ಒಂದೆಡೆ ಗ್ಯಾರಂಟಿ ಎಂದು ಹೇಳ್ಕೊಂಡು ಮತ್ತೊಂದೆಡೆ ದುಡ್ಡು ಕಿತ್ಕೊಳ್ತಿದ್ದಾರೆ, ಜನ ಮುಟ್ಠಾಳರಾಗ್ತಿದ್ದಾರೆ: 'ನಂದಿನಿ' ಬೆಲೆ ಏರಿಕೆ ಬೆನ್ನಲ್ಲೇ ಆಕ್ರೋಶ

ತರಕಾರಿ, ದವಸ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಿರುವುದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತರಕಾರಿ, ದವಸ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಿರುವುದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನಂದಿನ ಹಾಲಿನ ದರವನ್ನು ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಆಗಸ್ಟ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ನಿನ್ನೆ ಶುಕ್ರವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕೆಎಂಎಫ್ ಸಭೆಯಲ್ಲಿ  ಈ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳಕ್ಕೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಅಂತಿಮವಾಗಿ 3 ರೂಪಾಯಿ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಸಮ್ಮತಿ ನೀಡಿದ್ದಾರೆ. ನಂದಿನ ಹಾಲಿನ ದರ ಪರಿಷ್ಕರಣೆ ಸಂಬಂಧ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಎಂಎಫ್ ಆಡಳಿತ ಮಂಡಳಿ ಹಾಗೂ ಹಾಲು ಒಕ್ಕೂಟಗಳ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ. ಪಶುಸಂಗೋಪನ ಇಲಾಖೆ ಸಚಿವ ಕೆ.ವೆಂಕಟೇಶ್, ಕೆಎಂಎಫ್​ ಅಧ್ಯಕ್ಷ ಭೀಮಾ ನಾಯ್ಕ್, ಆಡಳಿತ ಮಂಡಳಿ ಸದಸ್ಯರು ಮತ್ತು ಕೆಎಂಎಫ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಸಿಎಂ ಜೊತೆ ಸಭೆ ಬಳಿಕ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ನೀಡಿ, ಹಾಲು ಉತ್ಪಾದಕರ ಹಿತ ಕಾಯಲು ದರ ಏರಿಕೆ ಅನಿವಾರ್ಯ. ನಮ್ಮ ರಾಜ್ಯ ಅತಿ ಕಡಿಮೆ ದರದಲ್ಲಿ ಹಾಲು ಮಾರಾಟ ಮಾಡುತ್ತಿದ್ದೇವೆ. ಹಾಲು ಉತ್ಪಾದನಾ ದರ ಹೆಚ್ಚಾಗಿರುವುದರಿಂದ ರೈತರಿಗೆ ಹೊರೆ ಆಗುತ್ತಿದೆ. ದರ ಏರಿಕೆ ಅನಿವಾರ್ಯತೆ ಬಗ್ಗೆ ಸಭೆಯಲ್ಲಿ ಸಿಎಂಗೆ ಮನವರಿಕೆ ಮಾಡಿದೆವು. ಹೀಗಾಗಿ ನಂದಿನ ಹಾಲಿನ ದರ ಏರಿಕೆಗೆ ಸಿಎಂ ಸಿದ್ಧರಾಮಯ್ಯ ಒಪ್ಪಿಗೆ ನೀಡಿದ್ದಾರೆ ಎಂದರು.

ಜನರಿಗೆ ಹೊರೆ: ಗ್ಯಾರಂಟಿ ಹೆಸರಿನಲ್ಲಿ ತಮ್ಮ ಸ್ವಾರ್ಥ ಸಾಧಿಸಲು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಜನರನ್ನು ಮುಟ್ಟಾಳರನ್ನಾಗಿ ಮಾಡುತ್ತಿದೆ. ಒಂದು ಕಡೆ ಗ್ಯಾರಂಟಿ ಹೆಸರಿನಲ್ಲಿ ಹಣ ನೀಡಿ ಮತ್ತೊಂದು ಕಡೆ ಕಿತ್ತುಕೊಳ್ಳುತ್ತಿದೆ. ಇದನ್ನು ಪ್ರತಿಯೊಬ್ಬರೂ ಯೋಚನೆ ಮಾಡಬೇಕು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರೆವೆನ್ಯೂ, ಮದ್ಯದ ದರ, ಹಾಲಿನ ದರ, ವಿದ್ಯುತ್ ದರ. ಬಸ್ಸಿನ ದರ ಹೀಗೆ ಎಲ್ಲಾ ದರ ಹೆಚ್ಚಳ ಮಾಡಿದ್ದಾರೆ ಎಂದು ಬೆಂಗಳೂರಿನ ನಿವಾಸಿ ವಿಜಯ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯ ಜನರಿಗೆ ತೊಂದರೆ: ಜನರ ದುಡ್ಡಲ್ಲಿ ದರ್ಬಾರ್ ಮಾಡುವ ಸರ್ಕಾರದವರು ಮೋಜು-ಮಸ್ತಿ ಮಾಡಿಕೊಂಡು ಓಡಾಡುತ್ತಿದ್ದಾರೆ. ಸಾಮಾನ್ಯ ನಾಗರಿಕರ ಕಷ್ಟ ಪಾಡು ಕೇಳುವವರಿಲ್ಲದಾಗಿದೆ. ಬಡವರು ಬದುಕುವುದು ತುಂಬಾ ಕಷ್ಟವಾಗಿದೆ. ಮರ್ಯಾದೆ ಬಿಟ್ಟು ಹೋಗುವುದಕ್ಕೂ ಆಗಲ್ಲ, ಮರ್ಯಾದೆ ಕಳೆದುಕೊಳ್ಳುವುದಕ್ಕೂ ಆಗಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ವ್ಯಾಪಾರಸ್ಥರ ಅಸಮಾಧಾನ: ಗ್ರಾಹಕರಿಗೆ ಹಾಲಿನ ದರ ಹೆಚ್ಚಳವಾಗಿದೆ ಎಂದು ಹೇಳಲು, ಅವರನ್ನು ಸಮಾಧಾನಪಡಿಸಲು ತುಂಬಾ ಕಷ್ಟವಾಗುತ್ತಿದೆ. ಕಳೆದ ನವೆಂಬರ್ ನಲ್ಲಷ್ಟೇ 3 ರೂಪಾಯಿ ಹೆಚ್ಚಳವಾಗಿತ್ತು. ಈಗ ಮತ್ತೆ 3 ರೂಪಾಯಿ ಹೆಚ್ಚಳ ಮಾಡಿದ್ದು ಗ್ರಾಹಕರಿಗೆ ತುಂಬಾ ಕಷ್ಟವಾಗಿದೆ. ಕಳೆದೆರಡು ವರ್ಷಗಳಿಂದ ಕೊರೋನಾದಿಂದ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಜೀವನ ಮಾಡಲು ಕಷ್ಟವಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com