ರಾಜ್ಯ ರಾಜಕೀಯದಲ್ಲಿ ಜೋರಾಗಿದೆ ಪೋಸ್ಟರ್ ವಾರ್: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದ ಸರಣಿ ಪೋಸ್ಟರ್!
ಬೆಂಗಳೂರು/ಚಿಕ್ಕಮಗಳೂರು: ಕಳೆದ ವರ್ಷ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್ ಪೇಸಿಎಮ್ ಸೇರಿದಂತೆ ಇನ್ನಿತರ ಪೋಸ್ಟರ್ಗಳನ್ನು ಅಂಟಿಸಿ ತೀವ್ರ ಪ್ರಚಾರ ಮಾಡಿತ್ತು. ಅದು ದೊಡ್ಡ ಮಟ್ಟದಲ್ಲಿ ಕುಖ್ಯಾತಿ ಪಡೆದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿ ಕಾಂಗ್ರೆಸ್ ಲಾಭ ಪಡೆದಿತ್ತು.
ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟರ್ ವಾರ್ ಆರಂಭಿಸಿದ ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರು, ಜಿಲ್ಲೆಯ ಕೆಇಬಿ ಕಚೇರಿ, ತಾಲೂಕು ಕಚೇರಿ ಸೇರಿದಂತೆ ಹಲವೆಡೆ ಪೋಸ್ಟರ್ಗಳನ್ನು ಅಂಟಿಸಿದ್ದಾರೆ.ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಪೋಸ್ಟರ್ ವಾರ್ ಆರಂಭವಾಗಿದೆ.
ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟರ್ಗಳನ್ನು ಅಂಟಿಸಿದ್ದಾರೆ. ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಕಚೇರಿ ಸೇರಿದಂತೆ ಕೆಇಬಿ ಕಚೇರಿ, ತಾಲೂಕು ಕಚೇರಿಗಳಲ್ಲಿ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ಈ ಪೋಸ್ಟರ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರನ್ನು ಶ್ಯಾಡೋ ಸಿಎಂ ಎಂದು ಕರೆಯಲಾಗಿದೆ.
ರಾಜ್ಯದಲ್ಲಿ ವಿದ್ಯುತ್ ಕಡಿತ ಸಮಸ್ಯೆಯನ್ನು ಜನರು ಅನುಭವಿಸುತ್ತಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಇಂಧನ ಇಲಾಖೆ ಸಚಿವರ ವಿರುದ್ಧ ಪೋಸ್ಟರ್ ಅಂಟಿಸಲಾಗಿದೆ. ರಾಜ್ಯವನ್ನು ಕತ್ತಲೆಗೆ ದೂಡಿ ಇಂಧನ ಸಚಿವ ಕೆ.ಜೆ ಜಾಜ್೯ ಕಾಣೆಯಾಗಿದ್ದಾರೆ. ಹುಡುಕಿಕೊಟ್ಟವರಿಗೆ ಕನಿಷ್ಠ ಸಿಂಗಲ್ ಫೇಸ್ ವಿದ್ಯುತ್ ಉಚಿತ, ಖಚಿತ, ನಿಶ್ಚಿತ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ.
ಇನ್ನು ಇತ್ತೀಚೆಗೆ ತಮ್ಮ ತಂದೆ ಸಿಎಂ ಸಿದ್ದರಾಮಯ್ಯ ಜೊತೆ ಮೊಬೈಲ್ ನಲ್ಲಿ ಡಾ ಯತೀಂದ್ರ ಸಿದ್ದರಾಮಯ್ಯ ಮಾತನಾಡುತ್ತಿರುವ ವಿಡಿಯೊ ವೈರಲ್ ಆದುದನ್ನು ಕೂಡ ಇಟ್ಟುಕೊಂಡು ವೈಎಸ್ಟಿ (ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್) ಸಂಗ್ರಹ ಸಮಿತಿಯ ಸುತ್ತೋಲೆ ಎಂಬ ಶೀರ್ಷಿಕೆ ನೀಡಿ, ಯಾವುದೇ ಸರ್ಕಾರಿ ಸಂಬಂಧಿತ ಸೇವೆಗಳಿಗಾಗಿ ಹಲೋ ಅಪ್ಪಾ.. ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಹಾಗೂ ಪೇಮೆಂಟ್ ಮಾಡಿ ಎಂದು ಬರೆಯಲಾಗಿದೆ. ಈ ಪೋಸ್ಟರ್ನಲ್ಲಿ ಯತೀಂದ್ರ ಅವರನ್ನು ಶ್ಯಾಡೋ ಸಿಎಂ ಎಂದು ಕರೆಯಲಾಗಿದೆ.
ಬಸ್ ಟಿಕೆಟ್ ದರಗಳನ್ನು ಸದ್ದಿಲ್ಲದೆ ಏರಿಸಿದ್ದನ್ನು ಮುಂದಿಟ್ಟುಕೊಂಡು ಪೋಸ್ಟರ್ ಅಂಟಿಸಲಾಗಿದೆ. ಫ್ರೀ ಬಸ್ ಟಿಕೆಟ್ ಎಂದು ನಂಬಿಸಿ 3 ಬಾರಿ ಬಸ್ ಟಿಕೆಟ್ ದರ ಏರಿಸಲಾಗಿದೆ. ಮೈಸೂರು-ಬೆಂಗಳೂರಿಗೆ 160 ರೂ. ಇದ್ದ ಟಿಕೆಟ್ ದರ ಈಗ 200 ರೂ. ಆಗಿದೆ. ಒಂದು ಕಡೆ ಸುಲಿಗೆ, ಇನ್ನೊಂದು ಕಡೆ ಉಚಿತ, ಇದು ಫ್ರೀ ಭಾಗ್ಯವಲ್ಲ, ಹಗಲು ದರೋಡೆ ಅಂತ ಪೋಸ್ಟರ್ನಲ್ಲಿ ಸರ್ಕಾರವನ್ನು ಕಟುವಾಗಿ ಟೀಕಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