ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು 11 ಸಾವಿರ ರೂ. ಲಂಚ: ವೈದ್ಯರಿಂದ ಹಣ ವಾಪಸ್ ಕೊಡಿಸಿದ ಲೋಕಾಯುಕ್ತ ಪೊಲೀಸರು

ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲು ವೈದ್ಯರು 11 ಸಾವಿರ ರೂ. ಲಂಚ ಸ್ವೀಕರಿಸಿರುವುದು ಬಯಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಹಣವನ್ನು ವಾಪಸ್ ಕೊಡಿಸಿದ್ದಾರೆ.
ಡಿಎಸ್ ಪಿ ಪ್ರದೀಪ್ ಕುಮಾರ್
ಡಿಎಸ್ ಪಿ ಪ್ರದೀಪ್ ಕುಮಾರ್
Updated on

ಬೆಂಗಳೂರು: ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲು ವೈದ್ಯರು 11 ಸಾವಿರ ರೂ. ಲಂಚ ಸ್ವೀಕರಿಸಿರುವುದು ಬಯಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಹಣವನ್ನು ವಾಪಸ್ ಕೊಡಿಸಿದ್ದಾರೆ.

ಕೂಲಿ ಕಾರ್ಮಿಕ ಲಿಂಗಪ್ಪ ತನ್ನ ಪತ್ನಿ ಮಂಜುಳಾ ಅವರನ್ನು ಚೊಚ್ಚಲ ಹೆರಿಗೆ ಸಲುವಾಗಿ ಯಲಹಂಕ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಹೆರಿಗೆ ನೋವು ಅನುಭವಿಸುತ್ತಿದ್ದ ಮಂಜುಳಾ ಅವರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವುದಾಗಿ ಸ್ತ್ರೀರೋಗ ತಜ್ಞ ಡಾ.ರಾಮಚಂದ್ರ ಅಭಯ ನೀಡಿದ್ದರು. ಆದರೆ, ಕೆಲವೇ ನಿಮಿಷಗಳಲ್ಲಿ ವೈದ್ಯರ ಪರವಾಗಿ ವಾರ್ಡ್‌ಬಾಯ್‌ ವಹೀದ್‌ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಅಂತಿಮವಾಗಿ ಮಂಜುಳಾ ಸಂಬಂಧಿಕರು 11 ಸಾವಿರ ರೂ.ಗಳನ್ನು ವಹೀದ್‌ಗೆ ನೀಡಿದ್ದರು. ಬಳಿಕ ಡಾ.ರಾಮಚಂದ್ರ ಶಸ್ತ್ರಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಿದ್ದರು. ಮಂಜುಳಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಈ ಬೆಳವಣಿಗೆಗಳ ನಡುವೆ ವೈದ್ಯ ಹಾಗೂ ವಾರ್ಡ್‌ ಬಾಯ್‌ ಲಂಚ ಬೇಡಿಕೆ ಕುರಿತು ಮಂಜುಳಾ ಸಂಬಂಧಿ ಮೌನೇಶ್‌ ಲೋಕಾಯುಕ್ತ ಕಚೇರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು. ಲೋಕಾಯುಕ್ತರ ಸೂಚನೆ ಮೇರೆಗೆ ಆಸ್ಪತ್ರೆಗೆ ದೌಡಾಯಿಸಿದ ಡಿವೈಎಸ್ಪಿ ಪ್ರದೀಪ್‌ಕುಮಾರ್‌ ಲಂಚದ ಹಣ ಸ್ವೀಕರಿಸಿದ್ದ ವಹೀದ್‌ನನ್ನು ವಶಕ್ಕೆ ಪಡೆದಿದ್ದರು. ಆದರೆ, ಅಷ್ಟರಲ್ಲಾಗಲೇ ವೈದ್ಯ ಡಾ. ರಾಮಚಂದ್ರ ಆಸ್ಪತ್ರೆಯಿಂದ ಹೊರಟು ಹೋಗಿದ್ದರು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಮೌನೇಶ್ ಎಂಬ ವ್ಯಕ್ತಿ ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದರು, ಅದರಂತೆ ಲೋಕಾಯುಕ್ತ ಪೊಲೀಸ್ ಡಿಎಸ್ಪಿ ಪ್ರದೀಪ್ ಕುಮಾರ್ ಆಸ್ಪತ್ರೆಗೆ ಧಾವಿಸಿದರು. ಲಂಚ ಪಡೆದ ವೈದ್ಯರು ಹಾಗೂ ವಾರ್ಡ್‌ಬಾಯ್‌ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ್‌ ಮುಂದಾಗಿದ್ದಾರೆ.

ಲೋಕಾಯುಕ್ತ ಪೊಲೀಸರು ಲಂಚದ ಹಣದ ಸಮೇತ ವಶಕ್ಕೆ ಪಡೆದ ಕೂಡಲೇ ಕಂಗಾಲಾದ ವಹೀದ್‌, ವೈದ್ಯ ಡಾ. ರಾಮಚಂದ್ರ ಪರವಾಗಿ ಲಂಚದ ಹಣ ಸ್ವೀಕರಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರ ಸಮ್ಮುಖದಲ್ಲಿಯೇ ವೈದ್ಯರಿಗೆ ಕರೆ ಮಾಡಿ ಹಣ ನೀಡುವ ಬಗ್ಗೆ ಪ್ರಸ್ತಾಪಿಸಿದ್ದ. ಈ ವೇಳೆ ಡಾ. ರಾಮಚಂದ್ರ ''ನರ್ಸ್‌ಗೆ 500 ರೂ. ಕೊಡು, ನೀನು 500 ರೂ. ತೆಗೆದುಕೋ. ಉಳಿದ ಹಣ ಅಪೂರ್ವಗೆ ನೀಡು'' ಎಂದು ಹೇಳಿದ್ದಾರೆ. ಈ ಧ್ವನಿಮುದ್ರಿಕೆ ಹಾಗೂ ವಿಡಿಯೊ ಸಾಕ್ಷ್ಯವನ್ನು ಜಪ್ತಿ ಮಾಡಲಾಗಿದೆ. ಇಡೀ ಘಟನೆ ಕುರಿತು ಲೋಕಾಯುಕ್ತರಿಗೆ ವರದಿ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಹೆರಿಗೆಗೆ ಆಗಮಿಸಿದವರ ಬಳಿಯೂ ಲಂಚ ಪಡೆಯುವ ಘಟನೆ ಅತ್ಯಂತ ಅಮಾನವೀಯವಾಗಿದೆ. ಘಟನೆ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತದೆ.  ಹಣವನ್ನು ವಾಪಸ್ ಕೊಡಿಸಲಾಗಿದ್ದು ಆರೋಪಿತ ವೈದ್ಯರು ಮಾತ್ರವಲ್ಲದೆ ಆರೋಗ್ಯ ಇಲಾಖೆಯನ್ನು ಪ್ರತಿವಾದಿಯನ್ನಾಗಿಸಿ ನೋಟಿಸ್‌ ಜಾರಿಗೊಳಿಸಲಾಗುವುದು ಎಂದು ಲೋಕಾಯುಕ್ತ ಬಿ.ಎಸ್‌. ಪಾಟೀಲ್‌ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com