ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ವಚನ ಸಾಹಿತ್ಯ! ನಿಮ್ಮನ್ನು ಸ್ವಾಗತಿಸಲಿದೆ ಅನುಭವ ಮಂಟಪ, ಬಸವಣ್ಣನ ಪ್ರತಿಮೆ!

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ದಿನದ ಅಂಗವಾಗಿ “ವಿಶ್ವ ಗುರು ಬಸವಣ್ಣ ಮತ್ತು ವಚನ ಸಾಹಿತ್ಯ’ ವಿಷಯಾಧಾರಿತದ 215ನೇ ಫ‌ಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಸಜ್ಜಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ದಿನದ ಅಂಗವಾಗಿ “ವಿಶ್ವ ಗುರು ಬಸವಣ್ಣ ಮತ್ತು ವಚನ ಸಾಹಿತ್ಯ’ ವಿಷಯಾಧಾರಿತದ 215ನೇ ಫ‌ಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಸಜ್ಜಾಗಿದೆ.

ಪ್ರತಿವರ್ಷ ಒಂದೊಂದು ವಿಷಯ ಆಧಾರವಾಗಿಟ್ಟು ಕೊಂಡು ಲಾಲ್‌ಬಾಗ್‌ನಲ್ಲಿ ಆಯೋಜಿಸುವ ಫ‌ಲಪುಷ್ಪ ಪ್ರದರ್ಶನ, ಈ ಬಾರಿ ವಚನ ಸಾಹಿತ್ಯದ ಮೂಲಕ ವಿಶ್ವಕ್ಕೆ ಮಾನವೀಯತೆ, ಧಾರ್ಮಿಕತೆ ಸಾರಿದ ಬಸವೇಶ್ವರರು ಹಾಗೂ 12ನೇ ಶತಮಾನದ ವಚನ ಸಾಹಿತ್ಯ ಮುಖ್ಯವಾಗಿರಿಸಿಕೊಂಡಿದೆ. ವಿಶ್ವ ಗುರು ಬಸವಣ್ಣ ಮತ್ತು ವಚನ ಸಾಹಿತ್ಯ ಶೀರ್ಷಿಕೆಯಡಿ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ನಡೆಯುವ ಫ‌ಲಪುಷ್ಪ ಪ್ರದರ್ಶನಕ್ಕೆ ನಾಲ್ಕು ತಿಂಗಳುಗಳಿಂದ ಪೂರ್ವತಯಾರಿ ನಡೆಯುತ್ತಿದೆ.

11 ದಿನಗಳ ಫಲಪುಷ್ಪ ಪ್ರದರ್ಶನವು ಜನವರಿ 18 ರಂದು ಉದ್ಘಾಟನೆಗೊಳ್ಳಲಿದ್ದು, ಜನವರಿ 28 ರಂದು ಮುಕ್ತಾಯಗೊಳ್ಳಲಿದೆ. ತೋಟಗಾರಿಕಾ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಮತ್ತು ಲಾಲ್‌ಬಾಗ್ ನಿರ್ದೇಶಕ ಡಿಎಸ್ ರಮೇಶ್ ಇತರರೊಂದಿಗೆ ನಡೆದ ಸಭೆಯಲ್ಲಿ ಬಸವೇಶ್ವರ ಪ್ರತಿಮೆ ತಯಾರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

12 ನೇ ಶತಮಾನದ ಕನ್ನಡ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಬಸವಣ್ಣ ಲಿಂಗ ತಾರತಮ್ಯದ ಜೊತೆಗೆ ಮೂಢನಂಬಿಕೆಗಳನ್ನು ತಿರಸ್ಕರಿಸಿದರು, ಸಮಾನತೆಯನ್ನು ಪ್ರತಿಪಾದಿಸಿದರು. ಅವರ ತತ್ವಶಾಸ್ತ್ರ ಮತ್ತು ಬೋಧನೆಗಳು ಇಂದು ಅತ್ಯಗತ್ಯ. ಹೀಗಾಗಿ, ಈ ಬಾರಿ ಬಸವಣ್ಣ ಮತ್ತು ‘ವಚನ ಸಾಹಿತ್ಯ’ (ತಾಳ ಬರಹ) ವಿಷಯ ಆಧರಿಸಿ ಹೂವಿನ ಮಾದರಿಗಳನ್ನು ರಚಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬಸವೇಶ್ವರ ಅಥವಾ ಬಸವಣ್ಣ ಜೊತೆಗೆ ಅಕ್ಕ ಮಹಾದೇವಿ, ಮಡಿವಾಳ ಮಾಚಯ್ಯ, ಗಂಗಾಂಬಿಕೆ ಮುಂತಾದ ದಾರ್ಶನಿಕರ ಪ್ರತಿಮೆಗಳು, ಅವರ ‘ವಚನ’ಗಳು ಪ್ರದರ್ಶನಗೊಳ್ಳಲಿವೆ. 12 ನೇ ಶತಮಾನದಲ್ಲಿ ಎಲ್ಲಾ ಧರ್ಮಗಳ ಭಕ್ತರು ಮತ್ತು ಕವಿಗಳು ಒಟ್ಟುಗೂಡಿದ 'ಸಾಮಾಜಿಕ-ಧಾರ್ಮಿಕ ಸಂಸತ್ತು' 'ಅನುಭವ ಮಂಟಪ'ದ ಪ್ರತಿಕೃತಿಯೂ ಇರುತ್ತದೆ. ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ವಚನಗಳ ನೇರ ವಾಚನಗೋಷ್ಠಿಗಳು ನಡೆಯಲಿದ್ದು, ಇದು ವಿಶೇಷ ಆಕರ್ಷಣೆಯಾಗಿದೆ.

ಗಿಡಗಳು ಹೂ ಬಿಡಲು 45 ರಿಂದ 60 ದಿನಗಳು ಬೇಕಾಗುವುದರಿಂದ ನವೆಂಬರ್ ಮೊದಲ ವಾರದಲ್ಲಿ ಸುಮಾರು ಮೂರು ಲಕ್ಷ ಹೂವು ಕುಂಡಗಳು ಸಿದ್ಧವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಹೂವುಗಳು ಮತ್ತು ಸಸ್ಯಗಳನ್ನು ಸಾಮಾನ್ಯವಾಗಿ ಡಾರ್ಜಿಲಿಂಗ್ ಮತ್ತು ಊಟಿಯಿಂದ ತರಲಾಗಿದೆ.

"ಗ್ಲಾಸ್ ಹೌಸ್‌ನಲ್ಲಿ ಪ್ರತಿ ವರ್ಷವೂ ಸುಮಾರು 5 ಲಕ್ಷ ಕತ್ತರಿಸಿದ ಗುಲಾಬಿಗಳು ಮತ್ತು 3 ಲಕ್ಷ ಕಟ್ ಕ್ರೈಸಾಂಥೆಮಮ್ ಹೂವುಗಳನ್ನು ಮುಖ್ಯ ಥೀಮ್ ಮಾಡಲು ಬಳಸಲಾಗುತ್ತದೆ ಮತ್ತು ಈ ವರ್ಷವೂ ಅದೇ ರೀತಿ ನಿರೀಕ್ಷಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com