ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿ​ಎಂಸಿ ಕಾಯ್ದೆ ರದ್ದ​ತಿಗೆ ನಿರ್ಧಾ​ರ: ಸಚಿವ ಎಚ್‌.ಕೆ. ಪಾಟೀಲ್‌

ನಿಕಟಪೂರ್ವ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಪಿಎಂಸಿ ಕಾಯ್ದೆ ಬದಲು ಹಳೆಯ ಎಪಿಎಂಸಿ ಕಾಯ್ದೆಯನ್ನೆ ಮರುಜಾರಿಗೊಳಿಸುವ ತೀರ್ಮಾನಕ್ಕೆ ಈಗಿನ ಕಾಂಗ್ರೆಸ್‌ ಸರ್ಕಾರ ಬಂದಿದೆ.
ಎಚ್.ಕೆ ಪಾಟೀಲ್
ಎಚ್.ಕೆ ಪಾಟೀಲ್

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಪಿಎಂಸಿ ಕಾಯ್ದೆಯನ್ನು ರದ್ದು ಮಾಡಲು ಕರ್ನಾಟಕ ರಾಜ್ಯ ಸರ್ಕಾರ ತೀರ್ಮಾನಿಸಿದೆ. ನಿಕಟಪೂರ್ವ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಪಿಎಂಸಿ ಕಾಯ್ದೆ ಬದಲು ಹಳೆಯ ಎಪಿಎಂಸಿ ಕಾಯ್ದೆಯನ್ನೆ ಮರುಜಾರಿಗೊಳಿಸುವ ತೀರ್ಮಾನಕ್ಕೆ ಈಗಿನ ಕಾಂಗ್ರೆಸ್‌ ಸರ್ಕಾರ ಬಂದಿದೆ.

ಇಡೀ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕ ಎಪಿಎಂಸಿ ಕಾಯ್ದೆಯ ಬದಲಾಗಿ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದು ಮೂಲ ಕಾಯ್ದೆಯನ್ನು ಮತ್ತಷ್ಟು ಸುಧಾರಣೆಗಳೊಂದಿಗೆ ಮರು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಜು. 3ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಸದರಿ ಸುಧಾರಿತ ಎಪಿಎಂಸಿ ಮದೂ​ದೆ ಮಂಡಿಸಲು ತೀರ್ಮಾನಿಸಿದೆ.

ಹಾಲಿ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಮಾಡಿ ಮೂಲ ಎಪಿಎಂಸಿ ಕಾಯ್ದೆಯ ಸುಧಾರಿತ ಸ್ವರೂಪದಲ್ಲಿ ಜಾರಿಗೊಳಿಸುವ ಸಂಬಂಧ ಜವಳಿ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಮತ್ತು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಬುಧವಾರ ಉನ್ನತ ಮಟ್ಟದ ಸಭೆ ನಡೆ​ಸಿ​ದರು. ಈ ಸಭೆಯಲ್ಲಿ ಸುಧಾರಿತ ಕಾಯ್ದೆ ಜಾರಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌.ಕೆ. ಪಾಟೀಲ್‌ ಹಾಗೂ ಶಿವಾನಂದ ಪಾಟೀಲ ಅವರು, ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದು ಮೂಲ ಕರ್ನಾಟಕ ಎಪಿಎಂಸಿ ಕಾಯ್ದೆಯ ಎಲ್ಲ ಆಶಯಗಳನ್ನು ಹೊಂದಿರುವ ಸುಧಾರಿತ ಎಪಿಎಂಸಿ ಮಸೂ​ದೆಯನ್ನು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗುವುದು ಎಂದರು.

ಸುಧಾರಿತ ಎಪಿಎಂಸಿ ಕಾಯ್ದೆಯನ್ನು ಜಾರಿಗೊಳಿಸುವಾಗ, ರೈತರ ಹಿತವನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ಅವರ ಅಗತ್ಯಗಳಿಗೆ ಅನುಗುಣವಾಗಿ ಹಳೆಯ ಎಪಿಎಂಸಿ ಕಾಯ್ದೆಗೆ ಪರಿಷ್ಕರಣೆ ತಂದು ಜಾರಿಗೊಳಿಸಲಾಗುವುದು ಎಂದು ಸಚಿವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com