'ಅನ್ನ ಭಾಗ್ಯ' ಯೋಜನೆಯ ಪರಿಣಾಮ ಇನ್ನೊಂದು ವರ್ಷದಲ್ಲಿ ಗೊತ್ತಾಗುತ್ತದೆ: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಹೆಚ್ ಮುನಿಯಪ್ಪ (ಸಂದರ್ಶನ)

'ಅನ್ನ ಭಾಗ್ಯ' ಯೋಜನೆಯಡಿ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 170 ರೂಪಾಯಿ ನಗದು ನೀಡುತ್ತಿರುವ ರಾಜ್ಯ ಸರ್ಕಾರ ಶೀಘ್ರದಲ್ಲೇ ಆಹಾರಧಾನ್ಯವನ್ನು ಅಗತ್ಯ ಪ್ರಮಾಣದಲ್ಲಿ ಸಂಗ್ರಹಿಸಿ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ಹೊಂದಿದೆ.
ಆಹಾರ ಖಾತೆ ಸಚಿವ ಕೆ ಹೆಚ್ ಮುನಿಯಪ್ಪ
ಆಹಾರ ಖಾತೆ ಸಚಿವ ಕೆ ಹೆಚ್ ಮುನಿಯಪ್ಪ

'ಅನ್ನ ಭಾಗ್ಯ' ಯೋಜನೆಯಡಿ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 170 ರೂಪಾಯಿ ನಗದು ನೀಡುತ್ತಿರುವ ರಾಜ್ಯ ಸರ್ಕಾರ ಶೀಘ್ರದಲ್ಲೇ ಆಹಾರಧಾನ್ಯವನ್ನು ಅಗತ್ಯ ಪ್ರಮಾಣದಲ್ಲಿ ಸಂಗ್ರಹಿಸಿ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ಹೊಂದಿದೆ. ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ (The New Sunday Express) ಪತ್ರಕರ್ತರೊಂದಿಗೆ ಸಂವಾದದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಅವರು ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡಿದರು. ಅದರ ಆಯ್ದ ಭಾಗ ಇಲ್ಲಿದೆ: 

‘ಅನ್ನಭಾಗ್ಯ’ ಅನುಷ್ಠಾನ ಹೇಗೆ ನಡೆಯುತ್ತಿದೆ? ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದರೆ, ಸರ್ಕಾರದ ಪ್ಲಾನ್ ಬಿ ಏನು?
ಒಂದೆರಡು ತಿಂಗಳಲ್ಲಿ ಅಕ್ಕಿ ಖರೀದಿ ಆರಂಭಿಸುತ್ತೇವೆ. ಒಂದೋ ಎರಡೋ ತಿಂಗಳಿಗೆ ಹಣ ಕೊಟ್ಟು ಆಮೇಲೆ ಅಕ್ಕಿ ಕೊಡಲು ಆರಂಭಿಸುತ್ತೇವೆ. NAFED, NCCF, ಕೇಂದ್ರೀಯ ಭಂಡಾರ್, ರಾಜ್ಯದ ಆಹಾರ ನಿಗಮ, ಮಾರ್ಕೆಟಿಂಗ್ ಫೆಡರೇಶನ್ ಮತ್ತು ಗ್ರಾಹಕ ಒಕ್ಕೂಟದಂತಹ ಏಜೆನ್ಸಿಗಳಿಂದ ಅಕ್ಕಿ ಸಂಗ್ರಹ ಮಾಡಲಿದ್ದೇವೆ. ಒಂದು ವಾರದಲ್ಲಿ ಮುಕ್ತ ಟೆಂಡರ್ ಕೂಡ ಕರೆಯುತ್ತೇವೆ. 4.42 ಕೋಟಿ ಫಲಾನುಭವಿಗಳನ್ನು ಹೊಂದಿರುವ 1.29 ಕೋಟಿ ಬಿಪಿಎಲ್ ಮತ್ತು ಎಎವೈ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ನಾವು ಹಣ ನೀಡುತ್ತಿದ್ದೇವೆ. ತಿಂಗಳಿಗೆ 841 ಕೋಟಿ ರೂಪಾಯಯಂತೆ ವರ್ಷಕ್ಕೆ 10,097 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದು ಈ ವಾರ ಮಂಜೂರಾತಿ ಸಿಗಲಿದೆ.

ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರು ಮೊದಲ ಹಂತದಲ್ಲಿ ನನಗೆ ಮಾತುಕತೆಗೆ ಸಮಯಾವಕಾಶ ನೀಡದೆ ಕೇಂದ್ರವು ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡಿದೆ. ಕೇಂದ್ರದಲ್ಲಿ 262 ಲಕ್ಷ ಟನ್ ಅಕ್ಕಿ ದಾಸ್ತಾನು ಇದ್ದು, ಇಡೀ ದೇಶಕ್ಕೆ ವಿತರಿಸಲು 135 ಲಕ್ಷ ಟನ್ ಅಗತ್ಯವಿದೆ. ನಾವು ಪಾವತಿಸಲು ಸಿದ್ಧರಿದ್ದರೂ, ಎಫ್‌ಸಿಐ ಅಧಿಕಾರಿಗಳು ಬದ್ಧರಾಗಿದ್ದರೂ, ಕೇಂದ್ರಕ್ಕೆ ಸಾಮಾನ್ಯ ಜನರ ಬದುಕಿನ ಬಗ್ಗೆ ಕಾಳಜಿಯಿಲ್ಲ. 

ಮಾರಾಟ ಸ್ಥಗಿತಗೊಳಿಸುವ ಕೇಂದ್ರದ ನೀತಿ ಎಲ್ಲ ರಾಜ್ಯಗಳಿಗೂ ಅನ್ವಯಿಸುವುದಿಲ್ಲವೇ? ಮೇ ತಿಂಗಳಲ್ಲೇ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರಲ್ಲ?
ಕೇಂದ್ರದ ಬಳಿ ಹೆಚ್ಚುವರಿ ಅಕ್ಕಿ ಇದ್ದಾಗ ಅದನ್ನು ರಾಜ್ಯಗಳಿಗೆ ಹಂಚಬೇಕು. ಎಫ್‌ಸಿಐ ನೀತಿಯು ಹೆಚ್ಚುವರಿ ಉತ್ಪಾದಿಸುವ ರಾಜ್ಯಗಳಿಂದ ಅಕ್ಕಿಯನ್ನು ಸಂಗ್ರಹಿಸುವುದು ಮತ್ತು ಆಹಾರ ಧಾನ್ಯವನ್ನು ಉತ್ಪಾದಿಸದವರಿಗೆ ವಿತರಿಸುವುದು. ಈ ಕುರಿತು ಸುತ್ತೋಲೆ ಇದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಅನ್ನಭಾಗ್ಯ ಯೋಜನೆ ಕೆಲಸ ಮಾಡಬಹುದೆಂಬ ಕಾರಣಕ್ಕೆ ರಾಜಕೀಯದಲ್ಲಿ ತೊಡಗಿ ಸಮಸ್ಯೆಗಳನ್ನು ಸೃಷ್ಟಿಸಿದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಯಾವ ರಾಜ್ಯಕ್ಕೂ ತಾರತಮ್ಯ ಮಾಡಿರಲಿಲ್ಲ.

