ಬ್ರ್ಯಾಂಡ್​ ಬೆಂಗಳೂರು, ಬೆಟರ್ ಬೆಂಗಳೂರು ನಿರ್ಮಾಣಕ್ಕೆ ಸಮಿತಿ ರಚನೆ: ಡಿಸಿಎಂ ಡಿಕೆ ಶಿವಕುಮಾರ್​

ಬ್ರ್ಯಾಂಡ್ ಬೆಂಗಳೂರು ಹಾಗೂ ಬೆಟರ್ ಬೆಂಗಳೂರು ಮೂಲಕ ಗ್ಲೋಬಲ್ ಬೆಂಗಳೂರು ನಿರ್ಮಾಣ ಮಾಡುವುದೇ ನಮ್ಮ ಧ್ಯೇಯವಾಗಿದ್ದು, ಅಧಿಕಾರಿಗಳು ಹಾಗೂ ಬೆಂಗಳೂರಿನ ಪ್ರಮುಖರನ್ನು ಒಳಗೊಂಡ ಒಂದು ಸಮಿತಿ ರಚಿಸಲಾಗುವುದು...
ಬ್ರ್ಯಾಂಡ್​ ಬೆಂಗಳೂರು, ಬೆಟರ್ ಬೆಂಗಳೂರು ನಿರ್ಮಾಣಕ್ಕೆ ಸಮಿತಿ ರಚನೆ: ಡಿಸಿಎಂ ಡಿಕೆ ಶಿವಕುಮಾರ್​
Updated on

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಹಾಗೂ ಬೆಟರ್ ಬೆಂಗಳೂರು ಮೂಲಕ ಗ್ಲೋಬಲ್ ಬೆಂಗಳೂರು ನಿರ್ಮಾಣ ಮಾಡುವುದೇ ನಮ್ಮ ಧ್ಯೇಯವಾಗಿದ್ದು, ಅಧಿಕಾರಿಗಳು ಹಾಗೂ ಬೆಂಗಳೂರಿನ ಪ್ರಮುಖರನ್ನು ಒಳಗೊಂಡ ಒಂದು ಸಮಿತಿ ರಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ‘ಬ್ರ್ಯಾಂಡ್​ ಬೆಂಗಳೂರು’ ಹೆಸರಿನಡಿ ಮಹತ್ವದ ಸಭೆ ನಡೆಸಿದ ಡಿಸಿಎಂ, ಬೆಂಗಳೂರಿನ ಅಭಿವೃದ್ಧಿಗೆ ಆರು ತಿಂಗಳಲ್ಲಿ ನೀಲನಕ್ಷೆ, ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುವುದು ಎಂದು ಹೇಳಿದ್ದಾರೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಬೆಂಗಳೂರಿನ ವೈಭವವನ್ನು ಮರಳಿ ತರುವ ಪ್ರಯತ್ನದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ಇಂದು ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಈ ವೇಳೆ ಬೆಂಗಳೂರನ್ನು ಅಭಿವೃದ್ಧಿಪಡಿಸುವ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು ಎಂದರು.

ಮೊದಲು ಎಲ್ಲಾ ಪಕ್ಷಗಳ ಶಾಸಕರ ಅಭಿಪ್ರಾಯ ಪಡೆದಿದ್ದೆ. ಈಗ ಕೈಗಾರಿಕೆ, ಬಂಡವಾಳ ಹೂಡಿಕೆದಾರರ ಅಭಿಪ್ರಾಯ ಪಡೆದಿದ್ದೇನೆ. ಮುಂದೆ ಮತ್ತೊಂದು ಹಂತದ ಸಭೆ ಮಾಡುತ್ತೇನೆ. ಮುಂದಿನ ವಾರ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುವುದು ಎಂದು ತಿಳಿಸಿದರು.

ಕಸ ಹಾಗೂ ಕೊಳಚೆ ನೀರು ನಿರ್ವಹಣೆ, ಕೊಳಚೆ ನೀರು ಪರಿಷ್ಕರಣೆ ಮತ್ತು ಮರುಬಳಕೆ, ಕಾವೇರಿ ನೀರು ಪೂರೈಕೆ, ಮೆಟ್ರೋ ಸಂಪರ್ಕ ವಿಸ್ತರಣೆ, ಮೊನೊ ರೈಲು, ಉಪನಗರ ರೈಲು, ಉತ್ತಮ ಗುಣಮಟ್ಟದ ಶಿಕ್ಷಣ, ಕೊಳಗೇರಿ ಪ್ರದೇಶ ಅಭಿವೃದ್ಧಿ, ರಸ್ತೆ ಅಗಲೀಕರಣ, ಎಲಿವೇಟೆಡ್ ರಸ್ತೆ, 20 ಪ್ರಮುಖ ಜಕ್ಷನ್ ರಸ್ತೆಗಳ ಬಗ್ಗೆ ಗಮನ, ನೈಸ್ ರಸ್ತೆಯನ್ನು ವರ್ತುಲ ರಸ್ತೆ ಆಗಿ ಮಾರ್ಪಾಡು, ಪಾದಚಾರಿ ಮಾರ್ಗ ಸುಧಾರಣೆ, ನಗರದಲ್ಲಿ ಸುರಂಗ ರಸ್ತೆಗಳ ನಿರ್ಮಾಣ, ಕೆಲವು ಪ್ರದೇಶ 24/7 ತೆರೆಯಲು ಅವಕಾಶ, ವಾಹನ ನಿಲುಗಡೆ, ಭ್ರಷ್ಟಾಚಾರ ನಿಯಂತ್ರಣ ಸೇರಿದಂತೆ ಅನೇಕ ಸಲಹೆಗಳನ್ನು ನೀಡಿದ್ದಾರೆ ಎಂದು ಡಿಸಿಎಂ ಹೇಳಿದರು.

ಸಭೆಯಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಬೈರತಿ ಸುರೇಶ್, ಮಾಜಿ ಸಿಎಂ ಡಿ ವಿ ಸದಾನಂದ ಗೌಡ, ಉದ್ಯಮಿಗಳಾದ ಆರ್ ಕೆ ಮಿಶ್ರಾ, ಕಿರಣ್ ಮುಜುಂದಾರ್ ಷಾ, ಪ್ರಶಾಂತ್, ಗೀತಾಂಜಲಿ ಕಿರ್ಲೊಸ್ಕರ್, ಡಾ ಮಧುಕರ್ ಕಾಮತ್, ಎಂ ಆರ್ ಜೈಶಂಕರ್, ರಾಜಾ ಬಾಗ್ಮನೆ, ಉಲ್ಲಾಸ್ ಕಾಮತ್, ಅರುಣ್ ಚಿಟ್ಟಿಲಾಪಿಲ್ಲಿ, ಕ್ರಿಕೆಟಿಗ ಬ್ರಿಜೇಶ್ ಪಟೇಲ್, ರಾಜ್ಯಸಭೆ ಸದಸ್ಯ ಜಿ ಸಿ ಚಂದ್ರಶೇಖರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಬಿ ಎಸ್ ಪಾಟೀಲ್, ಸಿದ್ದಯ್ಯ, ರವಿಚಂದ್ರ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com