ಬೆಂಗಳೂರು:ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಹೇಳಿದ್ದೆವು. ಈಗ ಆ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಇದು ಕಾಂಗ್ರೆಸ್ ಪಕ್ಷದ ಜನಪರ ಬದ್ಧತೆಗೆ ದೊಡ್ಡ ನಿದರ್ಶನವಾಗಿದೆ. ಈ ಬಗ್ಗೆ ಅಪಪ್ರಚಾರದಲ್ಲಿ ನಿರತವಾಗಿದ್ದ ಬಿಜೆಪಿ ಇನ್ನಾದರೂ ಮೌನದಿಂದ ಇರುವುದನ್ನು ಕಲಿಯಬೇಕು ಎಂದಿದ್ದಾರೆ.
ರಾಜ್ಯ ಸರಕಾರವು ತೆಗೆದುಕೊಂಡಿರುವ ಐತಿಹಾಸಿಕ ನಿರ್ಧಾರದ ಬಳಿಕ ಮಾತನಾಡಿದ ಅವರು, ಸರಕಾರ ಅಸ್ತಿತ್ವಕ್ಕೆ ಬಂದ ಕೇವಲ ಎರಡು ವಾರಗಳಲ್ಲಿ ನಮ್ಮ ಇಚ್ಛಾಶಕ್ತಿಯನ್ನು ತೋರಿಸಿದ್ದೇವೆ. ಈ ಐದೂ ಗ್ಯಾರಂಟಿಗಳ ಅನುಷ್ಠಾನದ ಮೂಲಕ ರಾಜ್ಯದ ಜನತೆಯ ಸಬಲೀಕರಣ ದೊಡ್ಡ ಮಟ್ಟದಲ್ಲಿ ಸಾಧ್ಯವಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
"ಕೊಟ್ಟ ಮಾತನ್ನು ಪಾಲಿಸುವುದು ಕಾಂಗ್ರೆಸ್ಸಿಗೆ ಧರ್ಮವಿದ್ದಂತೆ. ಚುನಾವಣೆಗೆ ಮುಂಚೆ ಏನನ್ನು ಹೇಳಿದ್ದೆವೋ ಅದನ್ನೀಗ ಮಾಡಿ ತೋರಿಸಿದ್ದೇವೆ. ಇವೆಲ್ಲವೂ ಈಗ ನಿಗದಿಪಡಿಸಿರುವ ದಿನಾಂಕದಿಂದ ಪೂರ್ಣಪ್ರಮಾಣದಲ್ಲಿ ಮತ್ತು ಸಮರ್ಪಕವಾಗಿ ಜಾರಿಗೆ ಬರಲಿವೆ. ಜನರನ್ನು ದಾರಿ ತಪ್ಪಿಸುವುದನ್ನೇ ಉದ್ಯೋಗ ಮಾಡಿಕೊಂಡಿರುವ ಬಿಜೆಪಿ ಇನ್ನಾದರೂ ರಚನಾತ್ಮಕವಾಗಿ ಕೆಲಸ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಗ್ಯಾರಂಟಿಗಳ ಜಾರಿಯು ರಾಜ್ಯದ ಬೊಕ್ಕಸಕ್ಕೇನೂ ಹೊರೆಯಾಗುವುದಿಲ್ಲ. ಜನರ ಕಲ್ಯಾಣ ಮತ್ತು ಆರ್ಥಿಕ ಅಭಿವೃದ್ಧಿ ಎರಡನ್ನೂ ನಾವು ಸಮತೋಲನದಿಂದ ನಡೆಸಿಕೊಂಡು ಹೋಗಲಿದ್ದೇವೆ. ಇಂದಿನ ನಿರ್ಧಾರವು ರಾಜ್ಯದ ರಾಜಕಾರಣದ ಚರಿತ್ರೆಯಲ್ಲಿ ಅವಿಸ್ಮರಣೀಯವಾಗಿ ಉಳಿಯಲಿದೆ ಎಂದು ಪಾಟೀಲ್ ನುಡಿದಿದ್ದಾರೆ.
Advertisement