ಶಾಂತಿ ಹಾಳಾಗುತ್ತಿರುವ ಮೂಲ ಎಲ್ಲಿದೆ, ಅದರ ತಾಯಿ ಬೇರನ್ನು ಹುಡುಕಬೇಕು; ಗಲಭೆಯಲ್ಲಿ ಯುವಕರ ಭಾಗಿ ಆತಂಕಕಾರಿ: ವಿನಯ್ ಗುರೂಜಿ

ಈದ್ ಮಿಲಾದ್ ಮೆರವಣಿಗೆ ವೇಳೆ ಕೋಮು ಗಲಾಟೆ ನಡೆದಿರುವ ಶಿವಮೊಗ್ಗ ನಗರದ ಹೊರವಲಯದ ಶಾಂತಿನಗರದ ರಾಗಿಗುಡ್ಡದಲ್ಲಿ ಪರಿಸ್ಥಿತಿ ಪೊಲೀಸರ ಬಿಗಿ ಭದ್ರತೆ ನಡುವೆ ಬೂದಿ ಮುಚ್ಚಿದ ಕೆಂಡದಂತಿದೆ.
ವಿನಯ್ ಗುರೂಜಿ
ವಿನಯ್ ಗುರೂಜಿ

ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಕೋಮು ಗಲಾಟೆ ನಡೆದಿರುವ ಶಿವಮೊಗ್ಗ ನಗರದ ಹೊರವಲಯದ ಶಾಂತಿನಗರದ ರಾಗಿಗುಡ್ಡದಲ್ಲಿ ಪರಿಸ್ಥಿತಿ ಪೊಲೀಸರ ಬಿಗಿ ಭದ್ರತೆ ನಡುವೆ ಬೂದಿ ಮುಚ್ಚಿದ ಕೆಂಡದಂತಿದೆ.

ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಮಹಾತ್ಮ ಗಾಂಧಿ ಪಾರ್ಕ್‌ನಲ್ಲಿ ನಿನ್ನೆ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ನೇತೃತ್ವದಲ್ಲಿ ಸೌಹಾರ್ದ ಸಭೆ ನಡೆಯಿತು. ಶಾಂತಿಗಾಗಿ ನಡೆದ ಸೌಹಾರ್ದ ಸಭೆಯಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಸರ್ವ ಧರ್ಮಗಳ ಮುಖಂಡರು ಭಾಗಿಯಾಗಿದ್ದರು. 

ಈ ವೇಳೆ ನಗರದಲ್ಲಿ ಶಾಂತಿ ನೆಲೆಸಲು ಗಾಂಧಿ ಪ್ರತಿಮೆ ಮುಂದೆ ಸೌಹಾರ್ದಕ್ಕಾಗಿ ಸಂಕಲ್ಪ ಕೈಗೊಳ್ಳಲಾಯಿತು. ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ, ಮೌಲಾನಿ ಅಬ್ದುಲ್ ಲತೀಫ್ ಮುಂತಾದ ಸರ್ವ ಧರ್ಮಗಳ ಮುಖಂಡರು ಭಾಗಿಯಾಗಿದ್ದರು.

ಸೌಹಾರ್ದ ಸಭೆಯ ಬಳಿಕ ಮಾತನಾಡಿದ ವಿನಯ್ ಗುರೂಜಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸರ ಮೇಲೆ ನಿನ್ನೆ ಭಾನುವಾರ ಕಲ್ಲು ತೂರಿದ್ದಾರೆ. ಮನೆ ಮಠ ಬಿಟ್ಟು, ಹಬ್ಬ ಬಿಟ್ಟು ಕೆಲಸ ಮಾಡುತ್ತಾರೆ. ರಜೆ ಹಾಕದೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸುತ್ತಾರೆ. ಜನ ಕಾನೂನು ವಿರುದ್ಧವೇ ಹೋಗುತ್ತಾರೆ ಅಂದ್ರೆ ಯಾವ ಮಟ್ಟಿಗೆ ಅವರು ಬಂಡೆದ್ದು ಹೋಗಿದ್ದಾರೆ ನೋಡಿ. ಕಾನೂನು ಕಾಯುವವರಿಗೆ ಬೆಲೆ ಇಲ್ಲ ಅಂದರೆ ಪ್ರಜಾಪ್ರಭುತ್ವ ಎಲ್ಲಿಗೆ ಹೋಗಿ ಮುಟ್ಟಿದೆ ಎಂದು ಆತಂಕ ವ್ತಕ್ತಪಡಿಸಿದರು.

