ಹೈಕೋರ್ಟ್‌ನ ಆರು ಜಡ್ಜ್, ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ಜೀವ ಬೆದರಿಕೆ

ಹೈಕೋರ್ಟ್‌ನ ಆರು ನ್ಯಾಯಾಧೀಶರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ಜೀವ ಬೆದರಿಕೆ ಹಾಕಿರುವ ಆರೋಪಿಗಳಿಗಾಗಿ ಕೇಂದ್ರ ಸಿಇಎನ್ ಕ್ರೈಂ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹೈಕೋರ್ಟ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿಯ ವಾಟ್ಸಾಪ್ ಸಂಖ್ಯೆಗೆ ಆರೋಪಿ ಬೆದರಿಕೆ ಸಂದೇಶ ಕಳುಹಿಸಿದ್ದಾನೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಹೈಕೋರ್ಟ್‌ನ ಆರು ನ್ಯಾಯಾಧೀಶರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ಜೀವ ಬೆದರಿಕೆ ಹಾಕಿರುವ ಆರೋಪಿಗಳಿಗಾಗಿ ಕೇಂದ್ರ ಸಿಇಎನ್ ಕ್ರೈಂ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹೈಕೋರ್ಟ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿಯ ವಾಟ್ಸಾಪ್ ಸಂಖ್ಯೆಗೆ ಆರೋಪಿ ಬೆದರಿಕೆ ಸಂದೇಶ ಕಳುಹಿಸಿದ್ದಾನೆ.

ಜುಲೈ 12 ರಂದು ಸಂಜೆ 7 ಗಂಟೆ ಸುಮಾರಿಗೆ ಪಿಆರ್‌ಒ ಕೆ ಮುರಳೀಧರ್ ಬೆದರಿಕೆ ಕರೆ ಸ್ವೀಕರಿಸಿದ್ದು, ಹೈಕೋರ್ಟ್ ನಿಂದ ನೀಡಲಾದ ಪಿಆರ್ ಒ ಅವರ ಅಧಿಕೃತ ಮೊಬೈಲ್ ನಂಬರ್ ಗೆ  ಮೇಸೆಜ್ ಬಂದಿದೆ. ಈ ಸಂಬಂಧ  ಜುಲೈ 14 ರಂದು ಸೆಂಟ್ರಲ್ ಸಿಇಎನ್ ಕ್ರೈಂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಆರು ನ್ಯಾಯಾಧೀಶರು ಮತ್ತು ಪಿಆರ್‌ಒಗೆ ಜೀವ ಬೆದರಿಕೆ ಹಾಕಿ, 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ.  ಪಾಕಿಸ್ತಾನದಲ್ಲಿರುವ ಎಬಿಎಲ್ ಅಲೈಡ್ ಬ್ಯಾಂಕ್ ಲಿಮಿಟೆಡ್‌ಗೆ ರೂ. 50 ಲಕ್ಷ ಹಣವನ್ನು ಜಮಾ ಮಾಡಬೇಕೆಂದು ಪಿಆರ್ ಒ ವಾಟ್ಸಾಪ್ ಗೆ ಮೇಸೆಜ್ ಕಳುಹಿಸಲಾಗಿದೆ. ಅಲ್ಲದೇ  ಹಣ ಜಮಾ ಮಾಡಬೇಕಾದ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಆರೋಪಿ ಕಳುಹಿಸಿದ್ದಾನೆ. 1929237-1677 ಸಂಖ್ಯೆಯಿಂದ ಸಂದೇಶವನ್ನು ಕಳುಹಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ಎಫ್‌ಐಆರ್ ಪ್ರತಿಯಲ್ಲಿ ನ್ಯಾಯಾಧೀಶರಾದ ಮೊಹಮ್ಮದ್ ನವಾಜ್, ಎಚ್‌ಟಿ ನರೇಂದ್ರ ಪ್ರಸಾದ್, ಅಶೋಕ್ ಜಿ ನಿಜಗನ್ನವರ್, ಎಚ್‌ಪಿ ಸಂದೇಶ್, ಕೆ ನಟರಾಜನ್ ಮತ್ತು ವೀರಪ್ಪ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡದಿದ್ದಲ್ಲಿ ‘ದುಬೈ ಗ್ಯಾಂಗ್’ ಮೂಲಕ ಕೊಲ್ಲುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಮೇರೆ ಆಪ್ಕೆ ಶೂಟರ್ ಹೈ' ಎಂಬ ಬೆದರಿಕೆ ಸಂದೇಶದೊಂದಿಗೆ ಐದು ಮೊಬೈಲ್ ನಂಬರ್ ಕೂಡಾ ಉಲ್ಲೇಖಿಸಲಾಗಿದೆ ಎಂದು  ಪಿಆರ್‌ಒ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸೈಬರ್ ಕ್ರೈಂ ಅಧಿಕಾರಿಗಳು ಕೂಲಂಕುಷವಾಗಿ ತನಿಖೆ ಆರಂಭಿಸಿದ್ದು, ಯಾವ ನಂಬರ್‌ನಿಂದ ಸಂದೇಶ ಕಳುಹಿಸಲಾಗಿದೆ ಎಂಬ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಬೆದರಿಕೆ ಸಂದೇಶದಲ್ಲಿ ನಮೂದಿಸಲಾದ ಐದು ಮೊಬೈಲ್ ಫೋನ್ ಸಂಖ್ಯೆಗಳ ವಿವರಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com