ಶಿವಮೊಗ್ಗ ಗಲಭೆ ಒಂದು ಸಣ್ಣ ಗಲಾಟೆ- ಗೃಹ ಸಚಿವ ಪುನರುಚ್ಛರ; ಗಲಾಟೆಯಲ್ಲಿ ಭಾಗಿಯಾದ ಯಾರನ್ನೂ ಬಿಡಲ್ಲ- ಸಚಿವ ಮಧು ಬಂಗಾರಪ್ಪ

ಕಳೆದ ಭಾನುವಾರ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣ ಒಂದು ಸಣ್ಣ ಘಟನೆ, ಈ ಬಗ್ಗೆ ನಮಗೆ ಮೊದಲೇ ಸೂಚನೆಯಿತ್ತು, ಹೀಗಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದೆವು ಎಂದು ನಿನ್ನೆ ಹೇಳಿಕೆ ನೀಡಿದ್ದ ಗೃಹ ಸಚಿವ ಡಾ ಜಿ ಪರಮೇಶ್ವರ್ ಇಂದು ಮಂಗಳವಾರ ಕೂಡ ಅದೇ ಮಾತನ್ನು ಪುನರುಚ್ಛರಿಸಿದ್ದಾರೆ.
ಡಾ ಜಿ ಪರಮೇಶ್ವರ್
ಡಾ ಜಿ ಪರಮೇಶ್ವರ್
Updated on

ಬೆಂಗಳೂರು: ಕಳೆದ ಭಾನುವಾರ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣ ಒಂದು ಸಣ್ಣ ಘಟನೆ, ಈ ಬಗ್ಗೆ ನಮಗೆ ಮೊದಲೇ ಸೂಚನೆಯಿತ್ತು, ಹೀಗಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದೆವು ಎಂದು ನಿನ್ನೆ ಹೇಳಿಕೆ ನೀಡಿದ್ದ ಗೃಹ ಸಚಿವ ಡಾ ಜಿ ಪರಮೇಶ್ವರ್ ಇಂದು ಮಂಗಳವಾರ ಕೂಡ ಅದೇ ಮಾತನ್ನು ಪುನರುಚ್ಛರಿಸಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ.ಪರಮೇಶ್ವರ್ ಇದೊಂದು ಸಣ್ಣ ಗಲಾಟೆ ಎಂದಿದ್ದಾರೆ. ಇದೆಲ್ಲಾ ಏನ್ ಹೊಸದಾಗಿ ಮಾಡ್ತಾರಾ, ಪೊಲೀಸರು ದೊಡ್ಡ ಪ್ರಮಾಣದ ಗಲಾಟೆ ತಪ್ಪಿಸಿದ್ದಾರೆ. ಎರಡೂ ಗುಂಪಿನ 40 ಜನರನ್ನು ಬಂಧಿಸಿದ್ದಾರೆ. ಬ್ಯಾನರ್ ಕಟ್ತಾರೆ, ಪೋಸ್ಟರ್ ಹಾಕ್ತಾರೆ, ಇದನ್ನು ಕೆಲವರು ಲಾಭವಾಗಿ ತೆಗೆದುಕೊಳ್ಳುತ್ತಾರೆ. ಶಿವಮೊಗ್ಗದ ಘಟನೆಗೆ ಕಾರಣ ಏನು ಎಂದು ಬಹಿರಂಗಗೊಳಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಎಲ್ಲೂ ಅಹಿತಕರ ಘಟನೆ ಆಗಲು ಬಿಟ್ಟಿಲ್ಲ. ಅದನ್ನು ಮೀರಿ ಹೋದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು. 

ಕಲ್ಲು ತೂರಾಟ ಮಾಡಿದರು ಎಂಬ ಮಾಹಿತಿ ಇದೆ. ಆದರೆ ಕತ್ತಿ ಮತ್ತು ಗುರಾಣಿ ಬಳಕೆ ಮಾಡಿದ್ದರು ಎಂಬ ಮಾಹಿತಿ ಇಲ್ಲ. ಶಿವಮೊಗ್ಗ ಘಟನೆಗೆ ಯಾರನ್ನೂ ಹೊರಗಿನಿಂದ ಬರಲು ಬಿಟ್ಟಿಲ್ಲ. ಗಲಾಟೆಯ ಬಗ್ಗೆ ಸುಳಿವು ಇರೋದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು ಎಂದು ಹೇಳಿದರು.

