ನಂಜುಂಡೇಶ್ವರ ಉತ್ಸವ ವೇಳೆ ಘರ್ಷಣೆ, ತೀವ್ರ ಮಾತಿನ ಚಕಮಕಿ; ಪೊಲೀಸರ ಲಾಠಿ ಚಾರ್ಜ್

ಇಲ್ಲಿನ ಶ್ರೀಕಂಠೇಶ್ವರ ದೇವಾಲಯ ವತಿಯಿಂದ ನಿನ್ನೆ ಮಂಗಳವಾರ ರಾತ್ರಿ ನೆರವೇರಿದ ಅಂಧಕಾಸುರ ವಧೆ ಮತ್ತು ನಂಜುಂಡೇಶ್ವರ ಉತ್ಸವದಲ್ಲಿ ಭಕ್ತರು ಮತ್ತು ದಲಿತ ಸಂಘರ್ಷ ಸಮಿತಿ(DSS) ಸದಸ್ಯರ ನಡುವೆ ಮಾತಿನ ಚಕುಮಕಿ ಆರಂಭವಾಗಿ ಘರ್ಷಣೆ ನಡೆದು ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ನಡೆದಿದೆ. 
ನಂಜನಗೂಡು ದೇವಸ್ಥಾನ ಮತ್ತು ಮಹಿಷಾಸುರನ ಸಾಂದರ್ಭಿಕ ಚಿತ್ರ
ನಂಜನಗೂಡು ದೇವಸ್ಥಾನ ಮತ್ತು ಮಹಿಷಾಸುರನ ಸಾಂದರ್ಭಿಕ ಚಿತ್ರ

ನಂಜನಗೂಡು: ಇಲ್ಲಿನ ಶ್ರೀಕಂಠೇಶ್ವರ ದೇವಾಲಯ ವತಿಯಿಂದ ನಿನ್ನೆ ಮಂಗಳವಾರ ರಾತ್ರಿ ನೆರವೇರಿದ ಅಂಧಕಾಸುರ ವಧೆ ಮತ್ತು ನಂಜುಂಡೇಶ್ವರ ಉತ್ಸವದಲ್ಲಿ ಭಕ್ತರು ಮತ್ತು ದಲಿತ ಸಂಘರ್ಷ ಸಮಿತಿ(DSS) ಸದಸ್ಯರ ನಡುವೆ ಮಾತಿನ ಚಕುಮಕಿ ಆರಂಭವಾಗಿ ಘರ್ಷಣೆ ನಡೆದು ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ನಡೆದಿದೆ. 

ಶ್ರೀಕಂಠೇಶ್ವರ ದೇವಾಲಯದಲ್ಲಿ ಪ್ರತಿವರ್ಷದಂತೆ ನಿನ್ನೆ ಕೂಡ ಮಹಿಷಾಸುರನ ವಧೆ ಸಂಪ್ರದಾಯದ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೇವಾಲಯ ಆವರಣದಲ್ಲಿ ಸಂಪ್ರದಾಯದಂತೆ ಪಟ್ಟಣದ ರಾಕ್ಷಸ ಮಂಟಪದಲ್ಲಿ ಮಹಿಷಾಸುರನ ಬೃಹತ್ ರಂಗೋಲಿ ಬರೆದು, ಬೃಹದಾಕಾರದ ಬ್ಯಾನರ್ ಕಟ್ಟಲಾಗಿತ್ತು. ಪದ್ಧತಿಯಂತೆ ನಂಜುಂಡೇಶ್ವರನ ಉತ್ಸವ ಮೂರ್ತಿಯನ್ನು ಹೊತ್ತವರು ಮಹಿಷಾಸುರನ ರಂಗೋಲಿಯ ಸುತ್ತ ಮೂರು ಸುತ್ತು ಸುತ್ತುಗಳನ್ನು ಹಾಕಿ ರಂಗೋಲಿಯನ್ನು ಅಳಿಸಿ, ಬ್ಯಾನರನ್ನು ಕಿತ್ತೆಸೆದು ತೇರಿನ ಬೀದಿಗಳಲ್ಲಿ ಮುಂದಕ್ಕೆ ಸಾಗಬೇಕು. ಇದು ಹತ್ತಾರು ವರ್ಷಗಳಿಂದ ನಡೆದುಕೊಂಡ ಬಂದ ವಾಡಿಕೆಯಾಗಿದೆ.

