ಮನೋಜ್ ಕುಮಾರ್ ಮೀನಾ
ಮನೋಜ್ ಕುಮಾರ್ ಮೀನಾ

ಲೋಕಸಭೆ ಚುನಾವಣೆಗೆ ತಯಾರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆರಂಭ

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಚುನಾವಣಾ ಆಯೋಗವು ಶುಕ್ರವಾರ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಆರಂಭಿಸಿದೆ.
Published on

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಚುನಾವಣಾ ಆಯೋಗವು ಶುಕ್ರವಾರ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಆರಂಭಿಸಿದೆ. ಡಿಸೆಂಬರ್ 9ರವರೆಗೂ ಈ ಪ್ರಕ್ರಿಯೆ ಮುಂದುವರೆಯಲಿದ್ದು, ಮತದಾರರು ತಮ್ಮ ಗುರುತಿನ ಚೀಟಿಯಲ್ಲಿ ತಪ್ಪುಗಳಿದ್ದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಜನವರಿ 05 ರಂದು ಪ್ರಕಟಿಸಲಾಗುವುದು.

ಚುನಾವಣಾ ಆಯೋಗ ಹಂಚಿಕೊಂಡ  ಕರಡು ಮತದಾರರ ಪಟ್ಟಿ-2024 ಪ್ರಕಾರ, ರಾಜ್ಯದಲ್ಲಿ 2,68,02,838 (2.68 ಕೋಟಿ) ಪುರುಷರು ಮತ್ತು 2,65,69,428 (2.66 ಕೋಟಿ) ಮಹಿಳೆಯರು ಸೇರಿದಂತೆ  ಒಟ್ಟಾರೆ 5,33,77,162 ಸಾಮಾನ್ಯ ಮತದಾರರಿದ್ದಾರೆ. ಅಂತಿಮ ಮತದಾರರ ಪಟ್ಟಿ-2023 ರ ಪ್ರಕಾರ 58,282 ಮತಕೇಂದ್ರಗಳಿದ್ದವು. ಆದರೆ, 2024ರ ಕರಡು ಮತದಾನ ಪಟ್ಟಿ ಪ್ರಕಾರ ಇವುಗಳ ಸಂಖ್ಯೆ 58,834 ಆಗಿದೆ.  845 ಮತಗಟ್ಟೆಗಳನ್ನು ಸೇರಿಸಲಾಗಿದ್ದು, 293 ಮತಗಟ್ಟೆಗಳನ್ನು ವಿಲೀನಗೊಳಿಸಲಾಗಿದೆ ಮತ್ತು 552 ಮತಗಟ್ಟೆಗಳ ಸಂಖ್ಯೆ ಹೆಚ್ಚಳವಾಗಿದೆ.

ಆದ್ದರಿಂದ, ಮತದಾರರ ಪಟ್ಟಿಯಲ್ಲಿ ಹೆಸರು ಮತ್ತು  ಎಲ್ಲಾ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕೆಂದು ಜನರಲ್ಲಿ ಮನವಿ ಮಾಡಿದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ, ವಿವರಗಳಲ್ಲಿ ಯಾವುದೇ ತಪ್ಪುಗಳಿದ್ದರೆ, ಅದನ್ನು ಸರಿಪಡಿಸಲು ನಮೂನೆ 8 ನ್ನು ಬಳಸಬಹುದು ಎಂದು ತಿಳಿಸಿದರು. ಪಟ್ಟಿಯಲ್ಲಿ  ಹೆಸರಿಲ್ಲದಿದ್ದರೆ ಮತ್ತು  18 ವರ್ಷ ತುಂಬಿದ್ದರೆ, ಹೆಸರು ನೋಂದಾಯಿಸಲು ನಮೂನೆ 6 ಬಳಸಬಹುದು. ಮತದಾರರ ಸೇವಾ ಪೋರ್ಟಲ್ ಅಥವಾ ಮತದಾರರ ಸಹಾಯವಾಣಿ ಮೊಬೈಲ್ ಆ್ಯಪ್ ಮೂಲಕ ಈ ಪ್ರಕ್ರಿಯೆ ಮಾಡಬಹುದು.

ಚುನಾವಣಾ ಆಯೋಗದ ಪ್ರಕಾರ, 224 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಚುನಾವಣಾ ನೋಂದಣಿ ಅಧಿಕಾರಿಗಳು, ಸಹಾಯಕ ಮತದಾರರ ಪಟ್ಟಿ ನೋಂದಣಿ ಅಧಿಕಾರಿಗಳು ಮತ್ತು ಅವರ ಅಧಿಕಾರ ವ್ಯಾಪ್ತಿಗೆ ಬರುವ ಎಲ್ಲಾ ಮತಗಟ್ಟೆಗಳ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಹೆಸರುಗಳು ಅಥವಾ ಯಾವುದೇ ಆಕ್ಷೇಪಣೆಗಳಿದ್ದರೆ, ನಮೂನೆ 7 ರಲ್ಲಿ ಆಕ್ಷೇಪಣೆಯನ್ನು ಸಲ್ಲಿಸಬಹುದು. ಅರ್ಹ ಮತದಾರರು ಅರ್ಜಿ ಸಲ್ಲಿಸಲು ತಮ್ಮ ಮೊಬೈಲ್ ಫೋನ್‌ನಲ್ಲಿ ಮತದಾರರ ಸಹಾಯವಾಣಿ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಮೀನಾ ಹೇಳಿದರು.

ಅರ್ಜಿಗಳನ್ನು https://voterportal.eci.gov.in/ ಪೋರ್ಟಲ್‌ನಲ್ಲಿಯೂ ಸಲ್ಲಿಸಬಹುದು. ಮತದಾರರ ನೋಂದಣಿಗಾಗಿ ನವೆಂಬರ್ 18-19 ಮತ್ತು ಡಿಸೆಂಬರ್ 2-3 ರಂದು ವಿಶೇಷ ಅಭಿಯಾನವನ್ನು ನಡೆಸಲಾಗುವುದು ಎಂದು  ಅವರು ತಿಳಿಸಿದರು. 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು ಅಂದರೆ 7,06,207 ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಅತಿ ಕಡಿಮೆ ಅಂದರೆ 1,66,907 ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com