ಬೆಂಗಳೂರು: ಬೀದಿ ನಾಯಿಗಳಿಗೆ ಊಟ ಹಾಕಿದ್ದಕ್ಕೆ ಮಹಿಳಾ ಟೆಕ್ಕಿ ಮೇಲೆ ಕುಡುಗೋಲಿನಿಂದ ಹಲ್ಲೆ!

ಬೀದಿ ನಾಯಿಗಳಿಗೆ ಊಟ ಹಾಕಿದ್ದಕ್ಕೆ ಮಹಿಳಾ ಟೆಕ್ಕಿ ಮೇಲೆ ಇಬ್ಬರು ಪುರುಷರು ಹಲ್ಲೆ ನಡೆಸಿರುವ ಘಟನೆ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೀದಿ ನಾಯಿಗಳಿಗೆ ಊಟ ಹಾಕಿದ್ದಕ್ಕೆ ಮಹಿಳಾ ಟೆಕ್ಕಿ ಮೇಲೆ ಇಬ್ಬರು ಪುರುಷರು ಹಲ್ಲೆ ನಡೆಸಿರುವ ಘಟನೆ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿದೆ.

ಶ್ರೀ ಬೃಂದಾವನ್ ಲೇಔಟ್ ನಲ್ಲಿರುವ ವರುಣ್ ಅಪಾರ್ಟ್ ಮೆಂಟ್ ನಿವಾಸಿ ಮೀರಾ ತಿವಾರಿ ಹಲ್ಲೆಗೊಳಗಾಗಿದ್ದು ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಡಾವಣೆಯ ಒಳಗೆ 17 ಬೀದಿನಾಯಿಗಳು ಹಾಗೂ ಬಡಾವಣೆಯ ಹೊರಗೆ 16 ಬೀದಿ ನಾಯಿಗಳಿವೆ. ನನ್ನ ಸ್ವಂತ ಖರ್ಚಿನಿಂದ ನಾನು ಅವುಗಳಿಗೆ ಆಹಾರ ನೀಡುತ್ತೇನೆ. ಇದು ಬಡಾವಣೆಯ ಕೆಲವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ದಾಳಿಯ ಸಂಜೆ, ನಾನು ಮೊಟ್ಟೆಗಳನ್ನು ಖರೀದಿಸಲು ಹತ್ತಿರದ ಪ್ರಾವಿಷನ್ ಸ್ಟೋರ್‌ಗೆ ಹೋದಾಗ ನಾಯಿಗಳು ನನ್ನನ್ನು ಹಿಂಬಾಲಿಸಲು ಪ್ರಾರಂಭಿಸಿದವು. ಶೆಡ್‌ನಲ್ಲಿ ಕುಳಿತಿದ್ದ ಇಬ್ಬರು ಆರೋಪಿಗಳು ನನ್ನನ್ನು ಹಿಂಬಾಲಿಸಿ ನಾಯಿಗಳಿಗೆ ಆಹಾರ ನೀಡಿದ್ದಕ್ಕಾಗಿ ನಿಂದಿಸಲು ಪ್ರಾರಂಭಿಸಿದರು ಎಂದು ಮೀರಾ ಹೇಳಿದರು.

ಆರೋಪಿಗಳಲ್ಲಿ ಒಬ್ಬ ಕುಡುಗೋಲು ಹಿಡಿದಿದ್ದ, ಮತ್ತೊಬ್ಬರು ಬೇರೆ ಆಯುಧ ಹಿಡಿದಿದ್ದ. ಸಂತ್ರಸ್ತೆಯ ಕನ್ನಡಕವನ್ನು ಕಿತ್ತು ಒಡೆದ ನಂತರ ಇಬ್ಬರೂ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ.

ಸಂತ್ರಸ್ತೆಯ ತಾಯಿ ತಮ್ಮ ಕಡೆಗೆ ಬರುತ್ತಿರುವುದನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ. ಸಂತ್ರಸ್ತೆ 112 ತುರ್ತು ಸಂಖ್ಯೆಗೆ ಡಯಲ್ ಮಾಡಿ, ಪೊಲೀಸರಿಗೆ ಕರೆ ಮಾಡಿದರು ಮತ್ತು ಅವರು ತಲುಪಿದ ನಂತರ ಆಕೆಗೆ ಮೊದಲು ಚಿಕಿತ್ಸೆ ಪಡೆಯಲು ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ಮೀರಾ ಮೇಲೆ ಹಲ್ಲೆ ನಡೆದಿರುವುದು ಇದು ಎರಡನೇ ಬಾರಿ. ಪೊಲೀಸರ ಬಳಿ ಎಲ್ಲ ಪುರಾವೆಗಳಿದ್ದರೂ ಆರೋಪಿಗಳನ್ನು ಬಂಧಿಸುವ ಬದಲು ಸಬೂಬು ನೀಡುತ್ತಿದ್ದಾರೆ ಎಂದು ದೂರಿದ್ದಾರೆ. ಮೊದಲ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ.

ನಾನು ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಬಲ್ಲೆ, ಆದರೂ ನಾನು ಹಿಂದಿಯಲ್ಲಿ ಮಾತನಾಡುತ್ತಿದ್ದುದರಿಂದ ದಾಳಿಕೋರರು ನನ್ನನ್ನು ಕನ್ನಡೇತರ ಎಂದು ನಿಂದಿಸಿದ್ದಾರೆ. ಹಿಂದಿ ಮಾತನಾಡುವ ಜನರು ಅಹಂಕಾರಿಗಳು ಎಂದು ಅವರು ಹೇಳಿದರು. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದು, ಪ್ರಸ್ತುತ 2018 ರಿಂದ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ಇರುವುದಾಗಿ ಸಂತ್ರಸ್ತೆ ತಿಳಿಸಿದ್ದಾರೆ.

ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆದ ನಂತರ ಮೀರಾ ಅವರು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣವು ತನಿಖೆಯಲ್ಲಿದೆ. ಈವರೆಗೆ ಯಾರ ಬಂಧನವೂ ಆಗಿಲ್ಲ. ಇಬ್ಬರು ಆರೋಪಿಗಳು ಸ್ಥಳೀಯರು ಎಂದು ತೋರುತ್ತಿದೆ ಎಂದು ತನಿಖಾ ತಂಡದ ಭಾಗವಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿಯ ಇತರ ಸೆಕ್ಷನ್‌ಗಳ ಜೊತೆಗೆ ಅಪಾಯಕಾರಿ ಆಯುಧಗಳಿಂದ (ಐಪಿಸಿ 324) ಗಾಯಗೊಳಿಸಿರುವ ಪ್ರಕರಣವನ್ನು ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com