ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರೂಪಿಸಿದ್ದ ಕಾರ್ಯಕ್ರಮಗಳು ಪುನರಾರಂಭ: ಸಿಎಂ ಸಿದ್ದರಾಮಯ್ಯ

ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರೂಪಿಸಿದ್ದ ಕಾರ್ಯಕ್ರಮಗಳನ್ನು ಪುನರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಭರವಸೆ ನೀಡಿದ್ದಾರೆ.
ಸಿಎಂ ಸಿದ್ಧರಾಮಯ್ಯ
ಸಿಎಂ ಸಿದ್ಧರಾಮಯ್ಯ
Updated on

ಬೆಂಗಳೂರು: ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರೂಪಿಸಿದ್ದ ಕಾರ್ಯಕ್ರಮಗಳನ್ನು ಪುನರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಭರವಸೆ ನೀಡಿದ್ದಾರೆ.

ರಾಜ್ಯ ಅಲ್ಪಸಂಖ್ಯಾತ ಮುಸ್ಲಿಂ ಚಿಂತಕರ ಚಾವಡಿಯ ಕೇಂದ್ರ ಮಂಡಳಿಯ ನಿಯೋಗ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿತು. ಈ ವೇಳೆ ಮಾತನಾಡಿದ ಸಿಎಂ, ಸರ್ಕಾರ ಘೋಷಿಸಿದಂತೆ 5 ಗ್ಯಾರಂಟಿಗಳನ್ನು ಈಗಲೇ ಅನುಷ್ಠಾನಕ್ಕೆ ತರುತ್ತಿದ್ದು, ಮುಂದಿನ ವರ್ಷದಿಂದ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

ಕಳೆದ ಐದು ವರ್ಷಗಳಿಂದ ಸರ್ಕಾರದ ಯೋಜನೆಗಳಿಂದ ಸಮುದಾಯ ವಂಚಿತವಾಗಿದ್ದು, ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಇಲಾಖೆ ಹಾಗೂ ನಿಗಮಗಳಲ್ಲಿ ಅನುದಾನ ಹೆಚ್ಚಳ, ವಸತಿ ಶಾಲೆ, ಜಿಲ್ಲೆಗೊಂದು ಅಲ್ಪಸಂಖ್ಯಾತರ ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸಬೇಕು ಎಂದು ನಿಯೋಗ ಸಿಎಂಗೆ ಮನವಿ ಮಾಡಿತು.

ಚಾವಡಿಯು ಒಂದು ದಶಕದಿಂದ ಕರ್ನಾಟಕದ ಜನಪರ ಚಳವಳಿಗಳೊಂದಿಗೆ ಗುರುತಿಸಿಕೊಂಡಿದೆ. ಸಾಹಿತ್ಯ ಕ್ಷೇತ್ರ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ವಿದ್ಯಾರ್ಥಿ ಹಾಗೂ ದಲಿತ ಚಳವಳಿಗಳು ಹಾಗೂ ಜನಪರವಾದ ಇತರ ಹೋರಾಟಗಳೊಂದಿಗೆ ಗುರುತಿಸಿಕೊಂಡಿದೆ.

ಮುಸ್ಲಿಂ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಚಾವಡಿ ಒತ್ತು ನೀಡಿದೆ. ತನ್ನ ಧರ್ಮದ ಕೋಮುವಾದವನ್ನು ವಿರೋಧಿಸುತ್ತಲೇ ಇನ್ನೊಂದರ ಕೋಮುವಾದವನ್ನು ವಿರೋಧಿಸುವ ಕೆಲಸ ಮಾಡುತ್ತಿದೆ ಎಂದು ಸಭೆಗೆ ತಿಳಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com