ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್‌ ನ್ಯೂಸ್‌: ಯಜಮಾನಿ ಇಲ್ಲದಿದ್ದರೆ ಕುಟುಂಬದ ಹಿರಿಯರ ಖಾತೆಗೆ ಹಣ ಜಮೆಗೆ ನಿರ್ಧಾರ!

ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯಡಿ ಅರ್ಹ ಕುಟುಂಬದ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಕುಟುಂಬದ ಅತ್ಯಂತ ಹಿರಿಯ ಸದಸ್ಯರ ಬ್ಯಾಂಕ್‌ ಖಾತೆಗೆ ಡಿಬಿಟಿ ಮಾಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ.
ಎಚ್.ಕೆ ಪಾಟೀಲ್
ಎಚ್.ಕೆ ಪಾಟೀಲ್

ಬೆಂಗಳೂರು: ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯಡಿ ಅರ್ಹ ಕುಟುಂಬದ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಕುಟುಂಬದ ಅತ್ಯಂತ ಹಿರಿಯ ಸದಸ್ಯರ ಬ್ಯಾಂಕ್‌ ಖಾತೆಗೆ ಡಿಬಿಟಿ ಮಾಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿಗುರುವಾರ ನಡೆದ ಸಂಪುಟ ಸಭೆಯಲ್ಲಿಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆಲ್ಲ ನೆರವು ತಲುಪಿಸುವ ನಿಟ್ಟಿನಲ್ಲಿ ವಿಸ್ತೃತ ಚರ್ಚೆಯಾಗಿದ್ದು, ಈ ನಿರ್ಧಾರ ಕೈಗೊಳ್ಳಲಾಗಿದೆ.

ಎರಡೂ ಗ್ಯಾರಂಟಿ ಯೋಜನೆಗಳ ಅರ್ಹ ಫಲಾನುಭವಿ ಕುಟುಂಬದಲ್ಲಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಕುಟುಂಬದ ಅತ್ಯಂತ ಹಿರಿಯ ಸದಸ್ಯರ ಬ್ಯಾಂಕ್‌ ಖಾತೆಗೆ ಡಿಬಿಟಿ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಯ ಅನುಪಸ್ಥಿತಿಯಲ್ಲಿ ಕುಟುಂಬ ಅತ್ಯಂತ ಹಿರಿಯ ಗೃಹಿಣಿಗೆ ನೆರವಿನ ಮೊತ್ತ ಡಿಬಿಟಿ ಮಾಡಲು ತೀರ್ಮಾನಿಸಲಾಗಿದೆ.

ಹಾಗೆಯೇ ಅನ್ನಭಾಗ್ಯ ಯೋಜನೆಯಡಿ ಕುಟುಂಬದ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಕುಟುಂಬದ ಅತ್ಯಂತ ಹಿರಿಯ ಸದಸ್ಯರ ಬ್ಯಾಂಕ್‌ ಖಾತೆಗೆ 5 ಕೆ.ಜಿ. ಅಕ್ಕಿ ಬದಲಿಗೆ ನೇರ ನಗದು ವರ್ಗಾವಣೆ (ಕುಟುಂಬದ ಸದಸ್ಯರಿಗೆ ಮಾಸಿಕ ತಲಾ 170 ರೂ.) ಮಾಡಲು ಸಂಪುಟ ಅನುಮೋದನೆ ನೀಡಿದೆ.

ಸಂಪುಟ ಸಭೆ ನಂತರ ಈ ಕುರಿತು ಮಾಹಿತಿ ನೀಡಿದ ಸಚಿವ ಎಚ್‌.ಕೆ. ಪಾಟೀಲ್‌, '' ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿ ಕುಟುಂಬದ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಕುಟುಂಬದ ಅತ್ಯಂತ ಹಿರಿಯ ಸದಸ್ಯರ ಬ್ಯಾಂಕ್‌ ಖಾತೆಗೆ ಡಿಬಿಟಿ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ1.27 ಕೋಟಿ ಪಡಿತರ ಕಾರ್ಡ್‌ದಾರರಿದ್ದು, ಈ ಪೈಕಿ 7.67 ಲಕ್ಷ ಕಾರ್ಡ್‌ದಾರರು ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಿಗೆ ಡಿಬಿಟಿ ಪಡೆಯಲು ಅನರ್ಹರಾಗಿದ್ದಾರೆ. ಕುಟುಂಬದ ಮುಖ್ಯಸ್ಥರ ಅನುಪಸ್ಥಿತಿಯಿಂದಾಗಿ ಸೌಲಭ್ಯ ಸಿಗದಂತಾಗಿದೆ. ಆ ಹಿನ್ನೆಲೆಯಲ್ಲಿಎರಡನೇ ಅತಿ ಹಿರಿಯ ಸದಸ್ಯರ ಬ್ಯಾಂಕ್‌ ಖಾತೆಗೆ ಡಿಬಿಟಿ ಮಾಡಲು ಒಪ್ಪಿಗೆ ನೀಡಲಾಗಿದೆ,'' ಎಂದು ಹೇಳಿದರು.

ಸದ್ಯ ಗೃಹಲಕ್ಷ್ಮಿ ಹಣ ಬಿಡುಗಡೆಯಾದರೂ ಸಾಕಷ್ಟು ಮಹಿಳೆಯರ ಖಾತೆಗೆ ಜಮೆಯಾಗಿಲ್ಲ. ಇತ್ತ ಅನ್ನಭಾಗ್ಯ 5 ಕೆಜಿ ಬದಲಾಗಿ ಹಣ ನೀಡುವ ವ್ಯವಸ್ಥೆ ಮಾಡಿದ್ದರೂ ಸಾಕಷ್ಟು ಕುಟುಂಬಕ್ಕೆ ಹಣ ಜಮೆಯಾಗಿಲ್ಲ. ಇದಕ್ಕೆ ಆ ಮನೆಯ ಹಿರಿಯ ಸದಸ್ಯರ ಅಲಭ್ಯತೆ ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆ ಗ್ಯಾರಂಟಿ ಯೋಜನೆಗಳು ಶೇ.100 ರಷ್ಟು ಗುರಿ ಸಾಧಿಸಿಲ್ಲ. ಹೀಗಾಗಿ, ಸರ್ಕಾರವು ಕುಟುಂಬ ಯಜಮಾನ ಲಭ್ಯವಿಲ್ಲದಿದ್ದರೆ ಪರ್ಯಾಯ ಮಾರ್ಗಕ್ಕೆ ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com