
ಬೆಂಗಳೂರು: ನಿರ್ಲಕ್ಷ್ಯದ ಚಾಲನೆಯಿಂದ ಪಾದಚಾರಿ ಸಾವಿಗೆ ಕಾರಣವಾಗಿದ್ದ ಯುವಕನಿಗೆ ಜೈಲು ಶಿಕ್ಷೆ ವಿಧಿಸಿದ್ದ ತುಮಕೂರು ಜಿಲ್ಲೆಯ ಮಧುಗಿರಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ.
2014ರ ಮಾರ್ಚ್ 28ರಂದು ನೀಡಿದ್ದ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಕೊರಟಗೆರೆ ತಾಲೂಕಿನ ಚಿನ್ನಹಳ್ಳಿ ಗ್ರಾಮದ ಹನುಮಂತರಾಯಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ ಟಿ ಅವರು ವಜಾಗೊಳಿಸಿದ್ದಾರೆ.
2012ರ ಜುಲೈ 23ರಂದು ಇರಕಸಂದ್ರ ಕಾಲೋನಿಯಲ್ಲಿ ಕೊರಟಗೆರೆ-ಉರಿಡಿಗೆರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪರಮೇಶಯ್ಯ ಅವರಿಗೆ ಹನುಮಂತರಾಯಪ್ಪ ಅವರು ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿತ್ತು. ಅತಿವೇಗದ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ಸೆಷನ್ಸ್ ಕೋರ್ಟ್ ಆರೋಪಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.
ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಆರೋಪಿ ಹನುಮಂತರಾಯಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. 2012ರಲ್ಲಿ ಅಪಘಾತ ಸಂಭವಿಸಿದಾಗ ಹನುಮಂತರಾಯಪ್ಪ ಅವರಿಗೆ 22 ವರ್ಷ.
ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ರಸ್ತೆ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಾಧೀಶರು, ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದ್ದಾರೆ.
Advertisement