93.40 ಕೋಟಿ ರೂಪಾಯಿ ವೆಚ್ಚದಲ್ಲಿ ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಕಾಮಗಾರಿಗೆ ಚಾಲನೆ

ವಿಶ್ವ ವಿಖ್ಯಾತ ನಂದಿ ಬೆಟ್ಟಕ್ಕೆ ಪ್ಯಾಸೆಂಜರ್ ರೋಪ್‌ವೇ ನಿರ್ಮಾಣ ಮಾಡುವ ಕಾಮಗಾರಿಗೆ ಸೋಮವಾರ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಕಾಮಗಾರಿಗೆ ಚಾಲನೆ
ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಕಾಮಗಾರಿಗೆ ಚಾಲನೆ
Updated on

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿ ಬೆಟ್ಟಕ್ಕೆ ಪ್ಯಾಸೆಂಜರ್ ರೋಪ್‌ವೇ ನಿರ್ಮಾಣ ಮಾಡುವ ಕಾಮಗಾರಿಗೆ ಸೋಮವಾರ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಅಸಂಖ್ಯಾತ  ಪ್ರವಾಸಿಗರ ಬಹು ದಶಕಗಳ ಕನಸನ್ನು    ನನಸಾಗಿಸುವ ಕಾರ್ಯಕ್ಕೆ ಇಂದು ಚಾಲನೆ  ದೊರೆತಿದ್ದು, ಖ್ಯಾತ ಕನ್ನಡ ಚಲನಚಿತ್ರ ನಟ ಶಂಕರ್ ನಾಗ್ ಅವರು ಪಂಚಗಿರಿ ನಂದಿಗಿರಿದಾಮದಲ್ಲಿ ರೋಪ್ ವೆ ನಿರ್ಮಿಸಬೇಕು ಎಂದು ಒತ್ತಾಸೆ ಪಟ್ಟಿದ್ದರು.ಅವರ ಆಶಯ ಕೆಲವೇ ತಿಂಗಳಲ್ಲಿ ಈಡೇರಲಿದೆ ಎಂದರು. 

ರೋಪ್ ವೇ ಕಾಮಗಾರಿ ಅಭಿವೃದ್ಧಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಡೈನಾಮಿಕ್ಸ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮಾದರಿಯಲ್ಲಿ ನಂದಿ ಬೆಟ್ಟದಲ್ಲಿ ರೋಪ್‌ವೇ ಅಭಿವೃದ್ಧಿಪಡಿಸುವ ಈ ಯೋಜನೆಗೆ 93.40 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಸುಮಾರು 2.93 ಕಿ.ಮೀ ದೂರದ ರೋಪ್‌ವೇ ಭಿವೃದ್ಧಿಪಡಿಸಲಾಗುತ್ತದೆ. ಡೈನಾಮಿಕ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್  30 ವರ್ಷಗಳ ರಿಯಾಯಿತಿ ಅವಧಿಯೊಂದಿಗೆ ನಿರ್ಮಾಣ, ವಿನ್ಯಾಸ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ (DBFOT) ಚೌಕಟ್ಟಿನ ಮೇಲೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.

ಐತಿಹಾಸಿಕ ತಾಣ ಮತ್ತು ಪಾರಂಪರಿಕ ಸ್ಮಾರಕಗಳಿಗೆ ನೆಲೆಯಾಗಿರುವ ನಂದಿ ಬೆಟ್ಟ ಟ್ರಕ್ಕಿಂಗ್, ಸೈಕ್ಲಿಂಗ್ ಮತ್ತು ಪ್ಯಾರಾಗ್ರೆಡಿಂಗ್‌ನಂತಹ ಸಾಹಸ ಕ್ರೀಡೆಗಳಿಗೆ ಪ್ರಸಿದ್ಧಿ  ಪಡೆದಿದೆ. ಇಂತಹ ತಾಣ ತಲುಪಲು ರೋಪ್‌ವೇಯ ವೇಗ ಮತ್ತು ಪರಿಸರ ಸ್ನೇಹಿ ಸಾರಿಗೆ ಸೌಲಭ್ಯ, ಅನುಕೂಲ ಕಲ್ಪಿಸುವುದರೊಂದಿಗೆ ತಲುಪುವ ಸಮಯ ಉಳಿಸಲಾಗುತ್ತದೆ. ಪ್ರವಾಸಿಗರಿಗೆ ಸುತ್ತಮುತ್ತಲಿನ ಪ್ರದೇಶದ ಮೈಮಾನಿಕ ಚಿತ್ರಣ ನೀಡುವುದರ ಜೊತೆಗೆ ಈ ಭಾಗದಲ್ಲಿ ಮಾಲಿನ್ಯ ಕಡಿಮೆ ಮಾಡಲು ಸಹಕಾರಿಯಾಗಿದೆ.

