ಪ್ರಧಾನಿ ಮೋದಿ ಮೇಲೆ ದಾಳಿಗೆ ಸಂಚು ಕೇಸು: ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್ ಐಎ ದಾಳಿ, ದಾಖಲೆಗಳ ಪರಿಶೀಲನೆ

ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು,ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು, ಬಂಟ್ವಾಳಗಳಲ್ಲಿ ಮನೆ, ಕಚೇರಿ, ಆಸ್ಪತ್ರೆಗಳು ಸೇರಿದಂತೆ 16 ಕಡೆಗಳಲ್ಲಿ ಎನ್ ಐಎ ದಾಳಿಯಾಗಿದೆ.

ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲೆ ದಾಳಿಗೆ ಸಂಚು ರೂಪಿಸಲಾಗಿತ್ತು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದ್ದು ಸಿಬ್ಬಂದಿ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.

ಜುಲೈ 12, 2022 ರಂದು ಬಿಹಾರದ ಪಾಟ್ನಾದಲ್ಲಿ ನಡೆದ ರ್ಯಾಲಿಯಲ್ಲಿ ಈಗ ನಿಷೇಧಿತ ಇಸ್ಲಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಹಲ್ಲೆ ನಡೆಸಲು ಯೋಜನೆ ರೂಪಿಸಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿಗಳನ್ನು ನಡೆಸಲಾಗುತ್ತಿದೆ.

ನಾಲ್ವರು ವಶಕ್ಕೆ: ದಾಳಿ ಬಳಿಕ ಶಂಕೆಯ ಹಿನ್ನೆಲೆಯಲ್ಲಿ ನಾಲ್ವರನ್ನು ಎನ್ಐಎ ಅಧಿಕಾರಿಗಳು ಪುತ್ತೂರು ತಾಲ್ಲೂಕಿನ ಮೂರು ಕಡೆಗಳಲ್ಲಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. 

ಈ ಪ್ರಕರಣದ ತನಿಖೆ ನಡೆಸುತ್ತಿರುವ ಐಎನ್​ಎ ಅಧಿಕಾರಿಗಳು ಫುಲ್ವಾರಿ ಶರೀಫ್ ಎಂಬುವವನನ್ನು ಬಂಧಿಸಿದ್ದರು. ತಮ್ಮ ಕುಕೃತ್ಯಕ್ಕೆ ಸಂಚು ನಡೆಸಲು ದಕ್ಷಿಣ ಕನ್ನಡದಿಂದ ಹಣಕಾಸು ನೆರವು ನೀಡಲಾಗಿದೆ ಎಂಬ ಸತ್ಯ ತನಿಖೆ ವೇಳೆ ಬಹಿರಂಗವಾಗಿತ್ತು. ಈ ಹಣದ ಜಾಡು ಹಿಡಿದು ಹೊರಟ ಅಧಿಕಾರಿಗಳಿಗೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಮೂಲಕ ಭಾರತಕ್ಕೆ ಹಣ ಬರುತ್ತಿದ್ದು, ಇದನ್ನು ಭಾರತದಲ್ಲಿ ಭಯೋತ್ಪಾದನೆ ಎಸಗಲು ಬಳಸಲಾಗುತ್ತಿದೆ ಎಂಬ ಅಂಶವನ್ನು ಪತ್ತೆಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಎನ್​ಐಎ ಅಧಿಕಾರಿಗಳು ಮತ್ತೆ ದಕ್ಷಿಣ ಕನ್ನಡದ ಹಲವು ಕಡೆ ದಾಳಿ ಮಾಡಿದ್ದು, ಸಾಕಷ್ಟು ಮನೆ, ಕಚೇರಿ, ಒಂದು ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ಬಂಟ್ವಾಳ ಮತ್ತು ಪುತ್ತೂರಿನಲ್ಲಿ ದಾಳಿ ನಡೆಸಿದ್ದ NIA ಅಧಿಕಾರಿಗಳು: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಮಾರ್ಚ್​ ತಿಂಗಳಲ್ಲಿ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ದಾಳಿ ನಡೆಸಿದ್ದರು. ವಿಧ್ವಂಸಕ ಕೃತ್ಯ ಎಸಗಲು ಹಣಕಾಸಿನ ನೆರವು ಒದಗಿಸಿರಬಹುದು ಎಂಬ ಗುಮಾನಿಯ ಮೇರೆಗೆ ಬಂಟ್ವಾಳ ಮೂಲದ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಇಕ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್ ನಾಲ್ವರ ಮನೆ ಮೇಲೆ ದಾಳಿ ಮಾಡಿ ಬಂಧಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com