ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪುತ್ರಿಯನ್ನು ವರಿಸಿದ ಪ್ರತೀಕ್ ದೋಷಿ ಯಾರು? ಅವರ ಹಿನ್ನೆಲೆಯೇನು?

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಪರಕಾಲ ವಂಗಮಾಯಿ ಅವರ ವಿವಾಹ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ರೆಸಾರ್ಟ್ ವೊಂದರಲ್ಲಿ ಸರಳವಾಗಿ ಸದ್ದಲ್ಲದೆ ನೆರವೇರಿತು. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪುತ್ರಿಯ ವಿವಾಹ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪುತ್ರಿಯ ವಿವಾಹ

ನವದೆಹಲಿ/ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಪರಕಾಲ ವಂಗಮಾಯಿ ಅವರ ವಿವಾಹ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ರೆಸಾರ್ಟ್ ವೊಂದರಲ್ಲಿ ಸರಳವಾಗಿ ಸದ್ದಲ್ಲದೆ ನೆರವೇರಿತು. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.

ಕೇಂದ್ರ ಸಚಿವೆಯೊಬ್ಬರ ಪುತ್ರಿಯ ವಿವಾಹವಾಗಿದ್ದರೂ ಗಣ್ಯಾತಿಗಣ್ಯರು ಭಾಗವಹಿಸದೆ, ರಾಜಕಾರಣಿಗಳ ಆಗಮನವಿಲ್ಲದೆ ಕೇವಲ ಮನೆಯವರು ಮತ್ತು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮುಗಿದು ಹೋಗಿದೆ, ಮಾಧ್ಯಮಗಳಲ್ಲಿ ಕೂಡ ಅಷ್ಟು ಸುದ್ದಿಯಾಗಲಿಲ್ಲ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ. 

ಮದುವೆಯಲ್ಲಿ ಜನರ ಆಸಕ್ತಿಗೆ ಕಾರಣವಾದ ಮತ್ತೊಂದು ಅಂಶವೆಂದರೆ ವರ, ಪ್ರತೀಕ್ ದೋಷಿ. ಹಾಗಾದರೆ ಪ್ರತೀಕ್ ದೋಷಿ ಯಾರು ಎಂದು ಮಾಧ್ಯಮಗಳು ಕೆದಕುತ್ತಾ ಹೋದಾಗ ಕೆಲವು ವಿಷಯಗಳು ತಿಳಿದುಬಂದವು.

ಈ ಯುವಕ ಪ್ರತೀಕ್ ದೋಷಿಯನ್ನು ಪ್ರಧಾನಿ ಮೋದಿಯ ಕಣ್ಣು ಮತ್ತು ಕಿವಿ ಎಂದು ಕರೆಯುತ್ತಾರಂತೆ.ಪ್ರತೀಕ್ ದೋಷಿಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಚೇರಿಯಲ್ಲಿ ಜೂನ್ 2019ರಲ್ಲಿ ಒಎಸ್ ಡಿಯಾಗಿ ನೇಮಕಗೊಂಡಿದ್ದರಂತೆ ಅಂದರೆ ಸಂಶೋಧನೆ ಮತ್ತು ಕಾರ್ಯತಂತ್ರ ವಿಭಾಗದಲ್ಲಿ. ಆದರೆ ಅದಕ್ಕೂ ಮೊದಲು ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾದಾಗಲೇ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಅವರ ಪ್ರವೇಶವಾಗಿತ್ತು. 

ದೇಶದ ಶಕ್ತಿ ಕೇಂದ್ರವಾದ ಸಂಸತ್ತಿನ ಕಾರಿಡಾರ್‌ಗಳಲ್ಲಿ ಪಿಎಂ ಮೋದಿಯ ಕಿವಿ ಮತ್ತು ಕಣ್ಣು ಎಂದು ಕರೆಯಲ್ಪಡುವ ಪ್ರತೀಕ್ ಅವರು ಆಯ್ಕೆಗಳು ಮತ್ತು ನೇಮಕಾತಿಗಳಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿಷಯಗಳ ಬಗ್ಗೆ ಪ್ರಧಾನಿಗೆ ಮಾಹಿತಿಗಳನ್ನು ಒದಗಿಸುತ್ತಾರಂತೆ. ದೋಷಿ ಅವರಿಗೆ ಉನ್ನತ ಅಧಿಕಾರಿಗಳು ಮತ್ತು ಸರ್ಕಾರದ ಪ್ರಮುಖ ಅಧಿಕಾರಿಗಳ ಕೆಲಸದ ಬಗ್ಗೆ ಜ್ಞಾನವಿದೆ.

