ಕಾಂಗ್ರೆಸ್ ಅಧ್ಯಕ್ಷರು ಸಂಪುಟದ ಎಲ್ಲಾ ಸಚಿವರನ್ನು ದೆಹಲಿಗೆ ಕರೆದಿದ್ದಾರೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಬೆಂಗಳೂರು: ಪಕ್ಷದ ವರಿಷ್ಠರೊಂದಿಗೆ ಸಭೆ ನಡೆಸಲು ಕಾಂಗ್ರೆಸ್ ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ ಅವರು ಇಡೀ ರಾಜ್ಯ ಸಂಪುಟ ಸಚಿವರನ್ನು ದೆಹಲಿಗೆ ಕರೆದಿದ್ದಾರೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ರಾಜ್ಯದ ವಿವಿಧ ಯೋಜನೆಗಳ ಕುರಿತು ಚರ್ಚಿಸಲು ದೆಹಲಿಗೆ ತೆರಳಲಿದ್ದು, ಈ ಸಮಯದಲ್ಲಿ ಕೇಂದ್ರ ಸಚಿವರನ್ನು ಪ್ರತ್ಯೇಕವಾಗಿ ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆಯೂ ಇದೆ. ಇನ್ನು ಸಿದ್ದರಾಮಯ್ಯ ಅವರು ಪ್ರಧಾನಿ ಭೇಟಿಗೆ ಸಮಯಾವಕಾಶ ಕೋರಿದ್ದಾರೆ ಎಂಬ ವರದಿಗಳಿವೆ.
ರಾಷ್ಟ್ರರಾಜಧಾನಿ ಭೇಟಿಯ ವೇಳೆ ಪ್ರಧಾನಿಯನ್ನು ತಾವು ಮತ್ತು ಮುಖ್ಯಮಂತ್ರಿಗಳು ಭೇಟಿಯಾಗುವ ಸಂಬಂಧ ಯಾವುದೇ ನೇರ ಉತ್ತರ ನೀಡದ ಅವರು, "ನಾವು ಒಕ್ಕೂಟ ರಚನೆಯಲ್ಲಿದ್ದೇವೆ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು" ಎಂದು ಹೇಳಿದರು.
ಜೂನ್ 21ರಂದು ನಮ್ಮ ಪಕ್ಷದ ಅಧ್ಯಕ್ಷರು ನಮ್ಮೆಲ್ಲರನ್ನೂ ದೆಹಲಿಗೆ ಕರೆದಿದ್ದಾರೆ. ಇನ್ನು ಸಂಪುಟದಲ್ಲಿರುವ ಕೆಲವರು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿಲ್ಲ. ಅಲ್ಲದೆ ಭೇಟಿ ವೇಳೆ ಚುನಾವಣೆ ಪ್ರಣಾಳಿಕೆಯ ಅನುಷ್ಠಾನದ ಬಗ್ಗೆ ಚರ್ಚಿಸುತ್ತಾರೆ ಎಂದರು.
ಸರ್ಕಾರವಾಗಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಸಲಹೆ ನೀಡಲು ಕಾಂಗ್ರೆಸ್ ಹೈಕಮಾಂಡ್ ನಮ್ಮನ್ನು ಕರೆದಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರೂ ಆಗಿರುವ ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೆಹಲಿ ಭೇಟಿಯ ವೇಳೆ ನಾವು ಕೆಲವು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇವೆ. ಕೆಲವು ಬಾಕಿ ಇರುವ ಯೋಜನೆಗಳ ಬಗ್ಗೆ ಚರ್ಚಿಸಲು ನಾನು ಕೆಲವು ಮಂತ್ರಿಗಳೊಂದಿಗೆ ಸಮಾಯಾವಕಾಶವನ್ನು ಕೋರಿದ್ದೇವೆ ಎಂದು ಶಿವಕುಮಾರ್ ಹೇಳಿದರು.
ರಾಜ್ಯ ಸಚಿವ ಸಂಪುಟವು ಎಲ್ಲರಿಂದ ಸಹಕಾರ ಪಡೆಯಲಿದೆ ಎಂದು ಹೇಳಿದ ಶಿವಕುಮಾರ್, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಲೆಕ್ಕಿಸದೆ ಕರ್ನಾಟಕದ ಹಿತದೃಷ್ಟಿಯಿಂದ ಅನೇಕರು ಈಗಾಗಲೇ ಸಹಕಾರದ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