ಮಹಾ ಜನಸಂಪರ್ಕ ಅಭಿಯಾನ: ದೇವೇಗೌಡ-ಸಂಸದ ತೇಜಸ್ವಿ ಸೂರ್ಯ ಭೇಟಿ, ನಮೋ ವಿದ್ಯಾನಿಧಿ ವಿದ್ಯಾರ್ಥಿವೇತನ ವಿತರಣೆ

ಮಹಾ ಜನಸಂಪರ್ಕ ಅಭಿಯಾನದ ಭಾಗವಾಗಿ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಇಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ಭೇಟಿಯಾದರು.
ಸಂಸದ ತೇಜಸ್ವಿ ಸೂರ್ಯ ಭೇಟಿ ವೇಳೆ ವಿದ್ಯಾರ್ಥಿ ವೇತನ ವಿತರಣೆ ಮಾಡುತ್ತಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ
ಸಂಸದ ತೇಜಸ್ವಿ ಸೂರ್ಯ ಭೇಟಿ ವೇಳೆ ವಿದ್ಯಾರ್ಥಿ ವೇತನ ವಿತರಣೆ ಮಾಡುತ್ತಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

ಬೆಂಗಳೂರು: ಮಹಾ ಜನಸಂಪರ್ಕ ಅಭಿಯಾನದ ಭಾಗವಾಗಿ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಇಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ಭೇಟಿಯಾದರು.

ಮೋದಿ ಸರ್ಕಾರದ 9 ವರ್ಷಗಳ ಸೇವೆ ಹಾಗೂ ಸಂಸದರಾಗಿ ಚುನಾಯಿತಗೊಂಡಾಗಿನಿಂದ ಈವರೆಗೂ ನಡೆಸಿರುವ ಜನೋಪಯೋಗಿ ಕೆಲಸಗಳ ಬಗ್ಗೆ ತಿಳಿಸುವುದು ಮಹಾ ಜನಸಂಪರ್ಕ ಅಭಿಯಾನದ ಉದ್ದೇಶವಾಗಿದೆ. ಬೆಂಗಳೂರಿನ ನಿವಾಸದಲ್ಲಿ ಮಾಜಿ ಪ್ರಧಾನಿಗಳನ್ನು ಭೇಟಿಯಾದ ಸಂಸದರು 9 ವರ್ಷಗಳ ಕೇಂದ್ರ ಸರ್ಕಾರದ ಜನಸೇವೆ ಹಾಗೂ 5 ವರ್ಷಗಳಲ್ಲಿ ತಮ್ಮ ಸಾಧನೆಗಳ ಬಗ್ಗೆ ದೇವೇಗೌಡ ಅವರಿಗೆ ಮಾಹಿತಿ ನೀಡಿದರು.
 
ಬಸವನಗುಡಿಯ ಎನ್‌ಆರ್‌ ಕಾಲೋನಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನ ಠೇವಣಿದಾರರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸುಧಾರಣೆಗಳ ಕುರಿತು ಸಂಸದ ತೇಜಸ್ವಿ ಸೂರ್ಯ ಮಾಜಿ ಪ್ರಧಾನಿಗಳಿಗೆ ವಿವರಿಸಿದರು. ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪೂರ್ಣಗೊಳಿಸಲು, ವಿಶೇಷವಾಗಿ ಕನಕಪುರ ರಸ್ತೆಯಲ್ಲಿರುವ ಮಂತ್ರಿ ಸೆರಿನಿಟಿ ಯೋಜನೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಸ್ವನಿಧಿಯ ಮೂಲಕ ತಂದ ಮಧ್ಯಸ್ಥಿಕೆಗಳ ಕುರಿತು ಸಹ ಸಂಸದರು ಮಾಜಿ ಪ್ರಧಾನಿಗಳೊಂದಿಗೆ ಮಾತನಾಡಿದರು.