ಕಾಲೇಜು ವಿದ್ಯಾರ್ಥಿಗಳ ಮೇಲೆ ಕಣ್ಣಿಡಬೇಕು. ತಂದೆ ತಾಯಿ ಮಕ್ಕಳ ಮೇಲೆ ಕಾಳಜಿ ವಹಿಸಬೇಕು. ಪ್ರತಿ ಧರ್ಮದವರೂ ಶಿವಮೊಗ್ಗದಲ್ಲಿ ಬಾಳುತ್ತಿದ್ದಾರೆ. ನನ್ನ ಆಶ್ರಮದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಅಂತ ಭೇದಭಾವ ಇಲ್ಲ. ಶಾಂತಿ ಹಾಳಾಗುತ್ತಿರುವ ಮೂಲ ಎಲ್ಲಿದೆ, ಇದರ ತಾಯಿ ಬೇರನ್ನು ಹುಡುಕಬೇಕು. ಶಿವಮೊಗ್ಗದ ಗಲಾಟೆಯಲ್ಲಿ 15 ರಿಂದ 20 ವರ್ಷದ ಯುವಕರು ಭಾಗಿಯಾಗುತ್ತಾರೆ. ಇದು ಆತಂಕಕಾರಿಯಾಗಿದೆ ಎಂದರು.

24 ಎಫ್ಐಆರ್, 60 ಆರೋಪಿಗಳ ಬಂಧನ: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣ ಸಂಬಂಧ ಈವರೆಗೂ 24 ಎಫ್ಐಆರ್ ದಾಖಲಿಸಲಾಗಿದೆ. ಈವರೆಗೆ 60 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಕೆಲ ಆರೋಪಿಗಳನ್ನು ಚಿತ್ರದುರ್ಗ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. ಬಂಧಿತರಿಂದ 1 ಕಾರು, 1 ತ್ರಿಚಕ್ರ ವಾಹನ, 2 ಬೈಕ್ ಜಪ್ತಿ ಮಾಡಿದ್ದೇವೆ. ಗಲಾಟೆ ವೇಳೆ ಕಲ್ಲೆಸೆತದಿಂದ 7 ಮನೆಗಳ ಗಾಜು ಪುಡಿಪುಡಿಯಾಗಿವೆ. 144 ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯುತ್ತಿಲ್ಲ ಎಂದು ಶಿವಮೊಗ್ಗದಲ್ಲಿ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್‌ ಹೇಳಿದ್ದಾರೆ.

ಅಪಾರ ಹಾನಿ, ಹಿಂದೂ ಮನೆಗಳೇ ಟಾರ್ಗೆಟ್: ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಶಿವಮೊಗ್ಗ ರಾಗಿಗುಡ್ಡ ಪ್ರದೇಶದ 8ನೇ ಕ್ರಾಸ್ ನಲ್ಲಿರುವ ಮನೆಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಕಿಟಕಿ ಬಾಗಿಲು ಗ್ಲಾಸ್ ಗಳು ಚೂರುಚೂರಾಗಿವೆ. ಏರಿಯಾದ ನಿವಾಸಿಗಳು ಭಯಭೀತರಾಗಿದ್ದು ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಹೊರಗಡೆ ಬರಲು ಹೆದರುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com