ಖಾತರಿ ಯೋಜನೆಗಳು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ ಎಂಬ ಸಾಮಾನ್ಯ ಅಭಿಪ್ರಾಯವಿದೆಯಲ್ಲವೇ? 
ಹಸಿದವರಿಗೆ ಅನ್ನ ನೀಡುವುದರಿಂದ ಜನರು ಸೋಮಾರಿಯಾಗುವುದಿಲ್ಲ. ಇನ್ನೊಂದು ವರ್ಷದಲ್ಲಿ ಯೋಜನೆಯ ಪರಿಣಾಮ ನಮಗೆ ತಿಳಿಯುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಹಾರವನ್ನು ಸಂಪಾದಿಸಲು ಮತ್ತು ಜೀವನವನ್ನು ಮಾಡಲು ಕೆಲಸ ಮಾಡಬೇಕು ಹೌದು. ಅನ್ನ ಭಾಗ್ಯ ಯೋಜನೆಯಿಂದ ಜನಸಾಮಾನ್ಯರ ಬದುಕು ಏನಾಗುತ್ತದೆ ಎಂಬುದನ್ನು ಕಾದುನೋಡಬೇಕು. ಉತ್ಪಾದನೆಯು ಹೆಚ್ಚಾಗುತ್ತದೆಯೇ ಅಥವಾ ಜನರು ಸೋಮಾರಿಗಳಾಗುತ್ತಾರೆಯೇ ಎಂದು ನೋಡಬೇಕು. ಮುಂದಿನ ವರ್ಷ ಮೌಲ್ಯಮಾಪನವನ್ನು ಮಾಡಿ ಅಗತ್ಯವಿದ್ದರೆ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಬಹುದು. ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬುದೇ ಯೋಜನೆ ಜಾರಿಗೆ ಕಾರಣ.

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ತೆಗೆದುಕೊಳ್ಳಿ. ಯುಪಿಎ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು 2004 ರಲ್ಲಿ ಬಿಪಿಎಲ್ ಕುಟುಂಬಗಳ ಸಂಖ್ಯೆಯು ಶೇಕಡಾ 47ರಿಂದ 2014 ರ ವೇಳೆಗೆ ಶೇಕಡಾ 35ಕ್ಕೆ ಇಳಿದಿದ್ದರಿಂದ ಇದು ಉತ್ತಮ ಪರಿಣಾಮ ಬೀರಿತು. ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಸಹಾಯ ಮಾಡಿತು. ಅನ್ನಭಾಗ್ಯ ಮತ್ತು ಇತರ ಖಾತರಿಗಳು ಕೂಡ ಇದೇ ರೀತಿಯ ಯೋಜನೆಗಳಾಗಿವೆ.

ಕರ್ನಾಟಕದಂತಹ ಅಭಿವೃದ್ಧಿ ಹೊಂದಿದ ರಾಜ್ಯದಲ್ಲಿ ಏಳು ಕೋಟಿ ಜನಸಂಖ್ಯೆಗೆ ಹೋಲಿಸಿದರೆ ನಾಲ್ಕು ಕೋಟಿಗೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳಿವೆ. ಎಷ್ಟು ಮಂದಿ ನಿಜವಾದ ಫಲಾನುಭವಿಗಳು?
ಈ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗಿದೆ. ರಿಯಾಲಿಟಿ ಚೆಕ್ ಪ್ರಾರಂಭಿಸಿದ್ದೇವೆ. ಸಂಬಂಧಿಸಿದ ಕಾರ್ಯದರ್ಶಿಗೆ ಕಾರ್ಯವನ್ನು ನಿಯೋಜಿಸಲಾಗಿದೆ. ಎಲ್ಲಾ ಹೋಲ್ಡರ್‌ಗಳು ತಮ್ಮ ಕಾರ್ಡ್‌ಗಳನ್ನು ಆಹಾರ ಧಾನ್ಯಗಳಿಗಾಗಿ ಬಳಸುವುದಿಲ್ಲ. ವೈದ್ಯಕೀಯ ಉದ್ದೇಶಗಳಿಗಾಗಿ ಕಾರ್ಡ್‌ಗಳನ್ನು ಬಳಸುವವರು ಅನೇಕರಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಯೋಜಿಸುತ್ತಿದ್ದೇವೆ. ಈಗಾಗಲೇ 3 ಲಕ್ಷಕ್ಕೂ ಅಧಿಕ ಮಂದಿ ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಅನ್ನ ಭಾಗ್ಯ ಯೋಜನೆಯಡಿ ಎಷ್ಟು ಮಂದಿ ಹಣ ಪಡೆದಿದ್ದಾರೆ?
ಜುಲೈ 13 ರವರೆಗೆ 99,05,482 ಫಲಾನುಭವಿಗಳು ಬಿಪಿಎಲ್ ಮತ್ತು ಎಎವೈ ಪಡಿತರ ಚೀಟಿ ಹೊಂದಿರುವ ಸುಮಾರು 28,996 ಕುಟುಂಬಗಳಿಗೆ 162.93 ಕೋಟಿ ರೂಪಾಯಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ.