ಇದಷ್ಟೇ ಅಲ್ಲದೇ, ನಗರದ ಅಭಿವೃದ್ಧಿಯ ವಿವಿಧ ಅಂಶಗಳನ್ನು ಉಭಯ ನಾಯಕರೂ ಚರ್ಚಿಸಿದರು. ನಗರಕ್ಕೆ ಕೇಂದ್ರದ ಕೊಡುಗೆ, ವಿಶೇಷವಾಗಿ ಉಪನಗರ ರೈಲ್ವೆ ಯೋಜನೆ, ನಮ್ಮ ಮೆಟ್ರೋ ನಿರ್ಮಾಣ, ಆಯುಷ್ಮಾನ್ ಭಾರತ್ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂ ವಸತಿ ಯೋಜನೆ) ಕುರಿತು ತೇಜಸ್ವಿ ಸೂರ್ಯ ಜೆಡಿ(ಎಸ್) ವರಿಷ್ಠರೊಂದಿಗೆ ಮಾತನಾಡಿದರು.

“ಜನೌಷಧಿ ಕೇಂದ್ರಗಳ ಸಂಖ್ಯೆಗೆ ಸಂಬಂಧಿಸಿದಂತೆ ಮತ್ತೊಂದು ಮೈಲಿಗಲ್ಲು"

2019 ರಲ್ಲಿ 14 ಜನೌಷಧಿ ಮಳಿಗೆಗಳನ್ನು ಹೊಂದಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರ ಈಗ 100 ಕ್ಕೂ ಹೆಚ್ಚು ಜನೌಷಧಿ ಮಳಿಗೆಗಳನ್ನು ಹೊಂದಿದೆ. ಈ ಮಳಿಗೆಗಳು ಜನರಿಗೆ ಸುಮಾರು 50-90% ಕಡಿಮೆ ವೆಚ್ಚದಲ್ಲಿ ಜೆನೆರಿಕ್ ಔಷಧಿಗಳನ್ನು ಒದಗಿಸುತ್ತವೆ ಮತ್ತು ಅವರ ಮಾಸಿಕ ಬಿಲ್‌ಗಳಲ್ಲಿ ಸಾಕಷ್ಟು ಉಳಿತಾಯಕ್ಕೆ ಕಾರಣವಾಗುತ್ತವೆ, ”ಎಂದು ಸಂಸದರು ಈ ವೇಳೆ ಹೇಳಿದ್ದಾರೆ.
 

“ಬೆಂಗಳೂರು ದಕ್ಷಿಣದ ಮತ್ತೊಂದು ಉಪಕ್ರಮವಾದ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಸಹಾಯದಿಂದ ಜಯನಗರದ ಕೆಎಸ್‌ಆರ್‌ಟಿಸಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಿರುವ ಬಗ್ಗೆಯೂ ಸಂಸದರು ಮಾತನಾಡಿದ್ದು, "ಮುಂಬರುವ ವರ್ಷಗಳಲ್ಲಿ ಬೆಂಗಳೂರನ್ನು ವಿಶ್ವ ದರ್ಜೆಯ ಮೂಲಸೌಕರ್ಯಗಳೊಂದಿಗೆ ಜಾಗತಿಕ ನಗರವನ್ನಾಗಿ ಮಾಡುವ ಕುರಿತು ನಾನು ಮಾಜಿ ಪ್ರಧಾನಿಯವರ ಮಾರ್ಗದರ್ಶನವನ್ನು ಕೋರಿದೆ. ನನ್ನಂತಹ ಯುವಕರನ್ನು ಭೇಟಿ ಮಾಡಲು ಮತ್ತು ಮಾರ್ಗದರ್ಶನ ನೀಡಲು ಸಮಯವನ್ನು ಮೀಸಲಿಟ್ಟಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಅವರ ಕೆಲಸ ಮತ್ತು ಅನುಭವದಿಂದ ನಾನು ಕಲಿಯುವುದು ಸಾಕಷ್ಟು ಇದೆ, ”ಎಂದು ಸಂಸದರು ಭೇಟಿ ಬಳಿಕ ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಅವರ ನಮೋ ವಿದ್ಯಾನಿಧಿ ಕಾರ್ಯಕ್ರಮದ ವಿದ್ಯಾರ್ಥಿವೇತನವನ್ನು ವಿತರಿಸಿದ ಹೆಚ್ ಡಿಡಿ

ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ಅವರ ನಮೋ ವಿದ್ಯಾನಿಧಿ ಕಾರ್ಯಕ್ರಮದ ಅಡಿಯಲ್ಲಿ, ಮಕ್ಕಳಿಗೆ ತಲಾ 10 ಸಾವಿರ ರೂಪಾಯಿ ವಿದ್ಯಾರ್ಥಿವೇತನವನ್ನು ಎಚ್.ಡಿ.ದೇವೇಗೌಡ ವಿತರಣೆ ಮಾಡಿದ್ದು ವಿಶೇಷವಾಗಿತ್ತು.

ನಮೋ ವಿದ್ಯಾನಿಧಿ ಕಾರ್ಯಕ್ರಮದಡಿಯಲ್ಲಿ, ಆರ್ಥಿಕವಾಗಿ ಹಿಂದುಳಿದ ವರ್ಗದ ಸುಮಾರು 10,000 ಪ್ರತಿಭಾವಂತ ಮಕ್ಕಳಿಗೆ ತಲಾ 10,000 ರೂ.ಗಳ ವಿದ್ಯಾರ್ಥಿವೇತನವನ್ನು ನೀಡುವ ಗುರಿಯನ್ನು ಸಂಸದರು ಹೊಂದಿದ್ದು, ಮಕ್ಕಳು ವ್ಯಾಸಂಗ ಮಾಡುತ್ತಿರುವ ಆಯಾ ಶಾಲೆಗಳಿಗೆ ನೇರವಾಗಿ ಪಾವತಿಸಲಾಗಿದೆ. ಪ್ರಸ್ತುತ ಬೆಂಗಳೂರು ದಕ್ಷಿಣದಲ್ಲಿ 1,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಕಾರ್ಯಕ್ರಮದಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ದೇವೇಗೌಡರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಜೆಡಿಎಸ್ ವರಿಷ್ಠರು ನಗರದ ಆಟೋ ರಿಕ್ಷಾ ಚಾಲಕರ ಹಲವಾರು ಮಕ್ಕಳು ಸೇರಿದಂತೆ ಸುಮಾರು 10 ಮಕ್ಕಳಿಗೆ ವಿದ್ಯಾರ್ಥಿ ವೇತನದ ಚೆಕ್ ನ್ನು ಹಸ್ತಾಂತರಿಸಿದರು.

“ದೇವೇಗೌಡ ಸರ್ ಅವರಂತಹ ಮೇರು ವ್ಯಕ್ತಿಯಿಂದ ಅನೇಕ ಹಿಂದುಳಿದ ವಿದ್ಯಾರ್ಥಿಗಳು ಚೆಕ್‌ಗಳನ್ನು ಸ್ವೀಕರಿಸುವುದರಿಂದ ಸಂತಸವಾಗಿದೆ. ಈ ಮಕ್ಕಳಿಗೆ ಚೆಕ್‌ಗಳನ್ನು ಹಸ್ತಾಂತರಿಸುವುದಕ್ಕೆ ಅವರು ಒಪ್ಪಿಕೊಂಡಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಚೆನ್ನಾಗಿ ಅಧ್ಯಯನ ಮಾಡಲು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತೊಡಗಲು ಮಕ್ಕಳಿಗೆ ದೇವೇಗೌಡರು ಒತ್ತಾಯಿಸಿದರು. ದೇವೇಗೌಡರು ತಮ್ಮ ರಾಜಕೀಯದಲ್ಲಿ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ಪ್ರಮುಖವಾಗಿ ಇರಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com