ಜೈನ್ ವಿಶ್ವ ವಿದ್ಯಾನಿಲಯ
ಜೈನ್ ವಿಶ್ವ ವಿದ್ಯಾನಿಲಯ

ಅಂಬೇಡ್ಕರ್ ಗೆ ಅವಮಾನ: ಜೈನ್ ವಿಶ್ವವಿದ್ಯಾನಿಲಯದ ಡೀಮ್ಡ್ ಸ್ಥಾನಮಾನ ಹಿಂತೆಗೆದುಕೊಳ್ಳಲು ಶಾಸಕರ ಆಗ್ರಹ

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪರಿಶಿಷ್ಟ ಜಾತಿ ಸಮುದಾಯಕ್ಕೆ ಅವಮಾನ ಮಾಡಿದ  ಜೈನ್ ವಿಶ್ವವಿದ್ಯಾಲಯದ ಡೀಮ್ಡ್ ಸ್ಥಾನಮಾನವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಬುಧವಾರ ಒತ್ತಾಯಿಸಿದರು.
Published on

ಬೆಂಗಳೂರು: ಕಾಲೇಜು ಉತ್ಸವದ ವೇಳೆ ಕಿರುನಾಟಕ ಪ್ರದರ್ಶಿಸಿ, ಸಂವಿಧಾನ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪರಿಶಿಷ್ಟ ಜಾತಿ ಸಮುದಾಯಕ್ಕೆ ಅವಮಾನ ಮಾಡಿದ  ಜೈನ್ ವಿಶ್ವವಿದ್ಯಾಲಯದ ಡೀಮ್ಡ್ ಸ್ಥಾನಮಾನವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಬುಧವಾರ ಒತ್ತಾಯಿಸಿದರು.

ಬುಧವಾರ ವಿಧಾನಸಭೆ ಶೂನ್ಯ ವೇಳೆಯಲ್ಲಿ ಡಾ.ಅಂಬೇಡ್ಕರ್‍‌ಗೆ ಜೈನ್ ವಿಶ್ವ ವಿದ್ಯಾನಿಲಯದಲ್ಲಿ ಅಪಮಾನ ಮಾಡಿರುವ ಘಟನೆ ಪ್ರತಿಧ್ವನಿಸಿತು. ವಿಶ್ವವಿದ್ಯಾಲಯದ ಮಾನ್ಯತೆ ರದ್ದು ಮಾಡಬೇಕು ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.

ಜೆಡಿಎಸ್‌ ಸದಸ್ಯ ಕೆ.ಅನ್ನದಾನಿ ವಿಷಯ ಪ್ರಸ್ತಾಪಿಸಿ, ‘ಜೈನ್, ವಿಶ್ವವಿದ್ಯಾಲಯವು ಸ್ವಾಯತ್ತ (ಡೀಮ್ಸ್‌) ವಿವಿಯಾಗಿದ್ದು, ಆಡಳಿತ ಮಂಡಳಿ ಗಮನಕ್ಕೆ ಬಾರದೇ ಇಂತಹ ಘಟನೆ ನಡೆಯಲು ಸಾಧ್ಯವಿಲ್ಲ. ಉದ್ದೇಶಪೂರ್ವಕವಾಗಿಯೇ ಅವಮಾನ ಮಾಡಲಾಗಿದೆ’ ಎಂದು ದೂರಿದರು.

‘ಪ್ರಾಧ್ಯಾಪಕರು, ಡೀನ್‍ಗಳು ನೋಡಿದ ನಂತರವೇ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರುತ್ತದೆ. ಜೈನ್ ವಿಶ್ವವಿದ್ಯಾಲಯವನ್ನು ಮುಚ್ಚಬೇಕು’ ಎಂದು ಪಟ್ಟು ಹಿಡಿದರು. ಅಲ್ಲದೆ, ಈಗಲೇ ಈ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿ ಸಭಾಧ್ಯಕ್ಷರ ಪೀಠದ ಎದುರು ಧರಣಿಗೆ ಮುಂದಾದರು.

ಕೋಳಿಗೂಡಿನಂತಿರುವ ಜೈನ್ ವಿವಿಗೆ ಸ್ಥಾಯತ್ತ ಸ್ಥಾನ ನೀಡಿದ್ದು ಯಾರು? ಸರಿಯಾಗಿ ಶಿಕ್ಷಣ ನೀಡುವ ಯೋಗ್ಯತೆ ಇಲ್ಲದ ಇಂತಹವರು ಸಂವಿಧಾನ ಶಿಲ್ಪಿ, ವಿಶ್ವ ನಾಯಕ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವುದು ಅಕ್ಷಮ್ಯ ಈ ವಿಶ್ವ ವಿದ್ಯಾನಿಲಯದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅನ್ನದಾನಿ ಏರು ಧ್ವನಿಯಲ್ಲಿ ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ಯು.ಟಿ. ಖಾದರ್, ‘ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಜೈನ್ ವಿಶ್ವವಿದ್ಯಾಲಯದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಆಡಳಿತ ಮಂಡಳಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ’ ಎಂದು ಆರೋಪಿಸಿದರು.

ವಿಶ್ವವಿದ್ಯಾನಿಲಯವೆಂದು ಪರಿಗಣಿಸಲು ಅವರಿಗೆ ಯಾವುದೇ ನೈತಿಕ ಹಕ್ಕುಗಳಿಲ್ಲ. ಕಾಲೇಜಿಗೆ ಮೂಲ ಸೌಕರ್ಯವೂ ಇಲ್ಲ,'' ಎಂದರು. ಇದಕ್ಕೆ ಉತ್ತರಿಸಿದ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ಈ ಘಟನೆಯನ್ನು ಸರ್ಕಾರ ಬಿಡುವುದಿಲ್ಲ. ವಿಶ್ವವಿದ್ಯಾನಿಲಯವು ಭಾಗಿಯಾಗಿದ್ದರೆ, ನಾವು ಕ್ರಮ ಕೈಗೊಳ್ಳುತ್ತೇವೆ. ಪ್ರಸ್ತುತ, ವಿದ್ಯಾರ್ಥಿಗಳು ಸ್ಕಿಟ್ ಪ್ರದರ್ಶಿಸಿದಂತೆ ತೋರುತ್ತಿದೆ ಮತ್ತು ಇದನ್ನು ಆಧರಿಸಿ, ನಾವು ವಿಶ್ವವಿದ್ಯಾಲಯದ ಡೀಮ್ಡ್ ಸ್ಥಾನಮಾನವನ್ನು ಹಿಂಪಡೆಯಲು ಸಾಧ್ಯವಿಲ್ಲ.  ನಾವು ತನಿಖೆ ನಡೆಸಿ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವಂತೆ ಕೇಳುತ್ತೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com