ಬೆಂಗಳೂರಿನ ಜನರ ಸಮಯ ರಸ್ತೆಗಳಲ್ಲಿ ವ್ಯರ್ಥವಾಗಲು ನಮ್ಮ ಸ‌ರ್ಕಾರ ಬಿಡಲ್ಲ: 100 ದಿನಗಳಲ್ಲಿ ಸಮಸ್ಯೆಗೆ ಪರಿಹಾರ; ಡಿ.ಕೆ ಶಿವಕುಮಾರ್

ಮುಂದಿನ 100 ದಿನಗಳಲ್ಲಿ ಹೊರ ವರ್ತುಲ ರಸ್ತೆ (ಒಆರ್‌ಆರ್) ಟ್ರಾಫಿಕ್ ಸಮಸ್ಯೆ ಪರಿಹರಿಸಲು ಯೋಜನೆ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಶನಿವಾರ ಕಾರ್ಪೊರೇಟ್‌ ಸಂಸ್ಥೆಗಳಿಗೆ ಭರವಸೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಂದಿನ 100 ದಿನಗಳಲ್ಲಿ ಹೊರ ವರ್ತುಲ ರಸ್ತೆ (ಒಆರ್‌ಆರ್) ಟ್ರಾಫಿಕ್ ಸಮಸ್ಯೆ ಪರಿಹರಿಸಲು ಯೋಜನೆ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಶನಿವಾರ ಕಾರ್ಪೊರೇಟ್‌ ಸಂಸ್ಥೆಗಳಿಗೆ ಭರವಸೆ ನೀಡಿದ್ದಾರೆ.

ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಹೊರವರ್ತುಲ ರಸ್ತೆ ಕಂಪನಿಗಳು ಮತ್ತು ಸಂಘಗಳು (ಒಆರ್‌ಆರ್‌ಸಿಎ) ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 27 ರಂದು 17 ಕಿಮೀ ವ್ಯಾಪ್ತಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಟ್ರಾಫಿಕ್ ಅಡಚಣೆ ಉಂಟಾಗಿತ್ತು, ಸಹಜ ಸ್ಥಿತಿಗೆ ಮರಳಲು ಸುಮಾರು ಐದು ಗಂಟೆ ಸಮಯ ತೆಗೆದುಕೊಂಡಿತ್ತು.

ನಮ್ಮ ಸರ್ಕಾರವು ಜನರ ಸಮಯವನ್ನು ರಸ್ತೆಗಳಲ್ಲಿ ವ್ಯರ್ಥ ಮಾಡಲು ಬಿಡುವುದಿಲ್ಲ. ನಗರದ ಆದಾಯದ ಐದನೇ ಒಂದು ಭಾಗವು ಹೊರ ವರ್ತುಲ ರಸ್ತೆಯ ಕೈಗಾರಿಕೆಗಳಿಂದ ಬರುತ್ತದೆ ಮತ್ತು ಅವುಗಳ ಪ್ರಾಮುಖ್ಯತೆಯ ಬಗ್ಗೆ ನಮಗೆ ತಿಳಿದಿದೆ. ನಿಮಗೆ, ನಿಮ್ಮ ನೌಕರರಿಗೆ ಮತ್ತಿ ಅಲ್ಲಿನ  ನಿವಾಸಿಗಳಿಗೆ ಯಾವುದೇ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಮಹದೇವಪುರ ವಲಯ ಒಆರ್‌ಆರ್‌ನಿಂದ ಭೋಗನಹಳ್ಳಿ, ಗುಂಜೂರು ಮತ್ತು ವರ್ತೂರು ಮೂಲಕ ಹೊಸ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್)  ಸಂಪರ್ಕಿಸಲು ಸುಮಾರು 5.6 ಕಿಮೀ ಉದ್ದದ 45 ಮೀಟರ್ ಅಗಲದ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಈ ರಸ್ತೆಯ 4 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದಿರುವ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಜಾಗ ಪಡೆಯಬೇಕಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡು ತ್ವರಿತವಾಗಿ ಕೆಲಸ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ರಾಜಕಾಲುವೆಗಳ ಒತ್ತುವರಿ ತೆರವು ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸ್ವತಂತ್ರರು. ಇದರಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ. ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸಿಲ್ಲ. ಆದ್ಯತೆ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ,'' ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಈಗಾಗಲೇ ಆರರಿಂದ ಎಂಟು ಅಧಿಕ ಟ್ರಾಫಿಕ್ ವಲಯಗಳನ್ನು ಗುರುತಿಸಲಾಗಿದ್ದು, ಟ್ರಾಫಿಕ್ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸಲಾಗುವುದು ಎಂದು ಅವರು ಹೇಳಿದರು. ಇನ್ನು ಮೂರು ತಿಂಗಳಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ, ಸಂಚಾರ ದಟ್ಟಣೆ ಉಂಟು ಮಾಡುತ್ತಿರುವ ಅನಧಿಕೃತ ಅಂಗಡಿಗಳನ್ನು ಗುರುತಿಸಿ ತೆರವುಗೊಳಿಸಲಾಗುವುದು.

