ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೋದಿ ಅವರೇನು ಆರ್ಥಿಕ ತಜ್ಞರಾ? ಎಂದು ಮಂಗಳವಾರ ಪ್ರಶ್ನಿಸಿದ್ದಾರೆ.
10 ವರ್ಷಗಳ ಹಿಂದೆ ಪ್ರಧಾನಿ ಮೋದಿ ಭರವಸೆ ನೀಡಿದಂತೆ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ನೀಡಲು ವಿಫಲವಾಗಿದ್ದಾರೆ ಎಂದು ಪ್ರಧಾನಿಯನ್ನು ಸಿಎಂ ತರಾಟೆಗೆ ತೆಗೆದುಕೊಂಡರು.
ಮಿಸ್ಟರ್ ಪ್ರೈಮ್ ಮಿನಿಸ್ಟರ್, ನಮ್ಮ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಎಲ್ಲಾ ಐದು ಭರವಸೆಗಳನ್ನು ಜಾರಿಗೆ ತಂದಿದೆ. ರಾಜ್ಯ ದಿವಾಳಿಯಾಗಿದೆಯೇ? ಎಂಬ ನಿಮ್ಮ ಹೇಳಿಕೆ ತಪ್ಪಾಗಿದೆ. ವಾಪಸ್ ಪಡೆಯಿರಿ ಎಂದು ಹೇಳಿದರು.
2022-23ನೇ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ಪದವೀಧರರಿಗೆ 3,000 ರೂ ಮತ್ತು ಡಿಪ್ಲೋಮಾದಾರರಿಗೆ 1,500 ರೂ ನಿರುದ್ಯೋಗ ಭತ್ಯ ನೀಡುವ ಕಾಂಗ್ರೆಸ್ ಪಕ್ಷದ ಐದನೇ ಮತ್ತು ಅಂತಿಮ ಚುನಾವಣಾ ಗ್ಯಾರಂಟಿ ಯುವ ನಿಧಿ' ನೋಂದಣಿಗೆ ಚಾಲನೆ ನೀಡಿ ಸಿದ್ದರಾಮಯ್ಯ ಮಾತನಾಡಿದರು.
"ಮೋದಿ ಒಬ್ಬ ಅರ್ಥಶಾಸ್ತ್ರಜ್ಞರೇ? ಐದು ಖಾತರಿಗಳು ಜಾರಿಯಾದರೆ ಕರ್ನಾಟಕ ದಿವಾಳಿಯಾಗುತ್ತದೆ ಎಂದು ಹೇಳಿದ್ದರು. ಐದು ಖಾತರಿಗಳ ಅನುಷ್ಠಾನದಿಂದ ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ ಎಂಬುದು ವಾಸ್ತವ" ಎಂದು ಸಿದ್ದರಾಮಯ್ಯ ಹೇಳಿದರು.
"ನೀವು ನೀಡಿದ ಭರವಸೆಯಂತೆ(ಪ್ರಧಾನಿ ಮೋದಿ) ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸಿದ್ದೀರಾ? ನೀವು 10 ವರ್ಷಗಳಲ್ಲಿ 20 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿತ್ತು. ನೀವು ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದ್ದೀರಾ? ನಿಮ್ಮ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದೀರಿ" ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಜನವರಿ 12 ರಂದು ಶಿವಮೊಗ್ಗದಲ್ಲಿ ಒಂದು ಲಕ್ಷ ಯುವಕ ಯುವತಿಯರನ್ನು ಸೇರಿಸಿ ಯುವನಿಧಿ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ ಸಿಎಂ, ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಖಾಲಿ ಇದ್ದ ಉದ್ಯೋಗ ಭರ್ತಿ ಮಾಡುತ್ತೇವೆ. ಹೈದರಾಬಾದ್ ಕರ್ನಾಟಕದಲ್ಲೂ ಖಾಲಿ ಹುದ್ದೆ ಭರ್ತಿ ಮಾಡುತ್ತೇವೆ. ನಿರುದ್ಯೋಗ ನಿವಾರಣೆ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
Advertisement