ಹೆಚ್ಚಿನ ಸಂಖ್ಯೆಯ ಮನೆಗಳಿಗೆ ಜಾಸ್ತಿ ಗ್ಯಾರಂಟಿ ಕಾರ್ಡ್ ತಲುಪಿಸುವ ಕಾರ್ಯಕರ್ತರಿಗೆ ಟಿವಿ ಗಿಫ್ಟ್: ಡಿಕೆ ಶಿವಕುಮಾರ್
ಚಾಮರಾಜನಗರ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಮಹಿಳಾ ಯಜಮಾನಿಗೆ ತಿಂಗಳಿಗೆ 2 ಸಾವಿರ ನೀಡುವ ಗ್ಯಾರೆಂಟಿ ಕಾರ್ಡ್ ಅನ್ನು ಹೆಚ್ಚು ಮನೆಗಳಿಗೆ ತಲುಪಿಸುವ ರಾಜ್ಯದ ಪ್ರತಿ ಹಳ್ಳಿಯ 10 ಕಾರ್ಯಕರ್ತರಿಗೆ ಟಿವಿಯನ್ನು ಉಡುಗೊರೆಯಾಗಿ ಕೊಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಾವು ಘೋಷಿಸಿರುವ ಯೋಜನೆಗಳ ವಿವರಗಳನ್ನು ಹೊಂದಿರುವ ಕಾರ್ಡ್ ಅನ್ನು ಪ್ರತಿ ಮನೆ ಮನೆಗೂ ನೀಡಬೇಕು. ಮನೆಯವರಿಂದ ಸಹಿ ಹಾಕಿಸಬೇಕು. ಹೆಚ್ಚು ಮಂದಿಯನ್ನು ನೋಂದಣಿ ಮಾಡಿದ 10 ಕಾರ್ಯಕರ್ತರ ಮನೆಗೆ ಟಿವಿ ಉಡುಗೊರೆ ಕೊಡುತ್ತೇವೆ. ಬ್ಲಾಕ್ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು ಇದನ್ನು ಗಮನಿಸಬೇಕು’ ಎಂದಿದ್ದಾರೆ.
ನೀವಿಬ್ಬರೂ ಸೇರಿ ಒಂದು ಚೆಕ್‌ಗೆ ಸಹಿ ಹಾಕಬೇಕು ಎಂದು ಪ್ರಿಯಾಂಕಾ ಗಾಂಧಿ ಅವರು ನನ್ನ ಮತ್ತು ಸಿದ್ದರಾಮಯ್ಯ ಅವರ ಸಹಿಯನ್ನು ಚೆಕ್‌ಗೆ ಹಾಕಿಸಿದರು. ಇದು ಗ್ಯಾರಂಟಿ ಕಾರ್ಡ್, 200 ಯೂನಿಟ್ ವಿದ್ಯುತ್ ಉಚಿತ, 2000 ರೂ. ಖಚಿತ. ಇದನ್ನು ಯಾರೂ ಹೆಚ್ಚು ಜನರಿಗೆ ತಲುಪಿಸುತ್ತಾರೋ ಅವರಿಗೆ ಟಿವಿಯನ್ನು ಬಹುಮಾನವಾಗಿ ಕೊಡಿ ಎಂದರು. ನೀವು ಭೇಟಿ ನೀಡಿರುವ ಮನೆಯವರು ಯಾವುದೇ ಪಕ್ಷದ ಬೆಂಗಲಿಗರಾಗಿರಲಿ, ಕಾಂಗ್ರೆಸ್ ಪ್ರಣಾಳಿಕೆಯನ್ನು ಅವರಿಗೆ ತಿಳಿಸಬೇಕು’ ಎಂದಿದ್ದಾರೆ.
ಹೊರಗಿಂದ ಬಂದ ಕೆಲವರು ಕ್ಷೇತ್ರದ ಜನರಿಗೆ ಹಣ ಮತ್ತಿತರ ಆಮಿಷ ತೋರಿಸುತ್ತಿದ್ದಾರೆ ಎಂದು ಶಾಸಕ ನರೇಂದ್ರ ಹೇಳಿದ್ದಾರೆ. ನಾನು ಮತದಾರರಿಗೆ ಹೇಳುವುದಿಷ್ಟೆ. ಬಿಜೆಪಿ ಅವರಾಗಲಿ, ಜೆಡಿಎಸ್‌ನವರಾಗಲಿ, ಮತ್ತೊಬ್ಬರಾಗಲಿ ದುಡ್ಡು ಕೊಟ್ಟರೆ ಸ್ವೀಕರಿಸಿ, ಓಟ್ ಮಾತ್ರ ಕಾಂಗ್ರೆಸ್‌ಗೆ ಹಾಕಿ ಎಂದು ಸಲಹೆ ನೀಡಿದರು. ಈಗಾಗಲೇ 200 ಯೂನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ .2000, 10 ಕೆ.ಜಿ. ಉಚಿತ ಅಕ್ಕಿಯನ್ನು ಅಧಿಕೃತವಾಗಿ ಘೋಷಿಸಿದ್ದೇವೆ. ನಾವೇನಾದರೂ ಈ ಭರವಸೆ ಈಡೇರಿಸದಿದ್ದರೆ ಇನ್ನು ಮುಂದೆ ಮತ ಕೇಳಲು ನಿಮ್ಮ ಮುಂದೆ ಬರಲ್ಲ ಎಂದು ಘೋಷಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