
ಬೆಂಗಳೂರು: ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆ ದಸರಾ ಹಬ್ಬದ ಸಂಭ್ರಮದ ಮಧ್ಯೆ ನಡೆದುಹೋಗಿದೆ. ಕೊರಳಲ್ಲಿ ಧರಿಸಿದ ಚಿನ್ನದ ಸರದಲ್ಲಿ ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ರೈತನ ಇಮೇಜ್ ಹೊತ್ತುಕೊಂಡು ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ನನ್ನು ಅರಣ್ಯಾಧಿಕಾರಿ ಮತ್ತು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಿಂದ ಸಂತೋಷ್ ಅವರನ್ನು ಕರೆತಂದಿರುವ ರಾಮೋಹಳ್ಳಿ ಅರಣ್ಯಾಧಿಕಾರಿಗಳು ಸದ್ಯ ಪೊಲೀಸ್ ಕಸ್ಟಡಿಯಲ್ಲಿ ತೀವ್ರ ವಿಚಾರಣೆ ಎದುರಿಸುತ್ತಿದ್ದಾರೆ. ಸದ್ಯ ವರ್ತೂರು ಸಂತೋಷ್ ಅವರ ವೈದ್ಯಕೀಯ ಪರೀಕ್ಷೆ ಮುಕ್ತಾಯವಾಗಿದ್ದು, ಇನ್ನು ಸದ್ಯದಲ್ಲಿಯೇ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಹಾಜರುಪಡಿಸಲಿದ್ದಾರೆ.
ಬಂಧನವಾಗಿದ್ದು ಹೇಗೆ?: ಅರಣ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಸಂತೋಷ್ ಅವರ ಬಂಧನವಾಗಿದ್ದು, ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ನ್ನು ಅವರು ಹಾಕಿಕೊಂಡಿದ್ದರು. ಈ ಕುರಿತು ಶರತ್ ಎನ್ನುವವರು ದೂರು ನೀಡಿದ್ದರು. ಈ ಹಿನ್ನೆಲೆ ವರ್ತೂರು ಸಂತೋಷ್ ನನ್ನ ಬಂಧಿಸಿ, ಸದ್ಯ ಅರಣ್ಯಾಧಿಕಾರಿಗಳಿಂದ ಸಂತೋಷ್ ಅವರ ವಿಚಾರಣೆ ನಡೆಯುತ್ತಿದೆ.
ಈ ಕುರಿತು ದೂರು ನೀಡಿರುವ ಶರತ್ ಮಾಧ್ಯಮಗಳ ಜೊತೆ ಮಾತನಾಡಿ, ಎರಡು ದಿನದ ಹಿಂದೆ ನಾನು ದೂರು ಕೊಟ್ಟಿದ್ದೆ. ಹುಲಿಯುಗುರು ಇರುವ ಪದಕವನ್ನು ಅವರು ಧರಿಸಿದ್ದರು. ಇದು ವನ್ಯಜೀವಿ ಕಾಯ್ದೆಯ ಪ್ರಕಾರ ತಪ್ಪು. ಸೆಲೆಬ್ರಿಟಿಗಳು ನಿಯಮ ಪಾಲನೆ ಮಾಡಬೇಕು. ಈ ರೀತಿ ಹುಲಿಯುಗುರಿನ ಪದಕ ಧರಿಸುವುದು ತಪ್ಪು. ಅದು ಒರಿಜಿನಲ್ಲೋ ಅಥವಾ ಡೂಪ್ಲಿಕೇಟ್ ಅನ್ನೋದು ಫಾರೆನ್ಸಿಕ್ ನವರು ಡಿಸೈಡ್ ಮಾಡಬೇಕು ಎಂದರು.
ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಸಂತೋಷ್?: ವಿಚಾರಣೆ ವೇಳೆ ವರ್ತೂರ್ ಸಂತೋಷ್ ಹಲವು ಮಾಹಿತಿಗಳನ್ನು ಅರಣ್ಯ ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎನ್ನುವ ಮಾಹಿತಿ ಇದೆ. ತನ್ನ ಬಳಿ ಇರುವುದು ಒರಿಜಿನಲ್ ಹುಲಿ ಉಗುರು, ನಾನು ವ್ಯಕ್ತಿಯೊಬ್ಬನಿಂದ ಹುಲಿ ಉಗುರು ಖರೀದಿಸಿದ್ದೆ ಎಂದು ಅವರು ಅರಣ್ಯಾಧಿಕಾರಿಗಳ ಎದುರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಹುಲಿ ಉಗುರಿನ ಮೂಲವನ್ನು ಅರಣ್ಯಾಧಿಕಾರಿಗಳು ಹುಡುಕುತ್ತಿದ್ದಾರೆ.
ವನ್ಯಜೀವಿ ಕಾಯ್ದೆ ಏನು ಹೇಳುತ್ತದೆ?: ಸಂತೋಷ್ ಅವರು ಯಾರಿಂದ ಹುಲಿ ಉಗುರು ಪಡೆದುಕೊಂಡರು ಎನ್ನುವ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಒಂದು ವೇಳೆ ಹುಲಿ ಉಗುರು ಒರಿಜಿನಲ್ ಆಗಿದ್ದು, ತಪ್ಪು ಮಾಡಿರುವುದು ಸಾಬೀತಾದರೆ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ. ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಅವರನ್ನು ಹಾಜರುಪಡಿಸಲಾಗುತ್ತದೆ. ಅವರ ಬಳಿ ಇರುವುದು ಒರಿಜನ್ ಹುಲಿ ಉಗುರು ಎಂದು ಕೋರ್ಟ್ ನಲ್ಲಿ ಸಾಬೀತು ಆದರೆ, ಮೂರರಿಂದ ಏಳು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಸಂತೋಷ್ ಅವರ ಬಂಧನ ಆಗಿದೆ. ಆರೋಪ ಸಾಬೀತಾದರೆ 3ರಿಂದ 7 ವರ್ಷಗಳವರೆಗೆ ಶಿಕ್ಷೆ ಆಗುತ್ತದೆ. 10,000 ರಿಂದ 25,000ದವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ.
ವರ್ತೂರು ಸಂತೋಷ್ ಅವರು ರೈತನಾಗಿ ಗುರುತಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಸುದ್ದಿಯಾಗುವುದುಂಟು. ಬಿಗ್ ಬಾಸ್ಗೆ ಹೋದ ಬಳಿಕ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು.
Advertisement