ಬೆಂಗಳೂರು: ಕಾಂಗ್ರೆಸ್ ಐದು ಗ್ಯಾರಂಟಿ ಘೋಷಣೆ ವಿಳಂಬ ವಿರೋಧಿಸಿ, 5 ಗ್ಯಾರಂಟಿಗಳಿಗೆ ವಿಧಿಸಿರುವ ಷರತ್ತುಗಳು, ಗೋ ಹತ್ಯೆ ಮತ್ತು ಮತಾಂತರ ಕಾಯ್ದೆಯನ್ನ ವಾಪಾಸ್ ಪಡೆಯುತ್ತಿರುವ ಬಗ್ಗೆ ವಿರೋಧಿಸಿ ಇಂದು ಮಂಗಳವಾರ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ನಗರದ ಫ್ರೀಡಂ ಪಾರ್ಕ್ ನಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದ ನಳಿನ್‍ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ ಸೇರಿದಂತೆ ಮಾಜಿ ಸಚಿವರು , ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.
ಮಾಜಿ ಸಚಿವರಾದ ಗೋಪಾಲಯ್ಯ, ಬಿ.ಸಿ.ನಾಗೇಶ್, ಎನ್. ಮಹೇಶ್, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸೋಮಶೇಖರ್ ರೆಡ್ಡಿ, ಪರಿಷತ್ ಸದಸ್ಯ ಎನ್.ರವಿಕುಮಾರ್ ಸೇರಿದಂತೆ ಹಲವರು ಭಾಗಿಯಾಗಿ, ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಕಾಂಗ್ರೆಸ್ ಐದು ಗ್ಯಾರಂಟಿ ಗಳ ಪೈಕಿ ಶಕ್ತಿ ಯೋಜನೆ ಮಾತ್ರ ಜಾರಿಗೊಂಡಿದೆ. ಇನ್ನು ಅನ್ನಭಾಗ್ಯ ಯೋಜನೆ ಜಾರಿಗೊಂಡರೂ ಅಕ್ಕಿ ಬದಲಾಗಿ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರದ ಐದು ಕೆಜಿ ಅಕ್ಕಿ ಹೊರತಾಗಿ ಕಾಂಗ್ರೆಸ್ ಘೋಷಣೆ ಮಾಡಿದ್ದ ಹತ್ತು ಕೆಜಿ ಅಕ್ಕಿಯ ಹಣ ಕೊಡಬೇಕು ಎಂದು ಬಿಜೆಪಿ ನಾಯಕರು ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭಾಷಣ ಮಾಡಿ ‘ಜನರಿಗೆ ಸುಳ್ಳು ಹೇಳಿ, ಐದು ಗ್ಯಾರಂಟಿ ಕಾರ್ಡ್ ಗಳನ್ನ ಹಂಚಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸರ್ಕಾರ ರಚನೆಯಾದ 24 ಗಂಟೆಯೊಳಗೆ ಜನರಿಗೆ ತಲುಪಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಇಂದಿನವರೆಗೆ ಜನರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ವಿಫಲವಾಗಿದ್ದರೆ ಎಂದಿದ್ದಾರೆ.
ಇನ್ನು ಸದನದಲ್ಲೂ ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ಬಿಜೆಪಿ ನಿರ್ಧಾರ ಮಾಡಿದೆ. ವಿಪಕ್ಷ ನಾಯಕ ಘೋಷಣೆ ಆಗದೆ ಇದ್ದರೂ ಕಾಂಗ್ರೆಸ್ ವಿರುದ್ಧ ತೊಡೆತಟ್ಟಲು ಬಿಜೆಪಿ ಸಿದ್ದಗೊಳ್ಳುತ್ತಿದೆ. ಈ ನಡುವೆ ಮತಾಂತರ ನಿಷೇಧ ಕಾಯ್ದೆ ರದ್ದು ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಇದನ್ನು ಸದನದಲ್ಲಿ ಎದುರಿಸಲು ಬಿಜೆಪಿ ನಿರ್ಧಾರ ಮಾಡಿದೆ.
Advertisement