10 ಕೆಜಿ ಉಚಿತ ಅಕ್ಕಿ ಯೋಜನೆ ಘೋಷಿಸಲು ಆಧಾರವೇನು?
ಒಬ್ಬ ವ್ಯಕ್ತಿಗೆ ತಿಂಗಳಿಗೆ ಅಕ್ಕಿ ಅಗತ್ಯವನ್ನು ನಾವು ಲೆಕ್ಕ ಹಾಕುವುದಾದರೆ ಕೊಟ್ಟ ಅಕ್ಕಿ ಸಾಕಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನು 10 ಕೆಜಿಗೆ ಹೆಚ್ಚಿಸುವಂತೆ ಹಲವರು ಸಲಹೆ ನೀಡಿದ್ದಾರೆ. ಅದರಂತೆ ಒಬ್ಬರಿಗೆ ತಿಂಗಳಿಗೆ 8 ಕೆಜಿ ಅಕ್ಕಿ ಮತ್ತು 2 ಕೆಜಿ ರಾಗಿ ಅಥವಾ ಜೋಳ ನೀಡುತ್ತೇವೆ.

ಕೇಂದ್ರದಿಂದ ಬರುತ್ತಿದ್ದ 5 ಕೆಜಿ ಅಕ್ಕಿಯನ್ನು ರಾಜ್ಯ ಸರಕಾರ 3 ಕೆಜಿಗೆ ಇಳಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದಾರೆ.

ಬೊಮ್ಮಾಯಿ ಈ ವಿಷಯವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿಲ್ಲ. ಅಕ್ಕಿ ಮತ್ತು ರಾಗಿಯನ್ನು ಭಾರತೀಯ ಆಹಾರ ನಿಗಮದಿಂದ ನೀಡಲಾಗುತ್ತದೆ. ಅವರು ನಮ್ಮಿಂದ ರಾಗಿ ಖರೀದಿಸಿ ಕೇಂದ್ರದ ಯೋಜನೆಗೆ ಹಾಕುತ್ತಾರೆ. ನಂತರ, ಅವರು ಅದನ್ನು ಅಗತ್ಯವಿರುವ ರಾಜ್ಯಕ್ಕೆ ವಿತರಿಸುತ್ತಾರೆ. ಕೇಂದ್ರದ ಭರವಸೆಯ 5 ಕೆಜಿಯಲ್ಲಿ 3 ಕೆಜಿ ಅಕ್ಕಿ ಮತ್ತು 2 ಕೆಜಿ ರಾಗಿ ನೀಡುತ್ತಿದೆ. ಅದಕ್ಕೂ ರಾಜ್ಯಕ್ಕೂ ಸಂಬಂಧವಿಲ್ಲ.

ಅನ್ನ ಭಾಗ್ಯ ಯೋಜನೆಯಡಿ ನೀವು ಬೇಳೆಕಾಳುಗಳು, ಸಕ್ಕರೆ ಮತ್ತು ಇತರ ವಸ್ತುಗಳನ್ನು ಸೇರಿಸುತ್ತೀರಾ?
ಇಲ್ಲ ಈಗ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ. ವೆಚ್ಚದ ಅಂಶವನ್ನೂ ನಾವು ಪರಿಗಣಿಸಬೇಕು.