ಈ ವಿಚಾರಕ್ಕೆ ದಲಿತ ಸಂಘರ್ಷ ಸಮಿತಿ ಮುಖಂಡರು ಸ್ಥಳಕ್ಕೆ ಆಗಮಿಸಿ ಮಹಿಷನ ಚಿತ್ರ ಬರೆದಿರುವುದಕ್ಕೆ ಹಾಗೂ ಬ್ಯಾನರ್ ಕಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ರಂಗೋಲಿಯನ್ನು ತುಳಿಯದಂತೆ ಅಡ್ಡಿಪಡಿಸಿದರು. ಇದರಿಂದ ಕೆರಳಿದ ನಂಜುಂಡೇಶ್ವರನ ಭಕ್ತರು ದಲಿತ ಸಂಘರ್ಷ ಸಮಿತಿ ಮುಖಂಡರ ಜೊತೆ ವಾಗ್ವಾದಕ್ಕಿಳಿದು ಅದು ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು. 

ದಲಿತ ಸಂಘರ್ಷ ಸಮಿತಿ ಮುಖಂಡರ ವಾದವೇನು?: ಮಹಿಷಾಸುರ ನಮ್ಮ ರಾಜ ಅವನನ್ನು ರಾಜನೆಂದು ಪೂಜಿಸಿ ಮಹಿಷ ದಸರ ಮಾಡುತ್ತಿದ್ದೇವೆ. ಅವನ ಪ್ರತಿಕೃತಿ ಇರುವ ರಂಗೋಲಿ ಅಥವಾ ಬ್ಯಾನರ್ ನೆಲಕ್ಕೆ ಹಾಕಿದರೆ ನಮಗೆ ಧಾರ್ಮಿಕವಾಗಿ ನೋವಾಗುತ್ತದೆ ಎಂದು ಆಕ್ರೋಶ ಹೊರಹಾಕಿ ಮೆರವಣಿಗೆಗೆ ಅಡ್ಡಿಪಡಿಸಲು ಮುಂದಾದರು. ಪರಿಣಾಮ ಡಿಎಸ್ ಎಸ್ ಹಾಗೂ ನಂಜುಂಡೇಶ್ವರನ ಭಕ್ತರ ನಡುವೆ ಒಂದು ಗಂಟೆಗೂ ಅಧಿಕ ಕಾಲ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಹರಸಹಾಸ ಪಟ್ಟು ಕೊನೆಗೆ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮಾಡಬೇಕಾಗಿ ಬಂತು.

ಪೊಲೀಸರಿಂದ ಲಾಠಿ ಪ್ರಹಾರ: ದಲಿತ ಸಂಘರ್ಷ ಸಮಿತಿಯ ವಿರೋಧ ನಡುವೆಯೂ ಪಾರ್ವತಿ ಸಮೇತ ಶ್ರೀಕಂಠೇಶ್ವರನ ಉತ್ಸವ ಮೂರ್ತಿಯನ್ನು ರಾಕ್ಷಸ ಮಂಟಪದಲ್ಲಿ ತಂದು ಮಹಿಷಾಸುರನ ಸಂಹಾರ ನಡೆಸಲಾಯಿತು. ಈ ವೇಳೆ ವಿರೋಧ ಹೆಚ್ಚಿದ ಹಿನ್ನೆಲೆ ಸಾರ್ವಜನಿಕರನ್ನು ಸ್ಥಳದಿಂದ ಚದರಿಸಲು ಪೊಲೀಸರು ಲಘು ಲಾಟಿ ಪ್ರಹಾರ ನಡೆಸಿದರು. ಸದ್ಯಕ್ಕೆ ನಂಜುಂಡೇಶ್ವರ ದೇವಾಲಯ ಬಳಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. 

ನಾಡಹಬ್ಬ ಮೈಸೂರು ದಸರಾ ಆಚರಣೆ ವೇಳೆ ದಸರಾಗೆ ಪರ್ಯಾಯವಾಗಿ ಮಹಿಷಾ ದಸರಾ ಆಚರಿಸುವ ಮೂಲಕ ಎದ್ದಿದ್ದ ವಿವಾದ ಇದೀಗ ನಂಜನಗೂಡಿನಲ್ಲಿ ಮತ್ತೊಮ್ಮೆ ಮಹಿಷಾಸುರನ ವಿಚಾರವಾಗಿ ಮತ್ತೆ ವಿವಾದ ಭುಗಿಲೆದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com