ಲೈಂಗಿಕ ಕಿರುಕುಳ ಪ್ರಕರಣ: ಮುರುಘಾಶ್ರೀ ಬಂಧನದ ಆದೇಶಕ್ಕೆ ಹೈಕೋರ್ಟ್ ತಡೆ, ಬಂಧನವಾದ ಕೆಲ ಗಂಟೆಗಳಲ್ಲೇ ಬಿಡುಗಡೆಗೆ ಆದೇಶ

ಬಂಧಿತರಾಗಿರುವ ಚಿತ್ರದುರ್ಗ ಮುರುಘಾ ಮಠದ ಮಠಾಧೀಶ ಡಾ. ಶಿವಮೂರ್ತಿ ಶರಣರನ್ನು ಕೂಡಲೇ ಬಿಡುಗಡೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ಚಿತ್ರದುರ್ಗದ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಮುರುಘಾ ಶ್ರೀಗಳು
ಮುರುಘಾ ಶ್ರೀಗಳು

ಬೆಂಗಳೂರು/ಚಿತ್ರದುರ್ಗ: ಬಂಧಿತರಾಗಿರುವ ಚಿತ್ರದುರ್ಗ ಮುರುಘಾ ಮಠದ ಮಠಾಧೀಶ ಡಾ. ಶಿವಮೂರ್ತಿ ಶರಣರನ್ನು ಕೂಡಲೇ ಬಿಡುಗಡೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ಚಿತ್ರದುರ್ಗದ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಚಿತ್ರದುರ್ಗದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಬಿಕೆ ಕೋಮಲಾ ಅವರು ಇಂದು ಬೆಳಗ್ಗೆ ಮುರುಘಾ ಶ್ರೀಗಳ ವಿರುದ್ಧದ ಎರಡನೇ ಪೋಕ್ಸೊ ಪ್ರಕರಣದಲ್ಲಿ ಅವರಿಗೆ ಜಾಮೀನು ರಹಿತ ವಾರಂಟ್ ಹೊರಡಿಸಿದ್ದರು. ಮೊದಲ ಪೋಕ್ಸೋ ಪ್ರಕರಣದಲ್ಲಿ 5 ದಿನಗಳ ಹಿಂದೆ ಹೈಕೋರ್ಟ್ ನಿಂದ ಜಾಮೀನು ಪಡೆದು ದಾವಣಗೆರೆಯ ವಿರಕ್ತ ಮಠದಲ್ಲಿ ತಂಗಿದ್ದ ಮುರುಘಾ ಶ್ರೀಗಳನ್ನು ಬಂಧಿಸಿದ್ದ ಪೊಲೀಸರು ಚಿತ್ರದುರ್ಗಕ್ಕೆ ಕರೆತಂದು ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಿತ್ತು.

ಇದನ್ನು ಪ್ರಶ್ನಿಸಿ ಮುರುಘಾ ಶ್ರೀಗಳ ಪರ ವಕೀಲರು ಸಂಜೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠದ ಮುಂದೆ ವಾದಿಸಿದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್(ಎಸ್‌ಪಿಪಿ) ವಿಚಾರಣಾ ಕೋರ್ಟ್‌ಗೆ ಮುರುಘಾ ಶ್ರೀಗಳ ವಿರುದ್ಧ ಎನ್‌ಬಿಡಬ್ಲ್ಯೂ ಕೋರಿ ಮೆಮೊ ಸಲ್ಲಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಈ ಮೆಮೊದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಲು ಯಾವುದೇ ಹೈಕೋರ್ಟ್ ಆದೇಶವಿಲ್ಲ ಎಂದು ತಿಳಿಸಲಾಗಿದೆ. ಇದು ಸಂವೇದನಾಶೀಲ ಪ್ರಕರಣವಾಗಿದೆ ಎಂಬ ಕಾರಣಕ್ಕೆ ನೀವು ಹೈಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಗೋವಿಂದರಾಜ್ ಎನ್‌ಬಿಡಬ್ಲ್ಯೂಗೆ ತಡೆನೀಡಿ ಶ್ರೀಗಳ ಬಿಡುಗಡೆಗೆ ನಿರ್ದೇಶನ ನೀಡಿದರು.

ಅಷ್ಟೇ ಅಲ್ಲದೆ, 8-11-23ರ ಹೈಕೋರ್ಟ್ ಆದೇಶದ ಬಗ್ಗೆ ಎಸ್‌ಪಿಪಿಗೆ ತಿಳಿದಿಲ್ಲದಿರುವುದು ಆಶ್ಚರ್ಯಕರವಾಗಿದೆ. ಪ್ರಕರಣ ಪ್ರಮುಖ ಆರೋಪಿಯಾಗಿರುವ ಶ್ರೀಗಳು ಚಿತ್ರದುರ್ಗಕ್ಕೆ ಪ್ರವೇಶಿಸದಂತೆ ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯವು ಸ್ಪಷ್ಟವಾಗಿ ಆದೇಶಿಸಿದೆ ಎಂದು ನ್ಯಾಯಮೂರ್ತಿಗಳು ಹೇಳಿದರು.

