
ಬೆಂಗಳೂರು: ನವರಾತ್ರಿಯ ಆಯುಧ ಪೂಜೆ ಸಮಯದಲ್ಲಿ ರಾಸಾಯನಿಕಯುಕ್ತ ಬಣ್ಣ, ಅರಶಿನ-ಕುಂಕುಮವನ್ನು ಬಳಸುವುದಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ಈ ಬಗ್ಗೆ ಸಾರ್ವಜನಿಕ ವಲಯದಿಂದ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದು ಹೊಸ ಆದೇಶವೇನಲ್ಲ, ಹಿಂದಿನ ಬಿಜೆಪಿ ಸರ್ಕಾರವೇ ಆದೇಶ ಹೊರಡಿಸಿದ್ದು ಮತ್ತು ಯಾವ ಕಾರಣಕ್ಕೆ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.
ಇಲ್ಲಿ ಚರ್ಚೆಯಾಗುತ್ತಿರುವ ಮತ್ತೊಂದು ವಿಷಯ ತಮಿಳು ನಾಡಿನ ಡಿಎಂಕೆ ಸರ್ಕಾರ ಕೂಡ ಆಯುಧ ಪೂಜೆ ಸಮಯದಲ್ಲಿ ಇಂತಹದ್ದೇ ಆದೇಶ ಹೊರಡಿಸಿದೆ. ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ವಿರುದ್ಧವಾಗಿ ಸೆಣಸಾಡುತ್ತಿರುವ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಮತ್ತು ಡಿಎಂಕೆ ಇಂತಹ ಆದೇಶ ಹೊರಡಿಸಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ ಎನ್ನುತ್ತಾರೆ ಬೆಂಗಳೂರು ದಕ್ಷಿಣ ಕೇಂದ್ರದ ಸಂಸದ ತೇಜಸ್ವಿ ಸೂರ್ಯ.
ಕಾಂಗ್ರೆಸ್-ಸಿದ್ದರಾಮಯ್ಯ ಸರ್ಕಾರ ಹೊರಡಿಸಿರುವ ಈ ರೀತಿಯ ಸರ್ಕಾರ ಆದೇಶಗಳು ಏನೂ ಅರಿಯದ ಮುಗ್ಧತೆಯ ರೀತಿ ಇಲ್ಲ, ಇದರ ಹಿಂದೆ ದುರುದ್ದೇಶವಿದ್ದಂತೆ ಕಂಡುಬರುತ್ತಿದೆ. ಈ ಹಿಂದೆ ಹಲವಾರು ಉದಾಹರಣೆಗಳು ಅವರ ರಾಜಕೀಯದ ಬಹಿರಂಗ ಹಿಂದೂ ವಿರೋಧಿ ಸ್ವಭಾವವನ್ನು ಬಹಿರಂಗಪಡಿಸುತ್ತವೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಇಂಡಿಯಾ ಮೈತ್ರಿಯಲ್ಲಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯವಿರಬಹುದು, ಆದರೆ ಈ ನೆಲದ ಸಂಸ್ಕೃತಿ ದ್ವೇಷಿಸುವ ವಿಷಯದಲ್ಲಿ ಅವರು ಒಂದು ಎಂದು ಪ್ರತಿಪಾದಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರೂ, ಆಯುಧ ಪೂಜೆಯ ವೇಳೆ ದೇವರ ಮೂರ್ತಿ ಅಥವಾ ವಿಗ್ರಹಗಳ ಬಳಕೆಯನ್ನು ನಿಷೇಧಿಸುವ ಅದರ ಮೈತ್ರಿ ಪಾಲುದಾರ ಡಿಎಂಕೆ ಸರ್ಕಾರ ಸುತ್ತೋಲೆಯನ್ನು ಹಿಂತೆಗೆದುಕೊಂಡಿಲ್ಲ ಎಂದು ತೇಜಸ್ವಿ ಸೂರ್ಯ ಟೀಕಿಸಿದ್ದಾರೆ.
Advertisement