ಮೈಸೂರು: ಅಕ್ಟೋಬರ್ 13ರಂದು ಚಾಮುಂಡಿ ಬೆಟ್ಟದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದ ಮಹಿಷಾ ದಸರಾ ಮತ್ತು ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮಗಳನ್ನು ನಡೆಸಲು ಮೈಸೂರು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ನಗರ ಪೊಲೀಸ್ ಕಮಿಷನರ್ ಬಿ ರಮೇಶ್ ಅವರು ಈ ಸಂಬಂಧ ಮಾತನಾಡಿದ್ದು, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿಲ್ಲ ಎಂದು ಹೇಳಿದ್ದಾರೆ.
ಅಕ್ಟೋಬರ್ 13ರಂದು ಮಹಿಷಾ ದಸರಾ ಆಚರಣೆಗೆ ಅನುಮತಿ ನೀಡುವಂತೆ ಮಹಿಷಾ ದಸರಾ ಆಚರಣಾ ಸಮಿತಿ ಅಧ್ಯಕ್ಷ ಆಯುಷ್ಮಾನ್ ಪುರುಷೋತ್ತಮ್ ಮೈಸೂರು ಪೊಲೀಸರನ್ನು ಕೋರಿದ್ದರು. ಅಂದು ಬೆಳಗ್ಗೆ 9.30ಕ್ಕೆ ಮಹಿಷಾನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ನಂತರ ಚಾಮುಂಡಿ ಬೆಟ್ಟದ ತಪ್ಪಿನ ಮುಖ್ಯದ್ವಾರ ತಾವರೆಕಟ್ಟೆ ಬಳಿಯಿಂದ ರಸ್ತೆ ಮೂಲಕ ಮೆರವಣಿಗೆ ಮಾಡಿ ಪುರುಭವನದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮವನ್ನು ಸಮಿತಿ ಹಾಕಿಕೊಂಡಿತ್ತು.
ಇನ್ನು ಮಹಿಷಾ ದಸರಾ ಆಚರಣೆಯನ್ನು ವಿರೋಧಿಸಿ ಬಿಜೆಪಿ ಅಕ್ಟೋಬರ್ 13ರ ಬೆಳಗ್ಗೆ 8 ಗಂಟೆಗೆ ಚಲೋ ಚಾಮುಂಡಿ ಬೆಟ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹಾಗೂ ರಸ್ತೆ ಮೂಲಕ ತೆರಳುವುದಕ್ಕೆ ಅನುಮತಿ ನೀಡುವಂತೆ ಕೃಷ್ಣರಾಜ ಕ್ಷೇತ್ರದ ಶಾಸಕ ಟಿಎಸ್ ಶ್ರೀವತ್ಸ ಮನವಿ ಮಾಡಿದ್ದರು.
Advertisement