ಮುಂದಿನ ತಿಂಗಳಾಂತ್ಯದೊಳಗೆ ರಸ್ತೆ ಗುಂಡಿಗಳ ದುರಸ್ತಿಗೆ ಸೂಚಿಸಿದ್ದೇನೆ. ರಸ್ತೆ ಗುಂಡಿಗಳ ಕುರಿತಂತೆ ದೂರು ಸಲ್ಲಿಸಲು ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿದೆ. ಸಂಚಾರಿ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ಒಟ್ಟಾಗಿ ಗುಂಡಿಗಳನ್ನು ಮುಚ್ಚಲಿದ್ದಾರೆ. ಇದಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮೊದಲು, ಬೆಂಗಳೂರು ಪೊಲೀಸ್ ಮುಖ್ಯಸ್ಥ ಬಿ ದಯಾನಂದ್ ಅವರು ಕಾರ್ಪೊರೇಟ್‌ಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಪೊಲೀಸರು 17 ಕಿಮೀ ವ್ಯಾಪ್ತಿಯಲ್ಲಿ ವಾಹನಗಳನ್ನು 'ಟೋವಿಂಗ್' ಪರಿಚಯಿಸಲಿದ್ದಾರೆ ಮತ್ತು ಪೀಕ್ ಅವರ್‌ಗಳಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸುವುದಾಗಿ ತಿಳಿಸಿದರು. ತಮ್ಮ ವೈಯಕ್ತಿಕ ದೃಷ್ಟಿಯಲ್ಲಿ ಮೇಲ್ಸೇತುವೆಗಳು ಪರಿಹಾರವಲ್ಲ ಎಂದು ಅವರು ಹೇಳಿದರು .    

ನಗರದ ಸಾಮರ್ಥ್ಯಕ್ಕೆ ಅನುಗುಣವಾಗಿ ತೆರಿಗೆ ಸಂಗ್ರಹವಾಗದಿರುವ ಬಗ್ಗೆ ನನಗೆ ಅಸಮಾಧಾನವಿದೆ. ಸಾರ್ವಜನಿಕರು ಹಾಗೂ ಉದ್ದಿಮೆದಾರರು ತಮ್ಮ ಆಸ್ತಿಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕು. ಐಟಿ ಕಂಪೆನಿಗಳು ಸೇರಿದಂತೆ ಇತರೆ ಉದ್ದಿಮೆಗಳ ಮಾಲೀಕರು ತಮ್ಮ ಸಿಎಸ್‌ಆರ್‌ ಹಣವನ್ನು ಗ್ರಾಮೀಣ ಭಾಗದ ಶಿಕ್ಷಣಕ್ಕೆ ವ್ಯಯಿಸಬೇಕು. ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com