ನಮ್ಮ ಬಾಕಿ ಹಣ 20 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ: ಕೆಂಪಣ್ಣ ನೇತೃತ್ವದ ಗುತ್ತಿಗೆದಾರರ ಸಂಘದ ನಿಯೋಗ ಸಿಎಂಗೆ ಒತ್ತಾಯ

ಕಳೆದ ಮೂರು ವರ್ಷಗಳಿಂದ ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ರಾಜ್ಯಾದ್ಯಂತ ಕೈಗೊಂಡಿದ್ದ ಕಾಮಗಾರಿಗಳಿಗೆ ಗುತ್ತಿಗೆದಾರರ ಬಾಕಿ ಹಣ 20 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ರಾಜ್ಯ ಗುತ್ತಿಗೆದಾರರ ಸಂಘ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕೆಂಪಣ್ಣ ನೇತೃತ್ವದ ಗುತ್ತಿಗೆದಾರರ ಸಂಘದ ನಿಯೋಗ
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕೆಂಪಣ್ಣ ನೇತೃತ್ವದ ಗುತ್ತಿಗೆದಾರರ ಸಂಘದ ನಿಯೋಗ

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ರಾಜ್ಯಾದ್ಯಂತ ಕೈಗೊಂಡಿದ್ದ ಕಾಮಗಾರಿಗಳಿಗೆ ಗುತ್ತಿಗೆದಾರರ ಬಾಕಿ ಹಣ 20 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ರಾಜ್ಯ ಗುತ್ತಿಗೆದಾರರ ಸಂಘ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳ ನಿಯೋಗ ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಗುತ್ತಿಗೆದಾರರ ಬಿಲ್ ಪಾವತಿಸಬೇಕೆಂದರೆ ಶೇಕಡಾ 40ರಷ್ಟು ಅಂದರೆ 8 ಸಾವಿರ ಕೋಟಿ ರೂಪಾಯಿ ಲಂಚ ಕೊಡಿ ಎಂದು ಹಿಂದಿನ ಬಿಜೆಪಿ ಸರ್ಕಾರ ಬೇಡಿಕೆಯಿಟ್ಟಿತ್ತು ಎಂದು ಇದೇ ಸಂದರ್ಭದಲ್ಲಿ ಕೆಂಪಣ್ಣ ಆರೋಪಿಸಿದ್ದಾರೆ.

ಸಾಕ್ಷಿ ನೀಡುತ್ತೇನೆ: ಹಿಂದಿನ ಬಿಜೆಪಿ ಸರ್ಕಾರ ಗುತ್ತಿಗೆದಾರರ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಕ್ಕೆ ಬೇಕಾದರೆ ಸಾಕ್ಷಿ ನೀಡುತ್ತೇನೆ ಎಂದು ಸಹ ಕೆಂಪಣ್ಣ ಹೇಳಿದರು.ಜಲಸಂಪನ್ಮೂಲ ಇಲಾಖೆಯಿಂದ 10 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಬಿಲ್ ಗಳು ಹಾಗೂ ನಗರೋತ್ಥಾನ ಯೋಜನೆಯಿಂದ ಮತ್ತೊಂದು ದೊಡ್ಡ ಮೊತ್ತದ ಬಿಲ್ ಆಗಿದೆ ಎಂದು ಕೆಂಪಣ್ಣ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ಬೇಜವಾಬ್ದಾರಿ ಮತ್ತು ಕಮಿಷನ್ ಹಾವಳಿಯಿಂದ ಗುತ್ತಿಗೆದಾರರಿಗೆ ಗಂಭೀರ ಸಮಸ್ಯೆ ಉಂಟಾಗಿದೆ. ಆರ್ಥಿಕತೆಯನ್ನು ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂದರು. 

ಕೆಂಪಣ್ಣ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದ ಸಿಎಂ, ರಾಜ್ಯದಲ್ಲಿನ `ಕಮಿಷನ್ ಹಾವಳಿ'ಯನ್ನು ತಡೆಯಲು ಮತ್ತು ಗುತ್ತಿಗೆದಾರರ ಹಿತಾಸಕ್ತಿಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ನೋಡಿಕೊಳ್ಳಲು ತಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು. 

ಸರ್ಕಾರವು ಹೊಸ ಬಜೆಟ್ ನ್ನು ಮಂಡಿಸಲು ಸಿದ್ಧತೆ ನಡೆಸಿದೆ. ಅದು ಮುಗಿದ ನಂತರ ಬಿಬಿಎಂಪಿ ಮತ್ತು ಹಣಕಾಸು ಇಲಾಖೆ ಕಾರ್ಯದರ್ಶಿಗಳ ಸಭೆಯನ್ನು ಕರೆದು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು. ಗುತ್ತಿಗೆದಾರರಿಗೆ ಬಾಕಿ ಉಳಿದಿರುವ ಬಿಲ್‌ಗಳನ್ನು ತೆರವುಗೊಳಿಸಲಾಗುವುದು ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com