ಬ್ರಾಂಡ್ ಬೆಂಗಳೂರು ಪೋರ್ಟಲ್ ಗೆ ಡಿಸಿಎಂ ಚಾಲನೆ, ಸಾರ್ವಜನಿಕರ ಸಲಹೆ ಕೋರಿದ ಡಿಕೆಶಿ

ಐಟಿ ರಾಜಧಾನಿಯ ಪ್ರಮುಖರೊಂದಿಗೆ ಸಭೆ ನಡೆಸಿದ ಒಂದೆರಡು ದಿನಗಳಲ್ಲೇ  ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಬುಧವಾರ ಪೋರ್ಟಲ್ ಗೆ ಚಾಲನೆ ನೀಡಿದ್ದು, ನಾಗರಿಕರು ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಬಹುದು ಎಂದು ಹೇಳಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಐಟಿ ರಾಜಧಾನಿಯ ಪ್ರಮುಖರೊಂದಿಗೆ ಸಭೆ ನಡೆಸಿದ ಒಂದೆರಡು ದಿನಗಳಲ್ಲೇ  ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಬುಧವಾರ 'www.brandbengaluru.karnataka.gov.in' ಎಂಬ ಪೋರ್ಟಲ್ ಗೆ ಚಾಲನೆ ನೀಡಿದ್ದು, ನಾಗರಿಕರು ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಬಹುದು ಎಂದು ಹೇಳಿದ್ದಾರೆ.

ರಾಜ್ಯ ರಾಜಧಾನಿಯಲ್ಲಿ ಸುಮಾರು 1.6 ಕೋಟಿ ಜನಸಂಖ್ಯೆ ಇದ್ದು, ಅಭಿವೃದ್ಧಿಯನ್ನು ನೋಡಿ ಹೆಚ್ಚಿನ ಜನರು ಬೆಂಗಳೂರಿನಲ್ಲಿ ನೆಲೆಸಲು ಬಯಸುತ್ತಿದ್ದಾರೆ. ನಾಗರಿಕರ ಸಹಭಾಗಿತ್ವವೂ ಮುಖ್ಯವಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.

"ಮುಂಬರುವ ರಾಜ್ಯ ಬಜೆಟ್‌ನಲ್ಲಿ(ಜುಲೈ 7, 2023 ಕ್ಕೆ ನಿಗದಿಪಡಿಸಲಾಗಿದೆ) ಬೆಂಗಳೂರಿಗೆ ಏನು ಮಾಡಬೇಕು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಯನ ಮಾಡುತ್ತಿದ್ದಾರೆ ಮತ್ತು ಸಿಎಂ ಅವರೇ ಅದನ್ನು ಘೋಷಿಸುತ್ತಾರೆ. ಜೂನ್ 17, 2023 ರಂದು ಬೆಂಗಳೂರಿನಲ್ಲಿ ನಡೆದ ಕೊನೆಯ ಬ್ರಾಂಡ್ ಬೆಂಗಳೂರು ಸಭೆಯಲ್ಲಿ, ನಗರದ ಗಣ್ಯರು ಹಲವು ಪ್ರಮುಖ ವಿಷಯಗಳ ಬಗ್ಗೆ ಮಾತನಾಡಿ ತಮ್ಮ ಸಲಹೆಗಳನ್ನೂ ನೀಡಿದರು. ಈಗ ನಾವು ಮಾಧ್ಯಮಗಳು ಸೇರಿದಂತೆ ಸಾರ್ವಜನಿಕರಿಂದ ಸಲಹೆಗಳನ್ನು ಕೇಳುತ್ತೇವೆ. ಅವರು ತಮ್ಮ ಸಲಹೆಗಳನ್ನು 2023ರ ಜೂನ್ ಅಂತ್ಯದವರೆಗೆ ಸರ್ಕಾರಕ್ಕೆ ನೀಡಬಹುದು ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಒಂದು ಸಣ್ಣ ಸಮಸ್ಯೆಯಾದರೂ ಅದು ಹೊರಗೆ ದೊಡ್ಡ ರೀತಿಯಲ್ಲಿ ಪ್ರತಿಫಲಿಸುತ್ತದೆ. ಏಕೆಂದರೆ ಬೆಂಗಳೂರು ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ ಎಂದರು.

ಇನ್ನು ಫುಟ್‌ಪಾತ್‌ ಒತ್ತುವರಿ ವಿಚಾರವಾಗಿ ಮಾತನಾಡಿದ ಡಿಸಿಎಂ, ‘ನಗರದಲ್ಲಿ ಫುಟ್‌ಪಾತ್‌ಗಳು ಒತ್ತುವರಿಯಾಗಿದ್ದು, ಫುಟ್ ಪಾತ್ ಗಳಲ್ಲೇ ಅಂಗಡಿಗಳು ತುಂಬಿ ತುಳುಕುತ್ತಿರುವುದನ್ನು ನಾನೇ ಖುದ್ದು ನೋಡಿದ್ದೇನೆ. ಅನೇಕ ವಾಣಿಜ್ಯ ಸಂಸ್ಥೆಗಳು ಫುಟ್‌ಪಾತ್‌ ಮೇಲೆಯೇ ನಿಂತಿದ್ದು, ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಟ್ರಾಫಿಕ್ ಜಾಮ್‌ ಆಗುತ್ತಿದೆ. ಸುರಂಗ ರಸ್ತೆ ಸೇರಿದಂತೆ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಕೆಲಸ ಮಾಡಿದ ಅಧಿಕಾರಿಗಳು ಮತ್ತು ತಜ್ಞರಿಂದಲೂ ಸಲಹೆಗಳನ್ನು ಪಡೆಯುತ್ತೇವೆ. ನನಗೆ ಸಾರ್ವಜನಿಕರ ಸಲಹೆಗಳು ಬೇಕು. ಅದಕ್ಕಾಗಿಯೇ ಬ್ರಾಂಡ್ ಬೆಂಗಳೂರು ಪೋರ್ಟಲ್ ಆರಂಭಿಸಿದ್ದೇವೆ ಎಂದರು.

ನೀರಿನ ದರವನ್ನು ಹೆಚ್ಚಿಸುವ ಸಾಧ್ಯತೆಯ ಬಗ್ಗೆಯೂ ಪ್ರತಿಕ್ರಿಯಿಸಿದ ಡಿಸಿಎಂ, 2014 ರಲ್ಲಿ ಕೊನೆಯ ಬಾರಿಗೆ ದರ ಪರಿಷ್ಕರಣೆ ಮಾಡಲಾಗಿದ್ದು, ಅಂದಿನಿಂದ ನೀರಿನ ಶುಲ್ಕದಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಆದರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB) ಭಾರಿ ವಿದ್ಯುತ್ ಶುಲ್ಕವನ್ನು ಪಾವತಿಸುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com