ಸಿದ್ದರಾಮಯ್ಯ
ಸಿದ್ದರಾಮಯ್ಯ

ಜೈನಮುನಿ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ: ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಕಟ

ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿದ ಬೆಳಗಾವಿ ಜಿಲ್ಲೆಯ ಜೈನಮುನಿ ನಂದಿ ಕಾಮಕುಮಾರ ಸ್ವಾಮೀಜಿ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ. 
Published on

ಬೆಂಗಳೂರು: ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿದ ಬೆಳಗಾವಿ ಜಿಲ್ಲೆಯ ಜೈನಮುನಿ ನಂದಿ ಕಾಮಕುಮಾರ ಸ್ವಾಮೀಜಿ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ. 

ಇಂದು ಬುಧವಾರ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಪ್ರಕಟಿಸಿದ್ದಾರೆ. ಜೈನ ಮುನಿಯನ್ನು ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಆದರೆ ಹತ್ಯೆ ಪ್ರಕರಣದಲ್ಲಿ ಬೇರೆ ಆಯಾಮ ಇದೆ. ಈ ಹಿನ್ನೆಲೆಯಲ್ಲಿ ಇದನ್ನು ಸಿಬಿಐ ತನಿಖೆಗೆ ‌ನೀಡಬೇಕು ಎಂದು‌ ಬಿಜೆಪಿ ಆಗ್ರಹಿಸಿತ್ತು. ಆದರೆ ಇದೀಗ ಸರ್ಕಾರ ಸಿಐಡಿ ತನಿಖೆಗೆ ನೀಡಲು ನಿರ್ಧಾರ ಮಾಡಿದೆ ಎಂದು ತಿಳಿಸಿದರು.

ನಡೆದ ಘಟನೆಯೇನು?: ಕಳೆದ ಜುಲೈ 6ರಂದು ಬೆಳಗ್ಗೆಯಿಂದ ನಂದಿ ಕಾಮಕುಮಾರ ಸ್ವಾಮಿಗಳು ಆಶ್ರಮದಲ್ಲಿ ಕಾಣಸಿಗಲಿಲ್ಲ. ಆಗ ಆತಂಕಗೊಂಡ ಭಕ್ತರು ಎಲ್ಲ ಕಡೆ ಹುಡುಕಿದರೂ ಮುನಿಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಚಿಕ್ಕೋಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. 

ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು. ಶುಕ್ರವಾರ ರಾತ್ರಿ ಪೊಲೀಸರು ಶಂಕಿತ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆರೋಪಿಗಳು ರಾಯಬಾಗ ತಾಲೂಕಿನ ಕಟಕಬಾವಿ ಗ್ರಾಮದ ಹೊರವಲಯದ ಬೋರ್‌ವೆಲ್‌ನಲ್ಲಿ ಜೈನ ಮುನಿಗಳ ಶವ ಎಸೆದಿರುವುದಾಗಿ ಮಾಹಿತಿ ನೀಡಿದ್ದರು. ಹೀಗಾಗಿ ಪೊಲೀಸರು ರಾತ್ರಿಯಿಂದಲೇ ಕಾರಾರ‍ಯಚರಣೆ ಆರಂಭಿಸಿದ್ದರು. ಜೈನ ಮುನಿಗಳ ದೇಹದ ತುಂಡುಗಳನ್ನು ಬಟ್ಟೆಯಲ್ಲಿ ಕಟ್ಟಿ ತೆರೆದ ಕೊಳವೆ ಬಾವಿಯಲ್ಲಿ ಆರೋಪಿಗಳು ಎಸೆದಿದ್ದರು. 20 ಅಡಿ ಆಳದಲ್ಲಿ ಶವದ ಭಾಗಗಳು ಪತ್ತೆಯಾಗಿತ್ತು.

ಹಣಕಾಸು ವ್ಯವಹಾರ: ಆರಂಭದಲ್ಲಿ ಹಣಕಾಸಿನ ವ್ಯವಹಾರಕ್ಕಾಗಿ ಜೈನ ಮುನಿಗಳ ಕೊಲೆ ಮಾಡಲಾಗಿದೆ ಎನ್ನಲಾಗಿತ್ತು. ಕೊಲೆ ಆರೋಪದಲ್ಲಿ ಹಿರೇಕೋಡಿ ಗ್ರಾಮದ ನಾರಾಯಣ ಮಾಳಿ ಮತ್ತು ಹುಸೇನ್‌ ಡಾಲಾಯತ ಎಂಬುವವರನ್ನು ಬಂಧಿಸಲಾಗಿದೆ. ಕೊಲೆ ಆರೋಪಿ ಮುನಿಗಳಿಂದ ಹಣ ಪಡೆದಿದ್ದ. ಹಣ ಮರಳಿಸುವಂತೆ ಮುನಿಗಳು ಕೇಳಿದ್ದರಿಂದ ಕೊಲೆ ಮಾಡಲಾಗಿದೆ ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com