ತಿಮ್ಮಾಪೂರ ಏತ ನೀರಾವರಿ ಯೋಜನೆ: ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ತಿಮ್ಮಾಪೂರ ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಿ, ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತಿತರರು ಪಾಲ್ಗೊಂಡರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತಿತರರು
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತಿತರರು

ಸಿಂಧನೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ತಿಮ್ಮಾಪೂರ ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಿ, ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತಿತರರು ಪಾಲ್ಗೊಂಡರು.

ನಂತರ ಜನತೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ರೂ. 109 ಕೋಟಿ ವೆಚ್ಚದ ಈ ಏತ ನೀರಾವರಿ ಯೋಜನೆಯಿಂದ ಸಿಂಧನೂರು ತಾಲೂಕಿನ ಸುಲ್ತಾನಪುರ, ರಾಮತ್ನಾಳ, ದಿಬ್ಬನಖೇಡ, ತುರಕಟ್ಟಿ, ಕನಕರೆಡ್ಡಿ ಸೇರಿದಂತೆ 24 ಗ್ರಾಮಗಳ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ದೊರೆಯಲಿದೆ ಎಂದು ತಿಳಿಸಿದರು.

 ಕನ್ನಡಿಗರು ಪ್ರತೀ ವರ್ಷ ಕೇಂದ್ರಕ್ಕೆ 4 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಹಣ ಕೊಡ್ತೀವಿ. ಆದರೆ ಕೇಂದ್ರ ನಮಗೆ ವಾಪಾಸ್ ಕೊಡುವುದು 52 ಸಾವಿರ ಕೋಟಿ ಮಾತ್ರ. ಬರಗಾಲ ಬಂದಿದ್ದರೂ ಕೇಂದ್ರದಿಂದ ನಯಾಪೈಸೆ ಬಂದಿಲ್ಲ. ಇದನ್ನು ರಾಜ್ಯದ ಜನತೆ ಬಿಜೆಪಿ ಸಂಸದರಿಗೆ ಪ್ರಶ್ನಿಸಬೇಕು ಎಂದರು. 

ನಮ್ಮ ಗ್ಯಾರಂಟಿ ಯೋಜನೆಗಳಿಂದಾಗಿ ಬರಗಾಲದಲ್ಲೂ ರಾಜ್ಯದ ಬಡವರು ಸಂಕಷ್ಟದಿಂದ ಪಾರಾಗಿದ್ದಾರೆ. ನಾವು ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ. ಮೋದಿ ಅವರು ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಭಾಷಣ ಮಾಡಿದ್ದರು. ಆದರೆ ಅವರ ಮಾತು ಮತ್ತೊಮ್ಮೆ ಸುಳ್ಳಾಗಿದೆ ಎಂದರು.

ಶಕ್ತಿ ಯೋಜನೆಯಡಿ 120 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. 1.16 ಕೋಟಿ ಮಹಿಳೆಯರ ಖಾತೆಗೆ ತಿಂಗಳಿಗೆ 2 ಸಾವಿರ ಜಮೆ ಮಾಡಲಾಗುತ್ತಿದೆ. ಹೀಗೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ 5-6 ಸಾವಿರ ರೂಪಾಯಿ ಉಳಿತಾಯ ಆಗುತ್ತಿದೆ ಎಂದು ತಿಳಿಸಿದರು. 

ಕೇಂದ್ರ ಸರ್ಕಾರವು ರಾಜ್ಯದ ಜನರ ನೆರವಿಗೆ ಬರದಿದ್ದರೂ ನಾವು ರಾಜ್ಯದ ಜನರ ಕೈ ಬಿಡುವುದಿಲ್ಲ. ಸಿಂಧನೂರಿಗೆ ಇದುವರೆಗೂ ಶೇ.80 ರಷ್ಟು ನೀರಾವರಿ ಸವಲತ್ತು ಸಿಕ್ಕಿದೆ. ಶಾಸಕರು ನೂರಕ್ಕೆ ನೂರರಷ್ಟು ನೀರಾವರಿ ಮಾಡಲು ಬದ್ಧರಾಗಿದ್ದಾರೆ. ನಮ್ಮ ಸರ್ಕಾರ ಇದಕ್ಕೆ ಸಂಪೂರ್ಣ ಸಹಕಾರ ನೀಡಿ ರೈತರ ಬದುಕನ್ನು ಉನ್ನತೀಕರಿಸಲಿದೆ. ನವಿಲೆ ಬ್ಯಾಲೆನ್ಸಿಂಗ್ ಅಣೆಕಟ್ಟು ನಿರ್ಮಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com