ತಲಕಾವೇರಿ 'ತೀರ್ಥೋದ್ಭವ'ಕ್ಕೆ ಕ್ಷಣಗಣನೆ: ಕೌತುಕ ತುಂಬಿಕೊಳ್ಳಲು ಜನರಲ್ಲಿ ಕಾತರ

ಕಾವೇರಿಯ ಉಗಮ ಸ್ಥಾನ ತಲಕಾವೇರಿಯ ಕುಂಡಿಕೆಯಲ್ಲಿ ಮೊಗೆದಷ್ಟು ನೀರು ಉತ್ಪತ್ತಿಯಾಗುತ್ತಿರುವುದು ವಿಸ್ಮಯಕಾರಿಯಾಗಿದ್ದು, ಈ ಜೀವಜಲವನ್ನು ಕೊಡಗಿನವರು ಸೇರಿದಂತೆ ಸಹಸ್ರಾರು ಮಂದಿ ಭಕ್ತಿಯಿಂದ ಪೂಜಿಸುತ್ತಾರೆ. ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ.
ತಲಕಾವೇರಿ ತಿರ್ಥೋದ್ಭವ (ಸಂಗ್ರಹ ಚಿತ್ರ)
ತಲಕಾವೇರಿ ತಿರ್ಥೋದ್ಭವ (ಸಂಗ್ರಹ ಚಿತ್ರ)
Updated on

ಕೊಡಗು: ಕಾವೇರಿಯ ಉಗಮ ಸ್ಥಾನ ತಲಕಾವೇರಿಯ ಕುಂಡಿಕೆಯಲ್ಲಿ ಮೊಗೆದಷ್ಟು ನೀರು ಉತ್ಪತ್ತಿಯಾಗುತ್ತಿರುವುದು ವಿಸ್ಮಯಕಾರಿಯಾಗಿದ್ದು, ಈ ಜೀವಜಲವನ್ನು ಕೊಡಗಿನವರು ಸೇರಿದಂತೆ ಸಹಸ್ರಾರು ಮಂದಿ ಭಕ್ತಿಯಿಂದ ಪೂಜಿಸುತ್ತಾರೆ. ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ.

ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ತೀರ್ಥೋದ್ಭವ ನಡೆಯಲಿದೆ. ಜೀವ ನದಿಯನ್ನ ಕಣ್ತುಂಬಿಸಿಕೊಳ್ಳಲು ಸಹಸ್ರಾರು ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.ಇಂದು ರಾತ್ರಿ 1 ಗಂಟೆ 27 ನಿಮಿಷಕ್ಕೆ ತುಲಾ ಲಘ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಲಿದೆ. ಪ್ರಧಾನ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಮಧ್ಯ ರಾತ್ರಿ ತೀರ್ಥೋದ್ಭವವಾಗುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ಬೆಳಗ್ಗೆಯಿಂದಲೇ ನಿತ್ಯ ಪೂಜಾಕರ್ಮಗಳು ನಡೆಯುತ್ತದೆ. ಸಂಜೆ 4 ಗಂಟೆಯ ಬಳಿಕ ಬ್ರಹ್ಮ ಕುಂಡಿಕೆ ಬಳಿಗೆ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ. ಕಲ್ಯಾಣಿಯ ಮೇಲ್ಭಾಗದಲ್ಲಿ ಭಕ್ತರಿಗೆ ಪವಿತ್ರ ತೀರ್ಥ ಹಂಚಲು ವ್ಯವಸ್ಥೆ ಮಾಡಲಾಗಿದೆ.

ವಿಸ್ಮಯಕಾರಿ ಕುಂಡಿಕೆ: ತಲಕಾವೇರಿಯಲ್ಲಿನ ಕುಂಡಿಕೆಯಲ್ಲಿ ಪ್ರತಿ ವರ್ಷ ಕಾವೇರಿ ತೀರ್ಥ ರೂಪದಲ್ಲಿದರ್ಶನ ನೀಡುತ್ತಾಳೆ ಎನ್ನುವುದು ಪುರಾತನ ಕಾಲದಿಂದಲೂ ಇರುವ ನಂಬಿಕೆ. ಈ ಸಂದರ್ಭ ಸಹಸ್ರಾರು ಭಕ್ತರು ತೀರ್ಥರೂಪಿಣಿ ಕಾವೇರಿ ತಾಯಿಯನ್ನು ಕಣ್ಣು ತುಂಬಿಕೊಳ್ಳುತ್ತಾರೆ. ಕೇವಲ ಕೊಡಗು ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ತಮಿಳುನಾಡಿನಿಂದಲೂ ಸಾಕಷ್ಟು ಭಕ್ತರು ಆಗಮಿಸಿ ಇಲ್ಲಿಂದ ತೀರ್ಥ ಕೊಂಡೊಯ್ಯುತ್ತಾರೆ. ಇಲ್ಲಿನ ಪುಟ್ಟ ಕುಂಡಿಕೆಯಲ್ಲಿನ ಕಾವೇರಿ ಜಲವನ್ನು ತೀರ್ಥವೆಂದು ನಂಬಿ ಪೂಜಿಸುವುದಲ್ಲದೆ ಮನೆಗೆ ಕೊಂಡೊಯ್ಯುತ್ತಾರೆ. ಈ ಕುಂಡಿಕೆಯನ್ನು ಭಕ್ತಿ ಭಾವದಿಂದ ಕಾಣುತ್ತಾರೆ. ನಿತ್ಯ ಇಲ್ಲಿ ಪೂಜೆ ನಡೆಯುತ್ತದೆ.

ಸಕಲ ಭದ್ರತೆ, ವ್ಯವಸ್ಥೆ: ಇಂದು ಸಂಜೆ 4 ಗಂಟೆಯ ಬಳಿಕ ಭಾಗಮಂಡಲದಿಂದ ತಲಕಾವೇರಿಗೆ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಭಕ್ತರ ಪ್ರಯಾಣಕ್ಕೆ ಉಚಿತ ಕೆಎಸ್​ಆರ್​ಟಿಸಿ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಸ್ವಾಗತಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ದೇವಸ್ಥಾನದ ಆವರಣದಲ್ಲಿ ಭಕ್ತರ ನಿಯಂತ್ರಣಕ್ಕೆ ಬ್ಯಾರಿಕೇಡ್​ಗಳನ್ನು ಹಾಕಲಾಗಿದೆ. ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು ಕಟ್ಟೆಚ್ಚರವಹಿಸಲಾಗುತ್ತದೆ. ಭದ್ರತೆಗಾಗಿ ಕೆಎಸ್​ಆರ್​ಪಿ ಮತ್ತು ಡಿಎಆರ್​ ಪೊಲೀಸರನ್ನ ನಿಯೋಜಿಸಲಾಗಿದೆ. ತಲಕಾವೇರಿಗೆ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಭಕ್ತರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಲ್ಲದೆ ಈ ಬಾರಿ ತೀರ್ಥ ಕೊಂಡೊಯ್ಯಲು ಪ್ಲಾಸ್ಟಿಕ್ ಬಿಂದಿಗೆ ಬಾಟಲಿ ಡಬ್ಬಗಳನ್ನು ತರುವುದನ್ನು ನಿಷೇಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com