ಯತೀಂದ್ರ ಅವರು ವರ್ಗಾವಣೆ, ಲಂಚ ಅಂತ ಎಲ್ಲಿ ಮಾತನಾಡಿದ್ದಾರೆ; ಬಿಜೆಪಿ-ಜೆಡಿಎಸ್ ನವರಿಗೆ ಬೇರೆ ಕೆಲಸ ಇಲ್ಲ: ಡಿ ಕೆ ಶಿವಕುಮಾರ್

ಸಿಎಂ ಸಿದ್ದರಾಮಯ್ಯನವರ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಮೊಬೈಲ್ ನಲ್ಲಿ ಮಾತನಾಡಿರುವ ಲಿಸ್ಟ್ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿ ವಿವಾದವಾಗುತ್ತಿದ್ದಂತೆ ಡಿಸಿಎಂ ಡಿ ಕೆ ಶಿವಕುಮಾರ್ ಯತೀಂದ್ರ ಪರ ಬ್ಯಾಟ್ ಬೀಸಿದ್ದಾರೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಮೊಬೈಲ್ ನಲ್ಲಿ ಮಾತನಾಡಿರುವ ಲಿಸ್ಟ್ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿ ವಿವಾದವಾಗುತ್ತಿದ್ದಂತೆ ಡಿಸಿಎಂ ಡಿ ಕೆ ಶಿವಕುಮಾರ್ ಯತೀಂದ್ರ ಪರ ಬ್ಯಾಟ್ ಬೀಸಿದ್ದಾರೆ.

ಕುಮಾರಸ್ವಾಮಿ ಅವರು ಯತೀಂದ್ರ ಕುರಿತು ಹಂಚಿಕೊಂಡಿರುವ ವಿಡಿಯೋದಲ್ಲಿ ಎಲ್ಲಾದರೂ ವರ್ಗಾವಣೆ ಅಂತ ಪದ ಇದೆಯಾ? ಲಂಚದ ಬಗ್ಗೆ ಎಲ್ಲಿ ಮಾತನಾಡಿದ್ದಾರೆ? ಸುಮ್ಮನೇ ಪ್ರಚಾರ ಮಾಡಿ ನಮ್ಮ ಹುಡುಗನನ್ನು ಲೀಡರ್‌ ಮಾಡುತ್ತಿದ್ದಾರೆ. ಮಾಡಲಿ ಬಿಡಿ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಹೇಳಿದರು.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯತೀಂದ್ರ ಎಲ್ಲಿ ವರ್ಗಾವಣೆ ಬಗ್ಗೆ ಮಾತಾಡಿದ್ದಾರೆ ಹೇಳಿ? ವಿಡಿಯೋ ನಾನು ನೋಡಿದ್ದೇನೆ. ಒಬ್ಬ ಮಾಜಿ ಶಾಸಕ ನಾಲ್ಕೈದು ಅಧಿಕಾರಿಗಳ ವರ್ಗಾವಣೆ ಕೇಳಿದರೆ ಏನ್ ತಪ್ಪು? ನನ್ನ ಕ್ಷೇತ್ರದಲ್ಲಿ ನನ್ನ ಸಹೋದರ ಕೆಲವು ಕೆಲಸ ಅಟೆಂಡ್ ಮಾಡುತ್ತಾರೆ. ಜನ ಮನೆ, ಹಸು ಕುರಿ ಬೇಕಾಂತಾರೆ. ಅದನ್ನು ಸುರೇಶ್ ಅಟೆಂಡ್ ಮಾಡುತ್ತಾರೆ. ನಾನು‌ ನಂತರ ಸಹಿ ಹಾಕುತ್ತೇನೆ. ನಾನು ಬಗುರ್ ಹುಕುಂ ಸಮಿತಿ ಅಧ್ಯಕ್ಷ ಆಗಿದ್ದೇನೆ. ಎಲ್ಲಾ ನೋಡೋದಕ್ಕೆ ಆಗಲ್ಲ ಎಂದರು.

ಯತೀಂದ್ರ ಸಿದ್ದರಾಮಯ್ಯ ಅವರು ಸಿಎಂಗೆ ದಾರಿ ತಪ್ಪಿಸುತ್ತಿದ್ದಾರೆ ಅನ್ನೋ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಅವರಿಗೆ 40 ವರ್ಷಗಳ ರಾಜಕೀಯ ಅನುಭವ ಇದೆ. ಯಾರು ದಾರಿ ತಪ್ಪಿಸಲು ಆಗಲ್ಲ ಎಂದರು.
ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಪಾಪ ಏನೂ ಕೆಲಸ ಇಲ್ಲ. ಯತೀಂದ್ರ ಅವರು ಕೆಡಿಪಿ ಸದಸ್ಯರಿದ್ದಾರೆ. ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಜನ ಸಂಪರ್ಕ ಸಭೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸುವ ವಿಚಾರವಾಗಿ ಯತೀಂದ್ರ ಮಾತನಾಡಿದ್ದಾರೆ ಎಂದರು.

ಮಹದೇವ ಎನ್ನುವ ಅಧಿಕಾರಿ ಮೇಲೆ ಸ್ಥಳೀಯರು ಆರೋಪ ಮಾಡಿದ್ದಾರೆ. ಆಶ್ರಯ ಕಮಿಟಿ ಅಧ್ಯಕ್ಷರಿಗೆ, ಬೇರೊಬ್ಬ ಎಂಎಲ್‌ಎಗಳಿಗೆ ಈ ರೀತಿ ಅಧಿಕಾರ ಇರುತ್ತದೆ. ಇದು ಕುಮಾರಸ್ವಾಮಿಗೆ ಅರ್ಥ ಆಗುವುದಿಲ್ಲವಾ. ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಕುಮಾರಸ್ವಾಮಿ ಅವರಿಗೆ ದಂಧೆ, ಹಗರಣದ ಅನುಭವವಿದೆ. ಅದಕ್ಕೆ ಹಾಗೆ ಟ್ವೀಟ್ ಮಾಡಿದ್ದಾರೆ. ಮಾಡಲಿ ಬಿಡಿ ಎಂದರು. 

ಶ್ಯಾಡೋ ಸಿಎಂ: ವರ್ಗಾವಣೆ ದಂಧೆ ವಿಚಾರದಲ್ಲಿ ಮಾತನಾಡಿರುವ ವಿಡಿಯೊ ಎಂದು ಹೇಳಲಾದ ಸಿಎಂ ಸಿದ್ದರಾಮಯ್ಯ ಪುತ್ರ ಡಾ ಯತೀಂದ್ರ ಮಾತನಾಡಿರುವ ವಿಡಿಯೊ ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆ ಬಿಜೆಪಿ ಟ್ವೀಟ್ ಮೂಲಕ ಸರ್ಕಾರವನ್ನು ಮತ್ತು ಸಿಎಂ ಸಿದ್ದರಾಮಯ್ಯನವರನ್ನು ಟೀಕಿಸಿದೆ.

ಸಿದ್ದರಾಮಯ್ಯನವರು ನಾಮಕಾವಸ್ತೆ ಸಿಎಂ ಅಷ್ಟೆ, ಅವರ ಹೆಸರಿನಲ್ಲಿ ಡಾ ಯತೀಂದ್ರ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ವರ್ಗಾವಣೆ ದಂಧೆ ಮಿತಿಮೀರಿದೆ ಎಂದು ಆರೋಪಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com