ರೋಪ್‌ವೇ ನಿರ್ಮಾಣ ಸುಗಮ ಸಂಪರ್ಕದ ಜತೆಗೆ ನಂದಿ ಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಹಕಾರಿಯಾಗಲಿದೆ. ಬೆಟ್ಟದ ಮೇಲಿನ ಮತ್ತು ಕೆಳಗಿನ ಲ್ಯಾಂಡಿಂಗ್ ಸ್ಟೇಷನ್‌ಗಳಲ್ಲಿ ವಿವಿಧ ಸೌಲಭ್ಯಗಳನ್ನು ಪ್ರವಾಸಿಗರಿಗೆ ಕಲ್ಪಸಲಾಗುತ್ತದೆ. ಬೆಟ್ಟದ ಕೆಳಗಿನ ಟರ್ಮಿನಲ್ ನಲ್ಲಿ- 480 ದ್ವಿಚಕ್ರ, 410 ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್  ವ್ಯವಸ್ಥೆ, ಪುಡ್ ಕೋರ್ಟ್, ಕುಡಿಯುವ ನೀರಿನ ಘಟಕಗಳು, ಶೌಚಾಲಯ ವ್ಯವಸ್ಥೆ, ಟಿಕೆಟ್ ಕೌಂಟರ್ ಗಳು, ವಿಶ್ರಾಂತಿ ಕೊಠಡಿಗಳು, ರೆಸ್ಟೋರೆಂಟ್, ಮಳಿಗೆಗಳು ಇರುತ್ತವೆ.

ಬೆಟ್ಟದ ಮೇಲಿನ ಟರ್ಮಿನಲ್ ನಲ್ಲಿ ಫುಡ್ ಕೋರ್ಟ್, ಕುಡಿಯುವ ನೀರಿನ ಘಟಕಗಳು, ಶೌಚಾಲಯ ವ್ಯವಸ್ಥೆ, ಟಿಕೆಟ್ ಕೌಂಟರ್ ಗಳು, ವಿಶ್ರಾಂತಿ ಕೊಠಡಿಗಳು ನಿರ್ಮಾಣ  ಆಗಲಿವೆ. ನಿರ್ಮಿತ ರೋಪ್ ವೇ ಗೆ ಕೆಳಗಿನ ನಿಲ್ದಾಣದಿಂದ ಮೇಲಿನ ನಿಲ್ದಾಣ ತಲುಪಲು ಅಂದಾಜು 14-15 ನಿಮಿಷಗಳು ಆಗಲಿದೆ. ಪ್ರತಿ ಗಂಟೆಗೆ ಅಂದಾಜು 1000 ಜನರನ್ನು ಕೆಳಗಿನ ನಿಲ್ದಾಣದಿಂದ ಮೇಲಿನ ನಿಲ್ದಾಣಕ್ಕೆ ಕರೆದೊಯ್ಯಬಹುದು. 50 ಕ್ಯಾಚಿನ್‌ಗಳನ್ನು ಅಳವಡಿಸಲಾಗುತ್ತಿದ್ದು, ಪ್ರತಿ ಕ್ಯಾಚಿನ್ ನಲ್ಲಿ 10 ಪ್ರಯಾಣಿಕರನ್ನು ಕರೆದೊಯ್ಯಬಹುದು. ಈ ಯೋಜನೆಯಿಂದಾಗಿ ನೇರವಾಗಿ 500 ಜನರಿಗೆ, ಪರೋಕ್ಷವಾಗಿ 5000 ಜನರಿಗೆ ಉದ್ಯೋಗಾವಕಾಶಗಳು ದೊರೆಯಲಿದೆ ಎಂದು  ತಿಳಿಸಿದರು. 

ಈ ಯೋಜನೆಯಿಂದಾಗಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಲಿದೆ. ದೇವನಹಳ್ಳಿ ಕೋಟೆ, ನಂದಿ, ಭೋಗನಂದೀಶ್ವರ, ಘಾಟಿ ಸುಬ್ರಹ್ಮಣ್ಯ, ವಿದುರಾಶ್ವತ್ಥ, ಮುದ್ದೇನಹಳ್ಳಿ ಮುಂತಾದ ಪ್ರವಾಸಿ ತಾಣಗಳು ಅಭಿವೃದ್ಧಿಯಾಗಲಿವೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಹಳ ಹತ್ತಿರವಿರುವ ಕಾರಣ ದೇಶಿಯ ಹಾಗೂ  ವಿದೇಶಿ ಪ್ರವಾಸಿಗರನ್ನು ಸೆಳೆಯಲಿದೆ ಎಂದು ಮಾಹಿತಿ  ನೀಡಿದರು.

ಶಂಕುಸ್ಥಾಪನೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎನ್ ನಾಗರಾಜ್, ಕಂದಾಯ ಸಚಿವ ಆರ್.ಅಶೋಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ಡಾ.ಕೆ. ಸುಧಾಕರ್, ವಿವಿಧ ಇಲಾಖೆಯ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com