ಮುರುಘಾ ಶ್ರೀಗೆ ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧವನ್ನು ವಿಧಿಸಿದರೆ. ಅದು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಪ್ರಕ್ರಿಯೆಗಳಿಗೂ ಅನ್ವಯಿಸುತ್ತದೆ ಎಂದು ನಾನು ಪರಿಗಣಿಸುತ್ತೇನೆ. ಜಿಲ್ಲೆಗೆ ಪ್ರವೇಶಿಸದಂತೆ ಕೋರ್ಟ್ ವಿಚಾರಣಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಲು ಅನುಮತಿ ನೀಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ.

ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶಗಳು ಹೈಕೋರ್ಟ್ ನೀಡಿದ ಆದೇಶಗಳಿಗೆ ವಿರುದ್ಧವಾಗಿದೆ. ಹೀಗಾಗಿ ಹೈಕೋರ್ಟ್ ತನ್ನ ಅಂತರ್ಗತ ಅಧಿಕಾರವನ್ನು ಚಲಾಯಿಸಬೇಕು ಎಂದು ನಾನು ಪರಿಗಣಿಸಿದ್ದು ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನು ರಹಿತ ಬಂಧನ ವಾರೆಂಟ್ ಗೆ ತಡೆಯಾಜ್ಞೆ ನೀಡಿದ್ದೇನೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. 

2022ರ ಸೆಪ್ಟೆಂಬರ್ 1 ರಿಂದ ಬಂಧನದಲ್ಲಿದ್ದ ಮುರುಘಾ ಶ್ರೀಗಳ ವಿರುದ್ಧ ಎರಡು POCSO ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಮೊದಲ ಪ್ರಕರಣದಲ್ಲಿ ನವೆಂಬರ್ 8ರಂದು ಹೈಕೋರ್ಟ್‌ ಜಾಮೀನು ನೀಡಿದ್ದರಿಂದ ನವೆಂಬರ್ 16ರಂದು ಶ್ರೀಗಳು ಜೈಲಿನಿಂದ ಬಿಡುಗಡೆಯಾಗಿದ್ದರು.

ಬಿಡುಗಡೆಯಾದ ನಂತರ ದಾವಣೆಗೆರೆಯ ವಿರಕ್ತ ಮಠದಲ್ಲಿ ತಂಗಿದ್ದ ಶ್ರೀಗಳನ್ನು ಚಿತ್ರದುರ್ಗ ಪೊಲೀಸರು ಇಂದು ಬಂಧಿಸಿದ್ದಾರೆ. ಮಠಾಧೀಶರ ವಿರುದ್ಧದ ಎರಡು ಪೋಕ್ಸೊ ಪ್ರಕರಣಗಳಲ್ಲಿ ಒಂದರಲ್ಲಿ ಜಾಮೀನಿಗೆ ಹೈಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿದ್ದು, ಪ್ರಕರಣಗಳ ತನಿಖೆ ಪೂರ್ಣಗೊಳ್ಳುವವರೆಗೆ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ನಿರಾಕರಿಸಿದೆ.

ಎರಡು ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಸಮಾನ ಮೊತ್ತಕ್ಕೆ ಇಬ್ಬರ ಶ್ಯೂರಿಟಿಯ ಮೇಲೆ ಅವರಿಗೆ ಜಾಮೀನು ನೀಡಲಾಯಿತು. ಸಾಕ್ಷಿಗಳನ್ನು ಹಾಳು ಮಾಡದಂತೆ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಎಚ್ಚರಿಕೆ ನೀಡಿದರು.

ಮಠಾಧೀಶರು ಮತ್ತು ಇತರ ನಾಲ್ವರ ವಿರುದ್ಧ ಮೈಸೂರಿನ 'ಒಡನಾಡಿ ಸೇವಾ ಸಂಸ್ಥೆ' ಎಂಬ ಎನ್‌ಜಿಒ, ಮಠದ ಶಾಲೆಯಲ್ಲಿ ಓದುತ್ತಿರುವ ಮತ್ತು ಚಿತ್ರದುರ್ಗದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿರುವ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಮೊದಲ ದೂರು ದಾಖಲಿಸಿತ್ತು.

ಮೈಸೂರಿನ ನಜರಾಬಾದ್ ಪೊಲೀಸರು ಪೋಕ್ಸೊ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ನಂತರ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು.

2019 ಮತ್ತು 2022ರ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಾಗ ಇಬ್ಬರು ಅಪ್ರಾಪ್ತ ಬಾಲಕಿಯರ ತಾಯಿ ತನ್ನ ಇಬ್ಬರು ಹೆಣ್ಣುಮಕ್ಕಳು ಮತ್ತು ಇತರ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ನಂತರ ಪೋಕ್ಸೊ ಅಡಿಯಲ್ಲಿ ಎರಡನೇ ಪ್ರಕರಣ ದಾಖಲಾಗಿತ್ತು.

ಕಿರಿಯ ಪೀಠಾಧಿಪತಿ ಬಸವಾದಿತ್ಯ ಹಾಗೂ ಪರಮಶಿವಯ್ಯ, ಗಂಗಾಧರ್, ಮಹಾಲಿಂಗ, ಕರಿಬಸಪ್ಪ ಸೇರಿದಂತೆ ಇತರರು ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ನಂತರ ಎರಡನೇ ಪ್ರಕರಣದಲ್ಲಿ ಪರಮಶಿವಯ್ಯ ಅವರ ಹೆಸರನ್ನು ಚಾರ್ಜ್‌ಶೀಟ್‌ನಿಂದ ಕೈಬಿಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com