ರಾಯಚೂರು: ನಿದ್ರೆಯಲ್ಲಿದ್ದ ಮೂವರ ಮೇಲೆ ಜೆಸಿಬಿ ಹರಿದು ಮೂವರು ಮಲಗಿದಲ್ಲೇ ಪ್ರಾಣ ಕಳೆದುಕೊಂಡ ಭಯಾನಕ ಘಟನೆಯೊಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಛತ್ತೀಸ್‌ಗಢ ಮೂಲದ ಮೂವರ ಕಾರ್ಮಿಕರಾದ ಕೃಷ್ಣಾ(25), ಶಿವುರಾಮ್(30), ಬಲರಾಮ(28) ಮೃತಪಟ್ಟ ದುರ್ದೈವಿಗಳು.
ಇವರು ಮಂಗಳವಾರ ರಾತ್ರಿ ಬೋರ್‌ವೆಲ್ ಕಾಮಗಾರಿ ಮುಗಿಸಿ ಜಮೀನಿನಲ್ಲೇ ಮಲಗಿದ್ದರು. ಈ ವೇಳೆ ಆ ದಾರಿಯಾಗಿ ಬಂದ ಜೆಸಿಬಿಯೊಂದು ಅವರ ಮೇಲೆ ಹರಿದಿದೆ.
ಬಾಲಯ್ಯ ಎಂಬುವರಿಗೆ ಸೇರಿದ್ದ ಜೆಸಿಬಿ ವಾಹನವನ್ನು ಅದರ ಚಾಲಕ ಜಮೀನಿನಲ್ಲಿ ಚಲಾಯಿಸಿಕೊಂಡು ಬಂದಿದ್ದ. ಆತನಿಗೂ ಈ ಕಾರ್ಮಿಕರು ರಸ್ತೆಯಲ್ಲೇ ಮಲಗಿದ್ದಾರೆ ಎಂಬ ವಿಚಾರ ತಿಳಿದಿರಲಿಲ್ಲ. ಅಲ್ಲಿ ಮಲಗಿದ್ದ ಮೂವರ ಮೇಲೆ ಹರಿದ ಮೇಲಷ್ಟೇ ಆತನಿಗೆ ತಾನು ಒಂದು ದೊಡ್ಡ ಅನಾಹುತ ಮಾಡಿದ್ದರ ಅರಿವಾಯಿತು.
ಆದರೆ ಅಷ್ಟು ಹೊತ್ತಿಗೆ ಮೂವರು ಒದ್ದಾಡಿ ಒದ್ದಾಡಿ ಪ್ರಾಣ ಕಳೆದುಕೊಂಡಿದ್ದರು. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ.
Advertisement