2019 ರಲ್ಲಿ ಪಿಎಂ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದ ನಂತರ, ದೋಷಿ ಅವರನ್ನು ಪ್ರಧಾನ ಮಂತ್ರಿ ಕಚೇರಿಯಲ್ಲಿ ಒಎಸ್‌ಡಿಯಾಗಿ ನೇಮಿಸಲಾಯಿತು. ಜಂಟಿ ಕಾರ್ಯದರ್ಶಿ ಹುದ್ದೆ ಅವರದು. ಆದಾಗ್ಯೂ, ನೇಮಕಾತಿಗಳ ಕುರಿತು ಮಾಹಿತಿಗಳನ್ನು ಒದಗಿಸುವ ಅವರ ಪಾತ್ರವು ಇತರ ಕರ್ತವ್ಯಗಳೊಂದಿಗೆ ಸೇರಿಕೊಂಡಿರುತ್ತದೆ.

ಸರ್ಕಾರದ ಉನ್ನತ ಅಧಿಕಾರಿಗಳಿಂದ ಹಿಡಿದು ವಿಶ್ವವಿದ್ಯಾಲಯಗಳ ಐಐಟಿ ನಿರ್ದೇಶಕರು ಮತ್ತು ಉಪಕುಲಪತಿಗಳವರೆಗೆ, ಪ್ರಧಾನಿ ನೇಮಕಾತಿಗಳನ್ನು ತೆರವುಗೊಳಿಸುವ ಮೊದಲು ದೋಷಿ ಅವರ ಪಾತ್ರ ಎಲ್ಲಾ ನೇಮಕಾತಿಗಳಲ್ಲಿ ಇರುತ್ತದೆ. 

ದೋಷಿ ಅವರು ಪ್ರತಿಷ್ಠಿತ ಸಿಂಗಾಪುರ್ ಮ್ಯಾನೇಜ್‌ಮೆಂಟ್ ಸ್ಕೂಲ್‌ನಿಂದ ಪದವೀಧರರಾಗಿದ್ದು, ಪಿಎಂ ಮೋದಿ ಅವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿ ಸಂಶೋಧನಾ ಸಹಾಯಕರಾಗಿಯೂ ಕೆಲಸ ಮಾಡಿದ್ದರು. 

ಪ್ರತೀಕ್ ದೋಷಿ ಸಾರ್ವಜನಿಕವಾಗಿ ಗುರುತಿಸಿಕೊಂಡಿರುವುದು ಕಡಿಮೆ. ತಮ್ಮ ಪರಿಚಯವನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಸಕ್ರಿಯರಾಗಿಲ್ಲ. 20 ಮೇ 1991 ರಂದು ಚೆನ್ನೈನಲ್ಲಿ ಜನಿಸಿದ ನಿರ್ಮಲಾ ಪುತ್ರಿ ವಾಂಗ್ಮಯಿ ಕೂಡ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತೀರಾ ಕಡಿಮೆ. 

ವಾಂಗ್ಮಯಿ ಮಿಂಟ್ ಲೌಂಜ್‌ನ ಪುಸ್ತಕಗಳು ಮತ್ತು ಸಂಸ್ಕೃತಿ ವಿಭಾಗಕ್ಕೆ ವಿಶಿಷ್ಟ ಲೇಖಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ ಮತ್ತು ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಮೆಡಿಲ್ ಸ್ಕೂಲ್ ಆಫ್ ಜರ್ನಲಿಸಂನಿಂದ ಪತ್ರಿಕೋದ್ಯಮದಲ್ಲಿ ಎಂಎಸ್ ಪದವಿ ಪಡೆದಿದ್ದಾರೆ.

ಕರ್ನಾಟಕದಲ್ಲಿ ನಡೆದ ಕೇಂದ್ರ ವಿತ್ತ ಸಚಿವೆಯ ಮದುವೆಯಲ್ಲಿ ಎರಡು ಕುಟುಂಬಗಳ ಆಪ್ತರು ಮಾತ್ರ ಭಾಗವಹಿಸಿದ್ದರು. ಹಿಂದೂ ವಿವಾಹ ಸಂಪ್ರದಾಯದಂತೆ ನಡೆದ ವಿವಾಹದ ವೀಡಿಯೋ ಉಡುಪಿ ಅದಮಾರು ಮಠದ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಲಾಗಿತ್ತು. 

ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ್ ಅವರು ರಾಜಕೀಯ ಅರ್ಥಶಾಸ್ತ್ರಜ್ಞರಾಗಿದ್ದು, ಅವರು ಸಂವಹನ ಸಲಹೆಗಾರರಾಗಿ ಸರ್ಕಾರಿ ಸೇವೆ ಸಲ್ಲಿಸಿದ್ದಾರೆ. ಜುಲೈ 2014 ಮತ್ತು ಜೂನ್ 2018 ರ ನಡುವೆ ಆಂಧ್ರ ಪ್ರದೇಶ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸ್ಥಾನವನ್ನು ಹೊಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com