ಬೆಂಗಳೂರು: ಬೆಂಗಳೂರಿನಲ್ಲಿ 117 ಸ್ಮಶಾನ ಕಾರ್ಮಿಕರನ್ನು ಸೇವೆಯಲ್ಲಿ ಖಾಯಂ ಮಾಡಲಾಗಿದೆ. ಉಳಿದ 100 ಜನರಿಗೆ ಖಾಯಂ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ಬೆಂಗಳೂರು ನಗರದ ಸ್ಮಶಾನ ಕಾರ್ಮಿಕರ ಜತೆ ಇಂದು ಬೆಳಗ್ಗೆ ಅವರು ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಉಪಾಹಾರ ಸೇವಿಸಿದ ನಂತರ ಈ ವಿಷಯ ತಿಳಿಸಿದ್ದಾರೆ.
ಇಷ್ಟು ವರ್ಷ ಸ್ಮಶಾನ ಕಾರ್ಮಿಕರ ಕಷ್ಟಗಳನ್ನು ಯಾವ ಸರ್ಕಾರಗಳೂ ಆಲಿಸಿರಲಿಲ್ಲ. ಅವರ ನೋವಿಗೆ ಸ್ಪಂದಿಸಿರಲಿಲ್ಲ, ಬಿಜೆಪಿ ಸರ್ಕಾರ ಬಡವರು, ತುಳಿತಕ್ಕೊಳಗಾದವರ ಪರವಾಗಿರುತ್ತದೆ. ಸ್ಮಶಾನ ಕಾರ್ಮಿಕರನ್ನು ಹರಿಶ್ಚಂದ್ರ ಗೆಳೆಯರ ಬಳಗ ಎಂದು ಇನ್ನು ಮುಂದೆ ಕರೆಯಬೇಕು ಎಂದು ಅಲ್ಲಿಯೇ ಇದ್ದ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದರು.
ಬಳಿಕ ಸ್ಮಶಾನ ಕಾರ್ಮಿಕರು ಸತ್ಯ ಹರಿಶ್ಚಂದ್ರ ಪ್ರತಿಮೆಯನ್ನು ನೀಡಿ ಮುಖ್ಯಮಂತ್ರಿಗಳಿಗೆ ಸನ್ಮಾನ ಮಾಡಿದರು. ಕಾರ್ಮಿಕರು ಕೊಟ್ಟಿರುವ ಸತ್ಯಹರಿಶ್ಚಂದ್ರ ಪ್ರತಿಮೆಯನ್ನು ನಾನು ದೇವರ ಮನೆಯಲ್ಲಿ ಇಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಮುಖ್ಯಮಂತ್ರಿಗಳ ಜೊತೆ ಗೃಹ ಸಚಿವ ಆರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೆಲ ತಿಂಗಳ ಹಿಂದೆ ಸಿಎಂ ಬೊಮ್ಮಾಯಿ ಪೌರ ಕಾರ್ಮಿಕರ ಜೊತೆ ಉಪಾಹಾರ ಸೇವಿಸಿದ್ದರು.
Advertisement