ಆಂಧ್ರ ಪ್ರದೇಶದ ಉದ್ಯಮಿಗೆ ನಿವೇಶನ ಕೊಡಿಸುವುದಾಗಿ ವಂಚನೆ: ಬೆಂಗಳೂರಿನ ಐವರ ಬಂಧನ

ನಿವೇಶನ ಕೊಡಿಸುವುದಾಗಿ ಆಂಧ್ರ ಪ್ರದೇಶ ಮೂಲದ ಉದ್ಯಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು 1.90 ಕೋಟಿ ರೂ. ವಂಚಿಸಿದ್ದ ಐವರು ಆರೋಪಿಗಳನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಿವೇಶನ ಕೊಡಿಸುವುದಾಗಿ ಆಂಧ್ರ ಪ್ರದೇಶ ಮೂಲದ ಉದ್ಯಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು 1.90 ಕೋಟಿ ರೂ. ವಂಚಿಸಿದ್ದ ಐವರು ಆರೋಪಿಗಳನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ನಿವಾಸಿಗಳಾದ ಸಂಜಯ್‌ ಶ್ರೀನಿವಾಸ್‌, ಲೋಕನಾಥಾಚಾರಿ, ಪ್ರಭಾಕರ್‌ ರೆಡ್ಡಿ, ರಾಜೇಶ್‌ ಮತ್ತು ಪೊಲ್ವಿನ್‌ ರವಿಕುಮಾರ್‌ ಬಂಧಿತರು. ಆರೋಪಿಗಳಿಂದ 65 ಲಕ್ಷ ರೂ. ನಗದು, 8.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಾಲ್ಕು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಆಂಧ್ರಪ್ರದೇಶ ಮೂಲದ ಉದ್ಯಮಿ ರಾಧಾಕೃಷ್ಣ ಎಂಬವರನ್ನು ಸಂಪರ್ಕಿಸಿದ್ದ ಆರೋಪಿಗಳು, ತಿರುಪತಿಯಲ್ಲಿ ನಿವೇಶನ ಕೊಡಿಸುತ್ತೇನೆ. ವ್ಯವಹಾರ ಮಾತನಾಡಲು ಬೆಂಗಳೂರಿಗೆ ಬರುವಂತೆ ಕರೆಸಿಕೊಂಡಿದ್ದಾರೆ.

ಕೃಷ್ಣ ಅವರು ತಮ್ಮ ಸ್ನೇಹಿತ ಶಿವಕುಮಾರ್ ಅವರೊಂದಿಗೆ ಬೆಂಗಳೂರಿಗೆ ಬಂದಿದ್ದರು. ಅವರು ಸಿಬಿಡಿಯ ಪ್ರತಿಷ್ಠಿತ ಹೋಟೆಲ್‌ನಲ್ಲಿ ಆರೋಪಿಗಳನ್ನು ಭೇಟಿಯಾಗಿದ್ದರು. ಆ ವ್ಯಕ್ತಿಗಳು ಕೃಷ್ಣ ಅವರಿಗೆ ಕೆಲವು ಆಸ್ತಿ ದಾಖಲೆಗಳನ್ನು ತೋರಿಸಿದರು ಮತ್ತು ಮಾಲೀಕರು ಕೆಆರ್ ಪುರಂನಲ್ಲಿದ್ದಾರೆ ಎಂದು ಹೇಳಿದರು. ರಾಧಾಕೃಷ್ಣ ಅವರನ್ನು ಹೋಟೆಲ್‌ನಲ್ಲಿ ಕಾಯುವಂತೆ ಹೇಳಿ ಶಿವಕುಮಾರ್  ಜೊತೆ ಮಾಲೀಕರ ಭೇಟಿ ಮಾಡಲು ಕರೆದುಕೊಂಡು ಹೋಗುವುದಾಗಿ ಹೇಳಿದರು. ಶಿವಕುಮಾರ್ ಜೊತೆ ನಗದು ಹಣದೊಂದಿಗೆ ಆರೋಪಿಗಳು ಕಾರಿನಲ್ಲಿ ತೆರಳಿದ್ದರು.

ಮಾರ್ಗಮಧ್ಯೆ ನಿಲ್ಲಿಸಿ ಶಿವಕುಮಾರ್ ಅವರಿಗೆ ಜ್ಯೂಸ್ ಕೊಡುವಂತೆ ಹೇಳಿದರು. ಶಿವಕುಮಾರ್ ಕಾರಿನಿಂದ ಕೆಳಗಿಳಿದಾಗ ಗ್ಯಾಂಗ್ ನಗದು ಸಮೇತ ಪರಾರಿಯಾಗಿದೆ. ಶಿವಕುಮಾರ್ ತನ್ನ ಸ್ನೇಹಿತನಿಗೆ ಅವ್ಯವಹಾರದ ಬಗ್ಗೆ ತಿಳಿಸಿ ಹೋಟೆಲ್‌ಗೆ ಮರಳಿದರು.

ಬಳಿಕ ಠಾಣೆಗೆ ಬಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳವು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಠಾಣಾಧಿಕಾರಿ ಬಿ.ಭರತ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com