
ಬೆಂಗಳೂರು: ರಾಜ್ಯಾದ್ಯಂತ ಕೊಬ್ಬರಿ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದು ಕೂಡಲೇ ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಶಾಸಕರ ತಂಡ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯವರಿಗೆ ಮನವಿ ಸಲ್ಲಿಸಿತು.
ಕೆ.ಆರ್.ಪೇಟೆ ತಾಲೂಕು ಸೇರಿದಂತೆ ಮಂಡ್ಯ ಮತ್ತು ಹಾಸನ ಜಿಲ್ಲೆಗಳ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಂಡ್ಯ ಜಿಲ್ಲೆ ಮತ್ತು ಹಾಸನ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ತೆಂಗು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕೊಬ್ಬರಿ ಬೆಲೆ ಕುಸಿತದಿಂದ ತೆಂಗು ಬೆಳೆಗಾರ ರೈತರು ಸಂಕಷ್ಠಕ್ಕೆ ಸಿಲುಕಿದ್ದಾರೆ.
ಈ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದು ಕೇಂದ್ರದಿಂದ ಅಗತ್ಯ ನೆರವು ಪಡೆಯುವ ಉದ್ದೇಶದಿಂದ ಜೆಡಿಎಸ್ ಮುಖಂಡರಾದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ, ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಹಾಗೂ ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಅವರೊಂದಿಗಿನ ನಿಯೋಗ ದೆಹಲಿಗೆ ತೆರಳಿ ದೇವೇಗೌಡರ ನೇತೃತ್ವದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಪ್ರತಿ ಟನ್‌ಗೆ ಕನಿಷ್ಠ 15,000 ರೂ.ಗಳ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸಲು ರಾಷ್ಟ್ರೀಯ ಕೃಷಿ ಮಾರುಕಟ್ಟೆ ಫೆಡರೇಶನ್ ಲಿಮಿಟೆಡ್‌ಗೆ (ನಾಫೆಡ್) ನಿರ್ದೇಶನ ನೀಡುವಂತೆ ನಿಯೋಗ ಸಚಿವರನ್ನು ಒತ್ತಾಯಿಸಿತು.
ಪ್ರತಿ ಎಕರೆಗೆ 50,000 ರೂ. ವಿಶೇಷ ಪರಿಹಾರ ಮತ್ತು ರಸಗೊಬ್ಬರಕ್ಕಾಗಿ 25,000 ರೂ.ಗಳನ್ನು ಘೋಷಿಸುವಂತೆ ನಿಯೋಗವು ಕೇಂದ್ರವನ್ನು ಒತ್ತಾಯಿಸಿದೆ ಮತ್ತು NHAI ಯೋಜನೆಗಳಿಗೆ ಅನುಮೋದನೆ ಮತ್ತು ಅನುದಾನವನ್ನು ಕೋರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಮೇಲ್ಮೈ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಲಿದೆ. ಎಂದು ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.
ನಿಯೋಗವು ಈ ಸಂದರ್ಭದಲ್ಲಿ ಕರ್ನಾಟಕದ ಬರ ಪರಿಸ್ಥಿತಿಯ ವಿವರವಾದ ವರದಿಯನ್ನು ಪ್ರಧಾನಿ ಮೋದಿಗೆ ನೀಡಲಿದೆ ಎಂದು ಪ್ರಜ್ವಲ್ ಹೇಳಿದರು
Advertisement