ಇಷ್ಟು ದೊಡ್ಡ ಮಟ್ಟದಲ್ಲಿ ಗಲಭೆಯಾಗಿ ಅನೇಕ ಹಿಂದೂಗಳ ಮನೆಯನ್ನು ಗುರಿಯಾಗಿರಿಸಿ ಕಲ್ಲು ತೂರಾಟ, ಹಾನಿ ಮಾಡಿದ್ದರೂ ಗೃಹ ಸಚಿವರು ಸಣ್ಣ ಘಟನೆ ಎಂದು ಹೇಳುತ್ತಿದ್ದಾರೆ ಅಂದರೆ ಇದರಲ್ಲಿ ಸರ್ಕಾರದ ಕುಮ್ಮಕ್ಕು ಇದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಮಧು ಬಂಗಾರಪ್ಪ ಹೇಳಿಕೆ: ಎಲ್ಲದಕ್ಕೂ ರಾಜಕೀಯ ಅಂತ ನಾನು ಹೇಳಲ್ಲ. ಕಾನೂನು ಮೀರಿ ಹೋದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ರಾಜಕೀಯ ಬಳಸಿಕೊಂಡು ಗಲಾಟೆ ಮಾಡಿದರೆ ಯಾರನ್ನೂ ಬಿಡಲ್ಲ. ಹಬ್ಬ ಅಂದ್ರೆ ಎಲ್ಲರೂ ಸೇರಿ ಮಾಡೋದು. ಆದರೆ ಇಂತಹ ವಿಷಯದ ಬಗ್ಗೆ ಮಾತನಾಡೋಕೆ ನೋವು ಆಗುತ್ತದೆ ಎಂದು ಘಟನೆ ಬಗ್ಗೆ ಮಧು ಬಂಗಾರಪ್ಪ ಬೇಸರ ಹೊರ ಹಾಕಿದರು.

ಇಂದು ಶಿವಮೊಗ್ಗ ಜಿಲ್ಲೆಯ ರಾಗಿಗುಡ್ಡಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ ಮಿಲಾದ್ ಮೆರವಣಿಗೆ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಕಲ್ಲು ತೂರಾಟದ ನಡೆದ ಬಳಿಕ ಪರಿಸ್ಥಿತಿ ಉದ್ವಿಗ್ನತೆ ಉಂಟಾಗಿದ್ದರಿಂದ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಕೆಲವರ ಮನೆಗಳಿಗೆ ನುಗ್ಗಿ ಗಲಾಟೆ ಮಾಡಿರೋ ಬಗ್ಗೆಯೂ ಮಾಹಿತಿ ಬಂದಿದೆ. ಸುಮಾರು 50 ಜನರನ್ನು ವಶಕ್ಕೆ ಪಡೆಯಲಾಗಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಪೊಲೀಸರು ಈವರೆಗೆ 24 FIR​ ದಾಖಲಿಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಗಲಾಟೆ ಸಂದರ್ಭದಲ್ಲಿ ಗಂಭೀರ ಆಗಿಲ್ಲ, ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಪ್ರಕರಣ ಸಂಬಂಧ ಸಂಪೂರ್ಣ ಮಾಹಿತಿ ಕಲೆ ಹಾಕುತ್ತೇವೆ. ಗಲಾಟೆಯಲ್ಲಿ ಭಾಗಿಯಾದ ಯಾರನ್ನೂ ಬಿಡಲ್ಲ. ಕಾನೂನು ಎಲ್ಲರಿಗೂ ಒಂದೇ, ಎಲ್ಲರಿಗೂ ಒಂದೇ ರೀತಿ ಶಿಕ್ಷೆ ಆಗುತ್ತದೆ ಎಂದರು.

ಕೆಲವು ಕಿಡಿಗೇಡಿಗಳಿಂದ ಈ ಘಟನೆ: ಬೇರೆ ಕಡೆ ಚೆನ್ನಾಗಿ ಹಬ್ಬ ಮಾಡಿದ್ದಾರೆ. ರಾಗಿಗುಡ್ಡದಲ್ಲಿ ಕೆಲವರು ವೈಯಕ್ತಿಕವಾಗಿ ಈ ಕೆಲಸ ಮಾಡಿದ್ದಾರೆ. ತಪ್ಪು ಮಾಡಿದವರು ಯಾರೇ ಇರಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಸ್​ಪಿ ಅವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಶಾಂತಿ ಕಾಪಾಡುವಂತೆ ಮನವಿ: ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಗರದಲ್ಲಿ ಸೆಕ್ಷನ್ 144 ಮುಂದುವರಿಯಲಿದೆ. ಘಟನೆ ಬಗ್ಗೆ ಮುಖ್ಯಮಂತ್ರಿಗಳಿಗೂ ಮಾಹಿತಿ ನೀಡಿದ್ದೇನೆ. ಜನರು ಸಹ ಶಾಂತಿ ಕಾಪಾಡಬೇಕು ಎಂದು ಮಧು ಬಂಗಾರಪ್ಪ ಮನವಿ ಮಾಡಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com