ಒಳ ಮೀಸಲಾತಿ ವಿವಾದ: ಬಂಜಾರ ಸಮುದಾಯದಿಂದ ಹಿಂಸಾತ್ಮಕ ಪ್ರತಿಭಟನೆ; ಬಿಜೆಪಿ-ಕಾಂಗ್ರೆಸ್ ಪರಸ್ಪರ ಆರೋಪ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಂಜಾರರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮಂಗಳವಾರ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿ ಸ್ಫೋಟಗೊಂಡಿದ್ದು, ಘಟನೆಗೆ ಪರಸ್ಪರರು ದೂಷಿಸಿಕೊಂಡಿದ್ದಾರೆ.
ಬಂಜಾರ ಸಮುದಾಯದಿಂದ ಪ್ರತಿಭಟನೆ ಚಿತ್ರ
ಬಂಜಾರ ಸಮುದಾಯದಿಂದ ಪ್ರತಿಭಟನೆ ಚಿತ್ರ

ಬೆಂಗಳೂರು/ಕಲಬುರಗಿ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಂಜಾರರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮಂಗಳವಾರ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿ ಸ್ಫೋಟಗೊಂಡಿದ್ದು, ಘಟನೆಗೆ ಪರಸ್ಪರರು ದೂಷಿಸಿಕೊಂಡಿದ್ದಾರೆ.

ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತು ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಸಾವಿರಾರು ಬಂಜಾರ ಸಮುದಾಯದ ಜನರು ಶಿಕಾರಿಪುರದಲ್ಲಿ ಸೋಮವಾರ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಕಲ್ಲು ತೂರಾಟದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಶಿಕಾರಿಪುರ ಶಾಸಕ ಬಿ ಎಸ್ ಯಡಿಯೂರಪ್ಪ ಅವರ ಮನೆಯ ಕೆಲವು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.

ಈ ಘಟನೆಗೆ ಬಿಜೆಪಿಯಲ್ಲಿನ ಆಂತರಿಕ ಪಿತೂರಿ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ಆದರೆ, ಹಿಂಸಾಚಾರಾದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಮತ್ತು ಹಿಂಸಾಚಾರವನ್ನು ವ್ಯವಸ್ಥಿತವಾಗಿ ಯೋಜಿಸಲಾಗಿದೆ ಎಂದು ಸಾಬೀತುಪಡಿಸಲು ಪುರಾವೆಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. 

ಅವರು (ಶಿವಕುಮಾರ್) ಏನು ಹೇಳುತ್ತಿದ್ದಾರೆ? ಕಾಂಗ್ರೆಸ್ ಎಲ್ಲೆಡೆ ಷಡ್ಯಂತ್ರ ನಡೆಸುತ್ತಿದೆ. ಸ್ಥಳೀಯವಾಗಿ ಸಿಕ್ಕಿಬಿದ್ದವರೆಲ್ಲರೂ ಕಾಂಗ್ರೆಸ್‌ನವರೇ. ಅವರೆಲ್ಲರೂ ಕಾಂಗ್ರೆಸ್ ನಾಯಕರು, ಅದರ ಬಗ್ಗೆ ಡಿ ಕೆ ಶಿವಕುಮಾರ್ ಏನು ಹೇಳುತ್ತಾರೆ?" ಎಂದು ಬೊಮ್ಮಾಯಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕ್ಯಾಮರಾದಲ್ಲಿ ಕಾಂಗ್ರೆಸ್ ಮುಖಂಡರು ಸಿಕ್ಕಿ ಬಿದಿದ್ದಾರೆ. ಬಂಜಾರ ಸಮುದಾಯದವರಿಗೆ ಏನು ಗೊತ್ತಿಲ್ಲ. ಪರಿಶಿಷ್ಟ ಸಮುದಾಯ ಪಟ್ಟಿಯಿಂದ ಅವರ ಸಮುದಾಯವನ್ನು ಕೈಬಿಡಲಾಗುತ್ತಿದೆ ಎಂದು ತಪ್ಪಾದ ಸುದ್ದಿಯನ್ನು ಕಾಂಗ್ರೆಸ್ ನವರು ಹರಡುತ್ತಿದ್ದಾರೆ. ಘಟನೆ ಹಿಂದಿನ ರಾತ್ರಿ ಸಭೆ ನಡೆಸಿದ ನಂತರ ವ್ಯವಸ್ಥಿತವಾಗಿ ಈ ಪಿತೂರಿ ನಡೆಸಲಾಗಿದೆ. ಪುರಾವೆಗಳೊಂದಿಗೆ ಇದನ್ನು ನಾನು ಹೇಳುತ್ತಿದ್ದೇನೆ ಎಂದು ಸಿಎಂ ಹೇಳಿದರು. 

ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಕೆಲವು ಪಕ್ಷಗಳು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿವೆ ಎಂದು ಆರೋಪಿಸಿದ್ದು, ಘಟನೆಯಲ್ಲಿ ಭಾಗಿಯಾದವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇದರ ಹಿಂದೆ ‘ರಾಜಕೀಯ’ ಅಡಗಿದೆ ಎಂದು ಆರೋಪಿಸಿದ್ದಾರೆ. 

ಘಟನೆಯ ಹಿಂದೆ ರಾಜಕೀಯ ಉದ್ದೇಶದಿಂದ ಕೆಲವರ ಕೈವಾಡವಿರುವ ಬಗ್ಗೆ ನನಗೆ ಮಾಹಿತಿ ಇದೆ, ಈ ಬಗ್ಗೆ ತನಿಖೆ ನಡೆಯುತ್ತಿದೆ, ಇತರ ನಾಲ್ಕೈದು ಪ್ರಕರಣಗಳಲ್ಲಿ ಭಾಗಿಯಾಗಿರುವವರು ಈ ಘಟನೆಯ ಹಿಂದೆ ಇದ್ದಾರೆ. ಅಮಾಯಕರನ್ನು ಪ್ರಚೋದಿಸಲಾಗಿದೆ. ಯಡಿಯೂರಪ್ಪ ನಿವಾಸದ ಮೇಲೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿರುವುದು ಸರಿಯಲ್ಲ. ಎಲ್ಲರೂ ಶಾಂತಿ ಕಾಪಾಡಬೇಕು ಎಂದರು.

ತಮ್ಮ ಮನೆಗೆ ಕಲ್ಲು ತೂರಾಟ ನಡೆಸಿದ್ದಕ್ಕಾಗಿ ಯಾರ ವಿರುದ್ಧವೂ ಕ್ರಮ ಕೈಗೊಳ್ಳಬೇಡಿ ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ, ಆದರೆ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಅವರಲ್ಲಿ ಎರಡರಿಂದ ಮೂವರು ಆಸ್ಪತ್ರೆಯಲ್ಲಿದ್ದಾರೆ. ಕಾನೂನನ್ನು ಕೈಗೆತ್ತಿಕೊಂಡು ಬೆಂಕಿ ಹಚ್ಚಲಾಗಿದೆ. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಬಿಜೆಪಿಯವರೇ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರೆ, ಬಿಜೆಪಿಯೇ ಈ ಪರಿಸ್ಥಿತಿ ಸೃಷ್ಟಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com