ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ಜೊತೆ ಹಣ ಇಂದಿನಿಂದಲೇ ನೀಡಲಾಗುತ್ತದೆ: ನಿನ್ನೆಯ ಹೇಳಿಕೆಗೆ ಆಹಾರ ಖಾತೆ ಸಚಿವ ಬದ್ಧ!

ಅನ್ನ ಭಾಗ್ಯ ಯೋಜನೆಯಡಿ ಮೊದಲಿನಂತೆ ಇರುವ 5 ಕೆಜಿ ಅಕ್ಕಿಯನ್ನು ಕಡ್ಡಾಯವಾಗಿ ನೀಡುತ್ತೇವೆ. ಹೊಸದಾಗಿ ನಮ್ಮ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವಂತೆ ಒಬ್ಬ ವ್ಯಕ್ತಿಗೆ 5 ಕೆಜಿಯಂತೆ 170 ರೂಪಾಯಿಗಳನ್ನು ಫಲಾನುಭವಿಗಳ ಖಾತೆಗಳಿಗೆ ಇಂದು ಜುಲೈ 1ರಿಂದ ಹಾಕಲಾಗುತ್ತದೆ ಎಂದು ಆಹಾರ ಖಾತೆ ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ಕೆ ಹೆಚ್ ಮುನಿಯಪ್ಪ
ಕೆ ಹೆಚ್ ಮುನಿಯಪ್ಪ

ಬೆಂಗಳೂರು: ಅನ್ನ ಭಾಗ್ಯ ಯೋಜನೆಯಡಿ(Anna Bhagya guarantee scheme) ಮೊದಲಿನಂತೆ ಇರುವ 5 ಕೆಜಿ ಅಕ್ಕಿಯನ್ನು ಕಡ್ಡಾಯವಾಗಿ ನೀಡುತ್ತೇವೆ. ಹೊಸದಾಗಿ ನಮ್ಮ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವಂತೆ ಒಬ್ಬ ವ್ಯಕ್ತಿಗೆ 5 ಕೆಜಿಯಂತೆ 170 ರೂಪಾಯಿಗಳನ್ನು ಫಲಾನುಭವಿಗಳ ಖಾತೆಗಳಿಗೆ ಇಂದು ಜುಲೈ 1ರಿಂದ ಹಾಕಲಾಗುತ್ತದೆ ಎಂದು ಆಹಾರ ಖಾತೆ ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದ್ದಾರೆ.

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಮಾರು 100ಕ್ಕೆ 90 ಭಾಗ ಖಾತೆಗಳು ಸಿದ್ದವಿದೆ. ಆಧಾರ್ ಕಾರ್ಡು ಎಲ್ಲಾ ವ್ಯವಸ್ಥೆಗಳಾಗಿದೆ. ಒಂದು ವಾರದಲ್ಲಿ ಫಲಾನುಭವಿಗಳ ಖಾತೆಗೆ ಹಣ ಪಾವತಿಯಾಗುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಇದು ದೊಡ್ಡ ಪ್ರಮಾಣದಲ್ಲಿ ಮಾಡುವ ಕಾರ್ಯಕ್ರಮ. ಈ ತಿಂಗಳೊಳಗೆ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಬೇಕು. ಸುಮಾರು 1 ಕೋಟಿ 29 ಲಕ್ಷ ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಕೊಡಬೇಕಾಗುತ್ತದೆ, ಪ್ರಕ್ರಿಯೆ ಆರಂಭವಾಗುತ್ತದೆ, ಆದಷ್ಟು ಬೇಗ ಅಕೌಂಟ್ ಗೆ ಹಣ ವರ್ಗಾವಣೆಯಾಗಲಿದೆ ಎಂದರು.

100ಕ್ಕೆ ಸುಮಾರು 90 ಭಾಗ ಆಧಾರ್ ಕಾರ್ಡು, ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡುವ ವ್ಯವಸ್ಥೆ ಸಿದ್ಧವಾಗಿದೆ. ಒಂದು ವಾರದಲ್ಲಿ ಎಲ್ಲರ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆಯಾಗುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ವ್ಯತಿರಿಕ್ತ ಹೇಳಿಕೆ: ಇನ್ನೊಂದೆಡೆ ಇಂದು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ ಜುಲೈ 10ರಿಂದ ಹಣ ನೀಡುವ ಪ್ರಕ್ರಿಯೆ ಆರಂಭವಾಗಬಹುದು, ಜುಲೈ 1ರಿಂದ ನೀಡುತ್ತೇವೆ ಎಂದು ನಾವು ಹೇಳಿಲ್ಲ ಎಂದಿದ್ದಾರೆ.

ಮುಂದಿನ ತಿಂಗಳು ಹಣ ಸಿಗಬಹುದು: ಇನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸಾಮಾನ್ಯವಾಗಿ ಪ್ರತಿ ತಿಂಗಳು 10ರಿಂದ 20ನೇ ತಾರೀಖಿನವರೆಗೆ ಅಕ್ಕಿಯನ್ನು ಬಿಪಿಎಲ್ ಕಾರ್ಡುದಾರರಿಗೆ ವಿತರಿಸಲಾಗುತ್ತದೆ.  ಇದೇ ತಿಂಗಳು ಅಂದರೆ ಮುಂದಿನ ತಿಂಗಳು ಫಲಾನುಭವಿಗಳ ಖಾತೆಗೆ ಹಣ ವಿತರಣೆಯಾಗುತ್ತದೆ. ಈ ತಿಂಗಳ ಅಕ್ಕಿಗೆ ಮುಂದಿನ ತಿಂಗಳು ಹಣ ನೀಡುವುದು ಎಂಬುದು ವ್ಯವಸ್ಥೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com