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ನೀಡದೆ, ಎಥೆನಾಲ್ ಉತ್ಪಾದನೆಗೆ ದಿಕ್ಕು ತಪ್ಪಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. 
ನಾವು ಅಕ್ಕಿಯನ್ನು ಕಿಲೋಗೆ 34 ರೂಪಾಯಿಗೆ ಖರೀದಿಸುತ್ತೇವೆ ಎಂದು ಹೇಳಿದ್ದೇವೆ, ಆದರೆ ಕೇಂದ್ರ ಸರ್ಕಾರ ಅದನ್ನು ನಿರಾಕರಿಸುತ್ತಿದೆ. ನಾವು ವಾರ್ಷಿಕ 10,000 ಕೋಟಿ ರೂಪಾಯಿ ಪಾವತಿಸುವುದಾಗಿ ಹೇಳಿದ್ದೇವೆ. ಹಣದಲ್ಲಿ ಬೆಳೆಗಾರರಿಗೆ ಉತ್ತಮ ಕನಿಷ್ಠ ಬೆಂಬಲ ಬೆಲೆ ನೀಡಬಹುದಿತ್ತು. ಅದು ಸರ್ಕಾರಕ್ಕೂ ಸಹಾಯ ಮಾಡುತ್ತಿತ್ತು. ಆದರೆ ಕೇಂದ್ರ ಮಾಡುತ್ತಿರುವ ರಾಜಕೀಯದಿಂದ ಯಾರಿಗೂ ಉಪಯೋಗವಿಲ್ಲ ಎಂಬುದು ಸಿದ್ದರಾಮಯ್ಯನವರ ಮಾತಿನ ಅರ್ಥವಾಗಿದೆ. 

ವಿತರಿಸುತ್ತಿರುವ ಅಕ್ಕಿಯ ಗುಣಮಟ್ಟ ಸರಿಯಿಲ್ಲ ಎಂಬ ಮಾತು ಕೇಳಿಬರುತ್ತಿದೆ...
ಇಲ್ಲ, ಗುಣಮಟ್ಟ ಉತ್ತಮವಾಗಿದೆ, ಯಾವುದೇ ದೂರುಗಳು ಬಂದಿಲ್ಲ. 

ಸರ್ಕಾರವು ಖಾತರಿಗಳನ್ನು ಅನುಷ್ಠಾನಗೊಳಿಸುವತ್ತ ಹೆಚ್ಚು ಗಮನಹರಿಸುತ್ತಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರುವುದಿಲ್ಲವೇ?
ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೇ ಖಾತರಿಗಳನ್ನು ಜಾರಿಗೆ ತರುತ್ತಿರುವುದು. ಮುಖ್ಯಮಂತ್ರಿಗಳು 14ನೇ ಬಾರಿಗೆ ಬಜೆಟ್ ಮಂಡಿಸಿದರು. ಅವರು ಪರಿಣಿತರು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಹಣಕಾಸಿನ ನಿರ್ಬಂಧಗಳಿಲ್ಲ. ಅದನ್ನು ಸರಿದೂಗಿಸಿಕೊಂಡು ಅಭಿವೃದ್ಧಿ ಕಾರ್ಯಗಳಿಗೂ ಪ್ರಾಮುಖ್ಯತೆ ನೀಡಿದ್ದಾರೆ. ಮುಂದಿನ ಎಂಟು ತಿಂಗಳಿಗೆ, ಖಾತರಿಗಾಗಿ ನಮಗೆ 35,000 ಕೋಟಿ ರೂಪಾಯಿ ಬೇಕಾಗುತ್ತದೆ. ನಾವು ಈಗಾಗಲೇ ಮೂರು ಗ್ಯಾರಂಟಿಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಇನ್ನೆರಡು ಶೀಘ್ರದಲ್ಲಿಯೇ ಜಾರಿಗೆ ಬರಲಿದೆ. 

2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭವಿಷ್ಯ ಹೇಗಿದೆ?
ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳ ಪೈಕಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಅವರು 2014 ಮತ್ತು 2019 ರಲ್ಲಿ ದೇಶವನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರು. ಆದರೆ ಇದು ಮೂರನೇ ಬಾರಿಗೆ ಕೆಲಸ ಮಾಡುವುದಿಲ್ಲ. 

