಂ ಮಿತ್ರ ಯೋಜನೆಯಡಿ ಟೆಕ್ಸ್‌ಟೈಲ್‌ ಪಾರ್ಕ್ಗೆ ಅನುಮೋದನೆ ನೀಡಿದ್ದು, ಅದಕ್ಕೆ ನಮ್ಮ ಸರಕಾರದ ಅವಧಿಯಲ್ಲಿ1 ಸಾವಿರ ಎಕರೆ ಮೀಸಲಿಟ್ಟಿದೆ. ನೀವು ಬಂದ ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲ. ರಾಯಚೂರಿನ ಫಾರ್ಮಾ ಪಾರ್ಕ್ ಬಗ್ಗೆಯೂ ಕೂಡ ನಿಮ್ಮ ಉತ್ತರದಲ್ಲಿ ಪ್ರಸ್ತಾಪಿಸಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com