ಪಾಕ್ ಸೇನೆಯಿಂದ PoK ಯ ಶಾರದಾ ಮಂದಿರ ಅತಿಕ್ರಮಣ; ತೆರವಿಗೆ ಕೇಂದ್ರ ಸರ್ಕಾರದ ಸಹಾಯ ಕೋರಿದ ಸಮಿತಿ

ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿರುವ ಶಾರದಾ ಮಂದಿರದ ಆವರಣವನ್ನು ಪಾಕಿಸ್ತಾನ ಸೇನೆ ಅತಿಕ್ರಮಣ ಮಾಡಿದ್ದು, ಅದನ್ನು ತೆರವುಗೊಳಿಸಲು ಶಾರದಾ ಮಂದಿರ ಉಳಿಸಿ ಸಮಿತಿ(ಎಸ್‌ಎಸ್‌ಸಿ) ಶುಕ್ರವಾರ ಕೇಂದ್ರ ಸರ್ಕಾರದ ಸಹಾಯ...
LOC ಬಳಿ ಪುನರ್ ನಿರ್ಮಿಸಲಾಗಿರುವ ಶಾರದಾ ದೇವಿ ದೇವಸ್ಥಾನ
LOC ಬಳಿ ಪುನರ್ ನಿರ್ಮಿಸಲಾಗಿರುವ ಶಾರದಾ ದೇವಿ ದೇವಸ್ಥಾನ

ಬೆಂಗಳೂರು: ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿರುವ ಶಾರದಾ ಮಂದಿರದ ಆವರಣವನ್ನು ಪಾಕಿಸ್ತಾನ ಸೇನೆ ಅತಿಕ್ರಮಣ ಮಾಡಿದ್ದು, ಅದನ್ನು ತೆರವುಗೊಳಿಸಲು ಶಾರದಾ ಮಂದಿರ ಉಳಿಸಿ ಸಮಿತಿ(ಎಸ್‌ಎಸ್‌ಸಿ) ಶುಕ್ರವಾರ ಕೇಂದ್ರ ಸರ್ಕಾರದ ಸಹಾಯ ಕೋರಿದೆ.

ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಸ್‌ಎಸ್‌ಸಿ ಸಂಸ್ಥಾಪಕ ರವೀಂದರ್ ಪಂಡಿತ್, ನ್ಯಾಯಾಲಯದ ಆದೇಶದ ಹೊರತಾಗಿಯೂ ಪಾಕಿಸ್ತಾನ ಸೇನೆಯು ಶಿಥಿಲಗೊಂಡಿರುವ ಹಳೆಯ ಶಾರದಾ ದೇವಸ್ಥಾನದ ಆವರಣವನ್ನು ಅತಿಕ್ರಮಿಸಿ ಕಾಫಿ ಹೋಮ್ ತೆರೆದಿದೆ ಎಂದು ಆರೋಪಿಸಿದರು.

ಶಾರದಾ ಪೀಠದ ಆವರಣದಲ್ಲಿ ಪಾಕಿಸ್ತಾನ ಸೇನೆಯು ಇತ್ತೀಚೆಗೆ ನಿರ್ಮಿಸಿರುವ ಕಾಫಿ ಹೋಮ್‌ನ ಅತಿಕ್ರಮಣ ಮತ್ತು ತೆರವು ಕುರಿತು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಶಾರದಾ ಮಂದಿರ ಉಳಿಸಿ ಸಮಿತಿ ಮನವಿ ಮಾಡಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಸರ್ವೋಚ್ಚ ನ್ಯಾಯಾಲಯವು ಜನವರಿ 3, 2023 ರಂದು ಶಾರದಾ ಉಳಿಸಿ ಸಮಿತಿಯ ಪರವಾಗಿ ಅತಿಕ್ರಮಣ ತಡೆಯಲು ತನ್ನ ಪ್ರಾತಿನಿಧ್ಯದ ಆಧಾರದ ಮೇಲೆ ಘೋಷಿಸಿದ ಮಹತ್ವದ ತೀರ್ಪಿನ ಹೊರತಾಗಿಯೂ ಪಾಕ್ ಸೇನೆ ಕಾಫಿ ಹೋಮ್ ತೆರೆದಿದೆ ಎಂದು ಅವರು ಹೇಳಿದರು.

ಭಕ್ತಾದಿಗಳು ಯಾತ್ರೆಗೆ ತೆರಳಲು ಶಾರದಾ ಪೀಠವನ್ನು ತೆರೆಯಬೇಕು ಎಂದು ರವೀಂದರ್ ಪಂಡಿತ್ ಒತ್ತಾಯಿಸಿದರು.

"ಪಾಕಿಸ್ತಾನದ ಅಧಿಕಾರಿಗಳು ಮತ್ತು ಅದರ ಸೇನೆಯಿಂದ ಕಾಫಿ ಹೋಮ್ ಅನ್ನು ತೆಗೆದುಹಾಕದಿದ್ದರೆ ನಾವು ಎಲ್ಒಸಿ ಮುತ್ತಿಗೆಗೆ ಕರೆ ನೀಡುತ್ತೇವೆ ಮತ್ತು ಅದನ್ನು ದಾಟುತ್ತೇವೆ. ಎಲ್ಲಾ ಶಾರದಾ ಬೆಂಬಲಿಗರು ಮುಂದಿನ ದಿನಗಳಲ್ಲಿ ಮುತ್ತಿಗೆ ಹಾಕಲು ಸಿದ್ಧರಾಗಿರಬೇಕು" ಎಂದು ಅವರು ಹೇಳಿದರು.

ಶಾರದಾ ಪೀಠವನ್ನು ಯುನೆಸ್ಕೋ ಪಾರಂಪರಿಕ ತಾಣವನ್ನಾಗಿ ಘೋಷಿಸಬೇಕು ಎಂದು ಇದೇ ವೇಳೆ ಪಂಡಿತ್ ಒತ್ತಾಯಿಸಿದರು.

ಕಳೆದ ಮಾರ್ಚ್ ನಲ್ಲಿ ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಭಾರತ- ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ (LOC) ಬಳಿ ಪುನರ್ ನಿರ್ಮಿಸಲಾಗಿರುವ ಶಾರದಾ ದೇವಿ ದೇವಸ್ಥಾನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉದ್ಘಾಟಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com