ಇಷ್ಟೊಂದು ಆತ್ಮವಿಶ್ವಾಸದಿಂದ ಹೇಗೆ ಹೇಳುತ್ತೀರಿ? 
ಭಾವನೆಗಳಿಗಿಂತ ತಮ್ಮ ಜೀವನ ಮತ್ತು ಜೀವನೋಪಾಯ ಮುಖ್ಯ ಎಂದು ಜನರು ಅರಿತುಕೊಂಡಿದ್ದಾರೆ. 2014-19ರಲ್ಲಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗಲೂ ನಾನು ಲೋಕಸಭಾ ಸದಸ್ಯನಾಗಿದ್ದೆ. ಎರಡು ಕೋಟಿ ಉದ್ಯೋಗ, ಪ್ರತಿಯೊಬ್ಬ ನಾಗರಿಕನ ಖಾತೆಗೆ 15 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದರು. ಹಲವು ಭರವಸೆಗಳನ್ನು ನೀಡಿದ್ದರು. ಆದರೆ ಸರಕಾರ ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲ. 

ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ, ಮೋದಿ ಸರ್ಕಾರವು ಗಮನಾರ್ಹವಾದ ಕೆಲಸ, ಸಾಧನೆ ದೇಶದಲ್ಲಿ ಇದುವರೆಗೆ ಮಾಡಿಲ್ಲ. ಯುಪಿಎ ಅಧಿಕಾರದಲ್ಲಿದ್ದಾಗ ಪ್ರಧಾನಿ ಮನಮೋಹನ್ ಸಿಂಗ್ ಅವರು 72 ಸಾವಿರ ಕೋಟಿ ರೂಪಾಯಿಗಳ ರೈತರ ಸಾಲ ಮನ್ನಾ ಮಾಡಿದ್ದರೆ, ಮೋದಿ ಸರಕಾರ ಕಾರ್ಪೊರೇಟ್ ಕಂಪನಿಗಳ 15 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಗೆ ನಿರ್ವಹಿಸಿದರು ಎಂಬುದನ್ನು ಹೇಳಿಲ್ಲ. ನಾವು ರೇಷ್ಮೆ ಮೇಲೆ ಶೇಕಡಾ 15ರಷ್ಟು ಆಮದು ಸುಂಕವನ್ನು ವಿಧಿಸಿದ್ದೆವು, ಆದರೆ ಮೋದಿ ಸರ್ಕಾರ ಅದನ್ನು ಶೇಕಡಾ ರಷ್ಟು ಕಡಿಮೆ ಮಾಡಿದ್ದು ನಮ್ಮ ರೇಷ್ಮೆ ಬೆಳೆಯುವ ರೈತರಿಗೆ ಹಾನಿಯಾಗಿದೆ. ಎಂಎನ್‌ಆರ್‌ಇಜಿಎ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಅವರು ಏನು ಮಾಡಿದ್ದಾರೆ ಹೇಳಿ.

ಲೋಕಸಭೆ ಚುನಾವಣೆಯಲ್ಲಿ ದೇಶದ ಭದ್ರತೆ ಮತ್ತು ವಿದೇಶಾಂಗ ನೀತಿಗಳೂ ಪ್ರಮುಖ ವಿಷಯಗಳಾಗಿವೆ...
ಹೌದು, ಇವು ಕೂಡ ಪ್ರಮುಖ ಅಂಶಗಳಾಗಿವೆ. ಪ್ರಧಾನಿಯವರು ಹಲವು ದೇಶಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಆದರೆ ನಾವು ನಮ್ಮ ಮನೆಯನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು.

ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಖಾತರಿ ಯೋಜನೆಗಳು ಸಹಾಯ ಮಾಡುತ್ತವೆಯೇ?
ಬರೀ ಗ್ಯಾರಂಟಿಗಳಲ್ಲ. ನೋಟು ಅಮಾನ್ಯೀಕರಣ ಸೇರಿದಂತೆ ಮೋದಿ ಸರ್ಕಾರ ಮಾಡಿದ ತಪ್ಪುಗಳು ನಮಗೆ ಸಹಾಯ ಮಾಡುತ್ತವೆ. ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ನಮ್ಮ ಬದ್ಧತೆಯನ್ನು ತೋರಿಸುತ್ತಿದ್ದೇವೆ. ಚುನಾವಣೆಗಾಗಿ ನಾವು ಭರವಸೆಗಳನ್ನು ಜಾರಿಗೊಳಿಸಿಲ್ಲ. ಯಾವುದೇ ಜನಪ್ರಿಯ ಚುನಾಯಿತ ಸರ್ಕಾರವು ಸಾಮಾನ್ಯ ಜನರು ಮತ್ತು ಅರ್ಹರನ್ನು ನೋಡಿಕೊಳ್ಳಬೇಕು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ, ಟೊಮೆಟೊ ಮತ್ತು ಇತರ ತರಕಾರಿಗಳ ಬೆಲೆ ಏರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಪರಿಹಾರವೇನು?
ಅತಿಯಾದ ರಸಗೊಬ್ಬರಗಳ ಬಳಕೆಯಿಂದ ಸಸ್ಯಗಳಿಗೆ ರೋಗಗಳು ತಗುಲಿ ಉತ್ಪಾದನೆ ಕಡಿಮೆಯಾಗಿದೆ. ಅದೇ ಸಮಯದಲ್ಲಿ, ಬಳಕೆ ಹೆಚ್ಚಾಗುತ್ತಿದೆ, ಇದೇ ಬೆಲೆ ಏರಿಕೆಗೆ ಕಾರಣವಾಗಿದೆ. 

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೇ ಇಲ್ಲ. ಕಾಂಗ್ರೆಸ್ ಇದನ್ನು ಹೇಗೆ ನೋಡುತ್ತಿದೆ?
ಅವರು ಇದನ್ನು ಹೆಚ್ಚು ಮುಂಚಿತವಾಗಿ ಅಥವಾ ಕನಿಷ್ಠ ವಿಧಾನಸಭೆ ಅಧಿವೇಶನ ಪ್ರಾರಂಭವಾಗುವ ಮೊದಲು ಮಾಡಬೇಕಿತ್ತು. ಪ್ರತಿಪಕ್ಷಗಳು ಬಲವಾಗಿರಬೇಕು. ಪ್ರತಿಪಕ್ಷಗಳು ಬಲಿಷ್ಠವಾಗಿದ್ದರೆ ಸರ್ಕಾರ ಎಚ್ಚೆತ್ತುಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಅದೊಂದು ಸಹಜ ವಿದ್ಯಮಾನ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಭಯ ಸದನಗಳಲ್ಲಿ (ಅಸೆಂಬ್ಲಿ ಮತ್ತು ಕೌನ್ಸಿಲ್) ವಿರೋಧ ಪಕ್ಷದ ನಾಯಕರಿರಬೇಕು. ಆದಷ್ಟು ಬೇಗ ನೇಮಕಾತಿ ಮಾಡಿಕೊಳ್ಳುವುದು ಬಿಜೆಪಿಯವರಿಗೆ ಒಳ್ಳೆಯದು. 

ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ಅನರ್ಹತೆಯ ಬಗ್ಗೆ ನಿಮ್ಮ ಅಭಿಪ್ರಾಯ?
ಇದು ಬಿಜೆಪಿಯ ಸೇಡಿನ ರಾಜಕಾರಣ. ಇದು ಯಾವ ಸರ್ಕಾರದ ಅವಧಿಯಲ್ಲಿಯೂ ನಡೆದಿಲ್ಲ. ಸಾಮಾನ್ಯ ಜನರು ಕೂಡ ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದಕ್ಕಾಗಿ ಸಂಸದರನ್ನು ತೆಗೆದುಹಾಕಲಾಯಿತು. ಇಂತಹ ನಡೆ ಬೇಕಿತ್ತಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷವೂ ಬಲಿಷ್ಠವಾಗಿರಬೇಕು. ಮಾತನಾಡಲು ಅವಕಾಶ ನಿರಾಕರಿಸುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಈಗ ಸುಪ್ರೀಂ ಕೋರ್ಟ್ ಗೆ ಪ್ರಕರಣ ಹೋಗಿದೆ. ನಮಗೆ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com